ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಕೋಡಗನ ಕೋಳಿ ನುಂಗಿತ್ತ!

ಶರೀಫರ ಈ ಪ್ರಸಿದ್ಧವಾದ ಪದ್ಯವನ್ನು, ಅದರಲ್ಲೂ ಅಶ್ವಥರು ಅದಕ್ಕೆ ಸುಂದರವಾದ ಸಂಗೀತ ನೀಡಿದ ಮೇಲೆ ಯಾರು ಕೇಳಿಲ್ಲ! ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೇಳುವಂತೆ ಹಾಡುಗಳ ಕ್ಯಾಸೆಟ್ ಹೊರಬಂದ ಕೆಲವೇದಿನಗಳಲ್ಲಿ ಮಲೆನಾಡಿನ ಸಣ್ಣ ಹುಡುಗಿ ಕೂಡ ತನ್ನ ಗೆಳತೆಯನ್ನು ಕೆಣಕಲು ಈ ಹಾಡನ್ನು ಹಾಡುತ್ತಿದ್ದಳಂತೆ. ಕೋಡಗನ ಕೋಳಿ ನುಂಗಿತ್ತ ಪದ್ಯದ ಬಗ್ಗೆ ಎನ್.ಎಸ್. ಎಲ್. ಹೀಗೆ ಹೇಳಿದ್ದಾರೆ:

"ಕೋಡಗನ ಕೋಳಿ ನುಂಗಿತ್ತ ಎಂಬ ಪ್ರಸಿದ್ಧ ಪದ ಗೋವಿಂದ ಭಟ್ಟರ, ಪರ್ಯಾಯವಾಗಿ ಯಾವುದೇ ನಿಜವಾದ ಗುರುವಿನ ಹಿರಿತನವನ್ನು ಕೀರ್ತಿಸುತ್ತದೆ. ಗುರುವಿನ ಪಾದಕ್ಕೆ ಬಿದ್ದ ಶಿಷ್ಯ ಲೌಕಿಕವಾಗಿ ಎಷ್ಟೇ ದೊಡ್ಡವನಾಗಿದ್ದರೇನು? ಅಧಿಕಾರ, ಹಣ, ಪ್ರಸಿದ್ದ್ಧಿಗಳಲ್ಲಿ ಗುರುವಿಗಿಂತ ಎಷ್ಟೇ ಎತ್ತರದಲ್ಲಿದ್ದರೇನು? ಗುರುವಿನ ಮಹಿಮೆ ಶಿಷ್ಯನ ಲೌಕಿಕ ವ್ಯಕ್ತಿತ್ವವನ್ನು ಲಕ್ಷ್ಯವಿಲ್ಲದೆ ನುಂಗಿಹಾಕಿಬಿಡುತ್ತದೆ. ಅದು ಕೋಳಿ ಕೋಡಗನನ್ನು ನುಂಗಿ ಹಾಕುವ ಹಾಗೆ, ನರ್ತಕಿಯ ಕುಣಿತವನ್ನು ಮದ್ದಳೆ ಗತಿಗೆಡಿಸಿಬಿಡುವ ಹಾಗೆ. ಬೀಸುವ ಕಲ್ಲು ಅದಕ್ಕೆ ಸಿಕ್ಕಿಸಿದ ಗೂಟವನ್ನೇ ನುಂಗಿಬಿಟ್ಟರೆ ಹೇಗೋ ಹಾಗೆ.

ಗೋವಿಂದ ಗುರುವಿನ ಪಾದ ನೋಡಲು ಎಷ್ಟು ಸಣ್ಣದು, ಎಷ್ಟು ಸಾಮಾನ್ಯ! ಆದರೆ ಅದರ ಅಡಿಯಲ್ಲಿ ತಲೆಯಿಟ್ಟ ತಮ್ಮ ಅಗಾಧ ಲೌಕಿಕ ಮೋಹವನ್ನು ಅದು ನುಂಗಿ ಹಾಕಿತಲ್ಲ! ಎಂದು ಉದ್ಗಾರ ತೆಗೆಯುತ್ತಾರೆ."
ಈ ಪದ್ಯವಿರುವದು ಹೀಗೆ:

ಕೋಡಗನ ಕೋಳಿ ನುಂಗಿತ್ತ
ಕೇಳವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಿಲೆ ನುಂಗಿತ್ತ!

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ!

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ!

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕುಟ ತಿರುವೋ ಅಣ್ಣನನ್ನೆ ಮೇಳಿ ನುಂಗಿತ್ತ!

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತ - ತಂಗಿ
ಕೋಡಗನ ಕೋಳಿ ನುಂಗಿತ್ತ!

ಕಳೆದ ಒಂದು ವಾರವನ್ನು ಈ ಪದ್ಯದ ಗೀಳಿನಲ್ಲೇ ಕಳೆಯುತ್ತಿದ್ದೇನೆ. ಪದ್ಯ ಬಾಯಿಪಾಠವಾಗಿದೆ. ಹಲವಾರು ಬಾರಿ ನನಗೆ ನಾನೇ ಇದನ್ನು ಗುಣುಗಿಕೊಂಡಿದ್ದೆನೆ. ಇದರ ಅದ್ಭುತ ಕಾವ್ಯಶಕ್ತಿಯ ಬಗ್ಗೆ, ಅಶ್ವಥರು ಇದಕ್ಕೆ ಅಸಾಧಾರಣ ಸಂಗೀತ ನೀಡಿರುವುದರ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಅದನ್ನು ಇಲ್ಲಿ ಪುನರಾವರ್ತಿಸುವದಿಲ್ಲ. ಈ ಬ್ಲಾಗನ್ನು ಬರೆದಿರುವದಕ್ಕೇಕೆಂದರೆ, ಎನ್.ಎಸ್.ಎಲ್. ಅವರ ವಿಶ್ಲೇಷಣೆ ನನ್ನ ಈ ವಾರದ ನೂರು ಮನನಗಳ ಅನುಭವಕ್ಕಿಂತ ಭಿನ್ನವಾಗಿರುವದನ್ನು ಚರ್ಚಿಸಲೆಂದು.

ಶರೀಫರೇ ಅಥವಾ ಅವರನ್ನು ಸನಿಹದಿಂದ ಬಲ್ಲವರೇ ಪದ್ಯದ ಅರ್ಥ ಎನ್.ಎಸ್.ಎಲ್. ಹೇಳಿರುವಂತೆ ಇರುವುದಾಗಿ ಹೇಳಿರಬಹುದು; ಹಾಗೆಯೇ ಅದು ಹುಟ್ಟಿರಬಹುದು. ನಾನು ಈ ವಾದಕ್ಕಿಳಿಯುತ್ತಿಲ್ಲ. ಒಂದು ಪದ್ಯವನ್ನು ಹೀಗೇ ಅರ್ಥ ಮಾಡಿಕೊಳ್ಳಬೇಕು ಎನ್ನಲು ಸಾಧ್ಯವೇ? ನನಗೆ ಅನಿಸುತ್ತಿರುವದನ್ನು ನಿಮ್ಮ ಮುಂದಿಟ್ಟಿದ್ದೇನೆ.

ನಮ್ಮ ಊಹಾ ಶಕ್ತಿಯನ್ನು ಬಿಡೆಯಿಲ್ಲದೆ ಹರಿಬಿಟ್ಟರೆ ಪ್ರತಿ ಪಂಕ್ತಿಯ ಪ್ರತಿಮೆಗಳಲ್ಲಿ, ಹಾಗೇ ಪಂಕ್ತಿಗಳನ್ನು
ಪೋಣಿಸಿರುವ ಕ್ರಮದಲ್ಲಿ ನಾವು ಒಂದು ಸಮಗ್ರವಾದ ಯೋಚನಾಲಹರಿಯನ್ನು ಗುರುತಿಸಬಹುದೇನೋ! ಹಾಗಿರಬಹುದು ಎಂದು ಯೋಚಿಸಿ ಅಜ-ಗಜ, ಒಳ್ಳು-ಒನಕೆ, ಹಗ್ಗ-ಮಗ್ಗ-ಲಾಳಿ, ಬತ್ತ-ಬಾನ ಇವುಗಳ ಸಂಬಂಧದ ಬಗ್ಗೆ ನಾನು ಚಿಂತಿಸಲೇ ಇಲ್ಲ ಎಂದೂ ಇಲ್ಲ. ಯೋಚಿಸಿದೆ. ಆದರೆ ಅವ್ಯಾವೂ ನನಗೆ ಸಮಾಧಾನ ತರಲಿಲ್ಲ. ಈ ಪದ್ಯ ನನಗರಿಯದಂತೇ ತರುವ ನಿರಾಳವಾದ ತನ್ಮಯತೆ ಮತ್ತು ಶಾಂತಿಯನ್ನು ಈ ರೀತಿಯಲ್ಲಿ ಅರ್ಥೈಸಿಸಲು ಆಗಲಿಲ್ಲ. ಪದೇ ಪದೇ ಕೊನೆಯ ಸಾಲೇ ನನ್ನೆದರು ಬರುತ್ತಿತ್ತು. ಇಂದು ನನಗೆ ಹೊಳೆದದ್ದೇನೆಂದರೆ ಹಾಡುಗನಿಗೆ ನಿರಾಳವಾಗುವದು "ನನ್ನನೆ ನುಂಗಿತ್ತ" ಆದಾಗಲೇ! ಅಂದರೆ "ನಾನು" ಎಂಬ ಅಹಂಭಾವ ಹಾಡುಗನಿಂದ ಮಾಯವಾದಾಗ. ಅದು ಸಾಧ್ಯವಾದದ್ದು ಗುರುವಿನ ಕೃಪೆಯಿಂದ.

ಹಾಗಾದರೆ ಎನ್.ಎಸ್.ಎಲ್. ಹೇಳಿರುವದಕ್ಕೂ ನನಗೆ ಹೊಳೆದದ್ದಕ್ಕೂ ವ್ಯತ್ಯಾಸವಿದೆಯೆ ಎಂದು ಕೇಳಬಹುದು. ಇದೆ. ಅದೇನೆಂದರೆ ಈ ಪ್ರಕ್ರಿಯೆ ಕೋಳಿ ಕೋಡಗನನ್ನು ನುಂಗಿ ಹಾಕಿದಂತಲ್ಲ! ಅದು ಹೀಗಿರಲೂ ಸಾಕು: ನಾವು ನಮ್ಮ ಯೋಚನಾಶಕ್ತಿಯಿಂದ, ಹೊರಗಿನಿಂದ ಭಿನ್ನ ಭಿನ್ನವಾಗಿ ಕಾಣುವ ವಸ್ತುಗಳ ನಡುವಿನ ಸಂಬಂಧ ತಿಳಿದು ಅವುಗಳನ್ನು ಸಮಗ್ರವಾಗಿ ನೋಡಲು ಕಲಿಯಲೂಬಹುದು, ಆದರೆ, ನಮ್ಮ ಅಹಂಭಾವವವನ್ನು ಕಳೆದುಕೊಂಡು ಮಹತ್ತರವಾದ ಜ್ಞಾನವನ್ನು ಸಂಪಾದಿಸಲು ಗುರುವಿನ ಪಾದವೇ ದಾರಿ. ಅಂದರೆ, ನಾವು ಕಷ್ಟಪಟ್ಟು ಲೋಕಜ್ಞಾನವನ್ನು ಪಡೆಯಬಹುದು ಆದರೆ ಮುಕ್ತಿ ನೀಡುವಂತಹ ಸತ್ಯದ ಜ್ಞಾನ ಪಡೆಯಲು ಗುರುವಿಗೆ ಶರಣೆನ್ನಬೇಕು. ನನ್ನನ್ನು ನುಂಗುವಂತಹ ಗುರುಗಳ ಸಂಪರ್ಕವಿಲ್ಲದೆ, "ನಾನು" ಈಗಲೂ ಇರುವುದರಿಂದ ಅನಿಸಿದ್ದನ್ನು ಬರೆದಿದ್ದೇನೆ. ನಿಮ್ಮ ಅನಿಸಿಕೆಗಳ ಬಗ್ಗೆ ದಯವಿಟ್ಟು ತಿಳಿಸಿ.