ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಬೆನೆಗಲ್-ರ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು

ಸುದರ್ಶನರು ತಮ್ಮ ಬ್ಲಾಗನಲ್ಲಿ ಬೆನೆಗಲ್ ಅವರ ಬಗ್ಗೆ ಬರೆದಿದ್ದಾರೆ. ನೇರವಾಗಿ ದೂಷಿಸದಿದ್ದರೂ, ಅವರಿಗೆ ಏನೋ ಅಸಮಾಧಾನವಿದೆಯೆಂದು ಅನಿಸಿತು. ಅವರ ಬ್ಲಾಗಿಗೆ ಪ್ರತಿಕ್ರಯಿಸಿದ ಶಿವು ಅವರು ತಮ್ಮ ಅಸಮಾಧಾನವನ್ನು ಜೋರಾಗೆ ತೋಡಿಕೊಂಡಿದ್ದಾರೆ. ಯಾರಿಗೆ (ಬೆನೆಗಲ್ ಹಿಡಿದು) ಏನೇ ಅನಿಸಲಿ ತಮಗಂತೂ ತಮಗೆ ಸಂವೇದನಾಶೀಲನೆನ್ನಿಸುವ ಬೆನೆಗಲ್ ಬೇಕಾಗಿದೆ ಎಂದು ಹೇಳಿದ್ದಾರೆ. ಶಿವು ಮತ್ತು ಸುದರ್ಶನ್ ಇಬ್ಬರೂ ಸೂಕ್ಷ್ಮರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಂವೇದನೆ ಎಂದರೆ ಏನು ಎಂಬುದನ್ನು ಅರಿತಿದ್ದಾರೆಯೆ ಎಂಬ ಪ್ರಶ್ನೆ ನನ್ನೆದುರು ಬಂದಿದೆ. ಬರೀ ನಮ್ಮಿಂದಲೇ ನಾವು ಸಂವೇದನಾಶೀಲರಾಗಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ, ಪ್ರಸ್ತುತದ ಪ್ರವಾಹದ ದಿಕ್ಕಿಗೆ ಮತ್ತು ನಮ್ಮ ಸುತ್ತಲಿರುವ ಜನರು, ಪ್ರಾಣಿಗಳು, ಮತ್ತು ಪರಿಸರಕ್ಕೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎಂಬುದರಲ್ಲಿ ಅಡಗಿದೆ ನಮ್ಮ ಸಂವೇದನೆ. ನಮ್ಮ ಪ್ರತಿಕ್ರಿಯೆಗಳು ಜೀವನದ ಬಗೆಗಿನ ಖಚಿತವಾದ ಧೋರಣೆಯಿಂದ ಪ್ರೇರಿತವಾಗಿರದಿದ್ದರೆ, ಸಂವೇದನಾಶೀಲರಾಗುವ ಮಾರ್ಗ ಸುಲಭವಾಗಬಹುದು.

ಸಿನೇಮಾ ಮೊದಲು ಕಥನದ ಮಾಧ್ಯಮ. ನಾವು ಇದನ್ನು ಅರಿಯಬೇಕು. ದೂರದರ್ಶನ ಸಾಮಾಜಿಕ ಶಿಕ್ಷಣಕ್ಕೆ ನಾಂದಿ ಕೊಡುತ್ತದೆ ಎಂದು ನಂಬಿದವರು ತಮ್ಮ ತಪ್ಪನ್ನು ಅರಿತಿರಬಹುದು. ಹಾಗೆಯೇ, ಅಂತರ್ಜಾಲವೂ ಸಂವೇದನಾಶಿಲ ಮಾರ್ಗಕ್ಕೆ ನಾಂದಿ ಕೊಡುತ್ತದೆ ಎಂದು ನಂಬಿರುವವರೂ ಇದ್ದಾರೆ. ಅವರ ನಂಬಿಕೆ ಹುಸಿಯಾಗದಿರಲಿ ಎಂದು ಆಶಿಸುತ್ತೇನೆ. ಸಿನೇಮಾ ಕಥನದ ಮಾಧ್ಯಮ. ನಾಟಕ, ಕಾದಂಬರಿಗಳು ಹೇಗೆ ಕಥನದ ಮಾಧ್ಯಮಗಳೋ ಹಾಗೆ. ಸಿನೇಮಾಕ್ಕೆ ತನ್ನದೇ ಆದ ಸವಲತ್ತುಗಳಿವೆ, ಹಾಗೆಯೇ ತನ್ನದೇ ಆದ ಕೊರತೆಗಳೂ ಇವೆ. ರಾಮಾಯಣದ ಹನುಮಂತನ ಸಾಗರೋಲ್ಲಂಘನವೇ ಆಗಲಿ, ಲಂಕಾದಹನವೇ ಆಗಲಿ ಹೇಳಲು, ಕೇಳಲು, ಬರೆಯಲು, ಓದಲು ರೋಮಾಂಚನವಾದ ಪ್ರಸಂಗಗಳು. ನಾಟಕದಲ್ಲೂ ಆ ರೋಮಾಂಚನವನ್ನು ತರಬಹುದು. ಆದರೆ, ಚಲನ ಚಿತ್ರ ಮಾಧ್ಯಮದಲ್ಲಿ ಅದೆಷ್ಟು ಕಷ್ಟ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಈ ಮಾಧ್ಯಮವನ್ನು ಹೇಗೆ ಉಪಯೋಗಿಸಿಕೊಂಡಿದೆ ಎಂಬುದರಲ್ಲೇ ಚಿತ್ರದ ಗುಣವಡಗಿದೆ.

ಮತ್ತೊಂದು ವಿಷಯ. ಪುಸ್ತಕಗಳು ಎಂಬ ಆಧಾರದ ಮೇಲೆ ನಾವು ಸಿಡ್ನಿ ಶೆಲ್ಡನ್ ಅವರ ಪುಸ್ತಕಗಳನ್ನು ಮತ್ತು ನೈಪಾಲರ ಪುಸ್ತಕಗಳನ್ನೂ ಹೋಲಿಸುವದು ಸರಿಯೆ? ಶೆಲ್ಡನ್-ರ ಜನಪ್ರಿಯತೆ ತನಗೆ ಸಿಗುವದಿಲ್ಲ ಎಂದು ಗೊತ್ತಿದ್ದೇ ನೈಪಾಲರು ಬರೆಯಲು ಶುರುಮಾಡುವದಲ್ಲವೆ? ನೈಪಾಲರನ್ನು ನಾವು ಸಾಹಿತಿಗಳಾಗಿ ವಿಮರ್ಶಿಸಬೇಕು. ಚಲನಚಿತ್ರ ಮಾಧ್ಯಮ ಕಲೆಯಾದರೆ, ತಾವು ಕಲಾಕಾರ ಎಂಬ ರೀತಿಯಲ್ಲಿ ನಡೆದುಕೊಂಡು ಬಂದ ಬೆನೆಗಲ್-ರನ್ನು ಕಲಾಕಾರರನ್ನಾಗಿ ವಿಮರ್ಶಿಸಬೇಕು. ಒಬ್ಬ ಕಲಾಕಾರನ ಗುಣ ಅವನ ಸಾಮಾಜಿಕ ಕಾಳಜಿಯಿಂದಾಗಲಿ ಅಥವ ಅವನ ಕೃತಿಗಳಲ್ಲಿ ಕಾಣಬರುವ ಕಾಳಜಿಯಿಂದಾಗಲೀ ಬರುವದಿಲ್ಲ. ಕುಮಾರ ಗಂಧರ್ವರ ಹಾಡು ಕೇಳಬೇಕಾದರೆ ನಿಮಗೆ ಯಾವ ಸಾಮಾಜಿಕ ಕಾಳಜಿ ಜಾಗ್ರತವಾಗುತ್ತದೆ? ನನಗಂತೂ ಕುಮಾರರ ವಿಶಿಷ್ಟ ಪ್ರಪಂಚಕ್ಕೆ ಪ್ರವೇಶ ದೊರಕುತ್ತದೆ. ಅದೇ ನನ್ನ ಆನಂದ. ಕಲಾಕಾರ ನಮ್ಮನ್ನು ಅವನ ವಿಶಿಷ್ಟ ಲೋಕಕ್ಕೆ ಕರೆದೊಯ್ದರೆ ಗೆದ್ದ. ಹಾಗೆಂದು ಎಲ್ಲ ಕಲಾಕೃತಿಗಳೂ ಸಾಮಾಜಿಕ ಕಾಳಜಿಯಿಂದ ಮುಕ್ತವಾದವು ಎಂದು ನಾನು ಹೇಳುತ್ತಿಲ್ಲ. ಅನೇಕ ವಿಶಿಷ್ಟ ಕೃತಿಗಳು ಸಾಮಾಜಿಕ ಕಾಳಜಿಯಿಂದಲೇ ಅಂಕುರಗೊಂಡವು ಎನ್ನುವದು ಮತ್ತು ಅನೇಕ ವಿಶಿಷ್ಟ ಕೃತಿಗಳು ನಮ್ಮಲ್ಲಿ ಸಾಮಾಜಿಕ ಕಾಳಜಿಯನ್ನು ಜಾಗೃತಗೊಳಿಸುತ್ತವೆ ಎಂಬುದು ನಿರ್ವಿವಾದ. ಕಂಬಾರರ `ಚಕೋರಿ' ಎಷ್ಟು ಕಲಾತ್ಮಕವೋ ಅಷ್ಟೇ ಯೋಚನಾ ಪ್ರಚೋದನೀಯವಾಗಿದೆ. ನಮಗೆ ಯಾವುದು ವಿಶಿಷ್ಟ? ಅದು ಸೃಷ್ಟಿಸುವ ಮನೋರಂಜಿತ ಲೋಕವೋ, ಅಧ್ಭುತವಾದ ಕಥೆಯೋ, ಉತ್ಕೃಷ್ಟವಾದ ಕಾವ್ಯಾತ್ಮಕತೆಯೋ, ಅದರಿಂದ ಬರುವ ಸಾಮಾಜಿಕ ಅರಿವೆಯೋ? ಉತ್ತರ ಪ್ರತಿಯೊಬ್ಬರಿಗೂ ಬೇರೆಯಿರಬಹುದು. ಯಾವುದೋ ಒಂದು ಅಂಶ ಉಳಿದೆಲ್ಲವುದಕ್ಕಿಂತ ಮುಖ್ಯ ಎಂಬ ನಂಬಿಕೆಯಿಂದ ನಾವು ಪ್ರತಿಕೃಯಿಸುವದು ಅನುಚಿತವಾಗಬಹುದು.

ಸಿನೇಮಾದ ಬಗ್ಗೆ ಇನ್ನೂ ಕೆಲ ಸಂಗತಿಗಳನ್ನು ಒತ್ತಿ ಹೇಳುವದು ಅವಶ್ಯ. ಮೊದಲನೆಯದಾಗಿ, ಸಿನೇಮಾ ಮಾಡುವದು ದೈಹಿಕವಾಗಿ ಶ್ರಮಪಡಿಸುವ ಕ್ರಿಯೆ, ನಾಟಕದಂತೆ. ಎರಡನೆಯದಾಗಿ ಸಿನೇಮಾ ಮಾಡಲು ಸಕ್ರಿಯರಾಗಿರುವ ದೊಡ್ಡ ತಂಡದ ಅವಶ್ಯಕತೆಯಿದೆ. ನಾಟಕಕ್ಕಿಂತ ದೊಡ್ಡ ತಂಡ ಬೇಕು. ಮೂರನೆಯದಾಗಿ, ಸಿನೇಮಾ ಮಾಡಲು ಕಡಿಮೆಯೇನಲ್ಲದ ಬಂಡವಾಳ ಬೇಕು. ನಾಟಕಕ್ಕಿಂತ ಹೆಚ್ಚು ಬೇಕು. ದೈಹಿಕ ಶ್ರಮದಲ್ಲಿ ಚಿತ್ರೀಕರಣ ಮಾಡಲು ಬೇಕಾಗುವ ಸಿದ್ಧತೆಗಳಿಂದ ಹಿಡಿದು, ಅವಶ್ಯವಿರುವ ಅಧಿಕಾರಿಗಳ ಸಹಮತಿ ಪಡೆಯುವದನ್ನೂ ಹಿಡಿದಿದ್ದೇನೆ. ಈ ಮೂರು ಅಂಶಗಳು ಸಿನೇಮಾ ಮೂಲಕ ಕಲಾತ್ಮಕತೆಯನ್ನು ಸಾಧಿಸಲು ದೊಡ್ಡ ಸವಾಲುಗಳಾಗುತ್ತವೆ ಎಂಬುದನ್ನು ನಾನು ಸಾಬೀತುಪಡಿಸಬೇಕಾಗಿಲ್ಲ ಎಂದುಕೊಂಡಿದ್ದೇನೆ. ಈ ಅಂಶಗಳನ್ನು ಗೌಣ ಮಾಡಿ ಬೆನೆಗಲ್-ರ ಬಗ್ಗೆ ನಿರ್ಧಾರಕ್ಕೆ ಬಂದರೆ ಅವರಿಗೆ ಅನ್ಯಾಯ ಎಂದು ಹೇಳಬೇಕು.

ಈಗ ಬೆನೆಗಲ್-ರ ವಿಷಯಕ್ಕೆ ಬರುತ್ತೇನೆ. ಅವರು ಹಿಂದೆ ಅತ್ಯುತ್ತಮ ಚಿತ್ರಗಳನ್ನೂ ಗಮನೀಯ ದೂರದರ್ಶನ ಧಾರಾವಾಹಿಗಳನ್ನು ಮಾಡಿರುವದು ನಿರ್ವಿವಾದ. ಆಗಿನ ಪರಿಸ್ಥಿತಿ ಹೀಗಿತ್ತು. ಬೆನೆಗಲ್ ಅವರಿಗೆ ಇನ್ನೂ ಹೆಚ್ಚು ವಯಸ್ಸಾಗಿರಲಿಲ್ಲ. ದೈಹಿಕ ಶ್ರಮ ಮಾಡುವ ಪರಿಸ್ಥಿತಿಯಲ್ಲಿದ್ದರು. ಎನ್.ಎಫ್.ಡಿ.ಸಿ. ಸುಮಾರು ಎಂಟರಿಂದ ಹದಿನಾರು ಲಕ್ಷ ರೂಪಾಯಿಗಳ ಹಣ ಕೊಡುತ್ತಿತ್ತು ಒಂದು ಚಿತ್ರ ಮಾಡಲು. ಬೆನೆಗಲ್ ಹೆಚ್ಚೇನೂ ಹೆಸರುವಾಸಿಯಾಗದ, ನಾಟಕಗಳಲ್ಲಿ ಪಳಗಿದೆ ಯುವ ನಟ ನಟಿಯರ ತಂಡ ಕಟ್ಟಿ, ಅವರಿಂದ ಚಿತ್ರಕ್ಕೆ ಬೇಕಾದ ಸಮಯ ಮತ್ತು ಗುಣಮಟ್ಟ ಎರಡನ್ನೂ ಪಡೆಯಲು ಬೇಕಾದ ಶ್ರಮ ಹಾಕುವ ಸ್ಥಿತಿಯಲ್ಲಿದ್ದರು. ಚಲನಚಿತ್ರದ ಉಳಿದ ವಿಭಾಗಗಳಲ್ಲಿ ಪಳಗಿದ, ಕಲಾತ್ಮಕ ಚಿತ್ರಗಳಲ್ಲಿ ಭಾಗವಹಿಸುವ ಇಚ್ಛೆಯಿರುವ ತಂತ್ರಜ್ಞರಿದ್ದರು. ಹೀಗಿದ್ದಾಗ ಸಿಕ್ಕ ಮಿತವಾದ ಹಣದಲ್ಲೂ ಚಿತ್ರ ಮಾಡುವದು ಸಾಧ್ಯವಿತ್ತು. ಅವರಲ್ಲದೆ, ಅನೇಕರು ಒಳ್ಳೆಯ ಚಿತ್ರಗಳನ್ನು ಮಾಡಿದರು.

ಇಂದಿನ ಪರಿಸ್ಥಿತಿಯನ್ನು ಗಮನಿಸಿ. ಸದ್ಯಕ್ಕೆ ಬೆನೆಗಲ್-ರ ವಯಸ್ಸು, ಅವರ ಇಂದಿನ ಧ್ಯೇಯಗಳನ್ನು ಮರೆಯೋಣ. ಎನ್.ಎಸ್.ಡಿ. ಯಂತಹ ನಾಟಕದ ಶಾಲೆಯಿಂದ ಹೊರಬರುವ ಪ್ರತಿಭಾನ್ವಿತರು ಸರಾಗವಾಗಿಯೇ ದೂರದರ್ಶನದ ಧಾರಾವಾಹಿಗಳಿಗೆ ಹೋಗುತ್ತಾರೆ. ಎನ್.ಎಸ್.ಡಿ.ಯಲ್ಲಿ ನಡೆಯುವ ರಾಜಕೀಯ ಹಸ್ತಕ್ಷೇಪಗಳನ್ನು ಗಮನಿಸಿದವರಿಗೆ ಈ ವಿದ್ಯಾರ್ಥಿಗಳು ಎಲ್ಲಾ ವಿಚಾರಧಾರಳಿಗೂ ನಿರ್ಲಿಪ್ತರಾಗಿದ್ದರೆ ಆಶ್ಚರ್ಯವಾಗುವದಿಲ್ಲ. ಹೀಗಾಗಿ ಪ್ರತಿಭಾನ್ವಿತ ನಟರ ತಂಡವನ್ನು ಒಟ್ಟುಹಾಕುವದು ದುಶ್ವಾರವಾಗಿದೆ. ಹೀಗೆಯೇ ಪುಣೆಯ ಸಿನೇಮಾ ಶಾಲೆಯ ವಿದ್ಯಾರ್ಥಿಗಳೂ ಮನೋರಂಜನಾ ಮಾಧ್ಯಮಕ್ಕೆ ಹೋಗುತ್ತಾರೆ. ನುರಿತ, ಸಮಯವಿರುವ, ಕಡಿಮೆ ದುಡ್ಡಿಗೆ ಕೆಲಸ ಮಾಡುವ ತಂತ್ರಜ್ಞರು ಕನಸಲ್ಲೇ ಸಿಗುವದು. ಇದೆಲ್ಲಾ ಕೇವಲ ಐ.ಟಿ. ಉತ್ತೇಜಿತ ಸಂಸ್ಕೃತಿಯ (ಅಂತಹ ಒಂದು ಸಾಮಾಜಿಕ ಘಟಕವಿದ್ದರೆ) ಪರಿಣಾಮ ಎಂದು ನಂಬಲು ಯಾವ ಆಧಾರವೂ ಇಲ್ಲ. ಕಾರವಾರದ ಕಗ್ಗು ಹಳ್ಳಿಗಳಿಗೆ ಹೋಗಿ ನೋಡಿ. ಬೆಂಗಳೂರಿಗೆ ಎಂದೂ ಹೋಗದ ಹಳ್ಳಿಗರು ಬೇರೆಯವರ ಮನೆಗೆ ಹೋಗಿ ಹಿಂದಿಯ ಧಾರವಾಹಿಗಳ ಕನ್ನಡ ಅನುರೂಪವನ್ನು ಶೃದ್ಧೆಯಿಂದ ನೋಡುತ್ತಾರೆ. ಭಾರತದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳ ಬಗ್ಗೆ ನಮಗೆ ಕಳವಳವಾಗುವದು ಸಹಜ. ಆಗಬೇಕು. ಆದರೆ ಅದಕ್ಕೆ ಸರಳವಾದ ಉತ್ತರವಿದೆ ಅಥವಾ ವಿವರಣೆಯಿದೆ ಎಂದು ನಂಬಿದರೆ, ಕಳವಳ ಪಡದೇ ಇರುವದಕ್ಕಿಂತಲೂ ಅಪಾಯಕಾರಿ.

ವಿಷಯಕ್ಕೆ ವಾಪಸಾಗೋಣ. ತಮಗೆ ಬೇಕಾದ ತಂಡವನ್ನು ಒಟ್ಟಿಹಾಕುವದು ಕಷ್ಟವಾಗಿದೆ. ಓಂ ಪುರಿ, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ ಇವರು ಎಳೆಯರಲ್ಲ. ಕೆಲವರು ಒಂದೇ ವಿಚಾರಧಾರೆಗೆ ಮಾರುಹೋದವರು. ಗೋವಿಂದ ನಿಹಲಾನಿಯವರ `ತಮಸ್'ನಲ್ಲಿ ಮಾಡಿದ ಪಾತ್ರವನ್ನು ಓಂ ಪುರಿ ಇವತ್ತು ಮಾಡಲು ಸಾಧ್ಯವೇ? ಅದಕ್ಕೆ ಬೇಕಾದ ದೈಹಿಕ ಪರಿಸ್ಥಿತಿಯಲ್ಲಿ ಇದ್ದಾರೆಯೆ? ಅವರಲ್ಲದಿದ್ದರೆ ತರುಣ ನಟರಲ್ಲಿ ತಮ್ಮ ಜೀವನದ ಒಂದೆರಡು ವರ್ಷಗಳನ್ನು ಅಂತಹ ಒಂದು ಧಾರಾವಾಹಿ ಮಾಡಲು ಪಣವಿಡುವವರು ಹೇಗೆ ಸಿಗಬೇಕು? ಹೀಗಿರುವಾಗ ನಾವು ಯಾವ ರೀತಿಯ ಚಿತ್ರಗಳನ್ನು ನಿರೀಕ್ಷಿಸಬಹುದು? ಬೆನೆಗಲ್ ಅವರು ಏಳು ವರ್ಷಗಳಾ ಹಿಂದೆ ಮಧ್ಯಪ್ರದೇಶದ ಬುಡಕಟ್ಟಿನ ಜಾಗದಲ್ಲಿ ಒಂದು ಚಿತ್ರ ಮಾಡಿದ್ದರು. ರಘುವೀರ್ ಯಾದವ್ ಕೂಡ ಇದ್ದರು ಆ ಚಿತ್ರದಲ್ಲಿ. ಸಾಮಾಜಿಕ ಕಾಳಜಿಯಿದ್ದೂ ಆ ಚಿತ್ರ ವಿಫಲವಾಗಿತ್ತು (ಜನಪ್ರಿಯತೆಯ ದೃಷ್ಟಿಯಿಂದಲ್ಲ) ಎಂಬುದನ್ನು ನೆನಪಿಡೋಣ. ಆ ಚಿತ್ರ ಮಾಡುವಾಗ ಅವರ ಅನುಭವದ ಬಗ್ಗೆ ನಮಗೇನೂ ತಿಳಿದಿಲ್ಲ. ಹಾಗಾಗಿ ಅವರು ಮೊದಲು ಮಾಡಿದ ಚಿತ್ರಗಳನ್ನು ಅವರ ಇಂದಿನ ಪರಿಸ್ಥಿತಿಯಲ್ಲಿ ನಿರೀಕ್ಷಿಸುವದು ಅಸಮ್ಮತ. ಅವರಲ್ಲಿ ಆ ಶಕ್ತಿಯಿಲ್ಲ ಎಂದಲ್ಲ. ಪರಿಸ್ಥಿತಿ ಹಾಗಿದೆ. ಅವರ `ಭಾರತ್ ಏಕ್ ಖೋಜ್'ನ ಶೀರ್ಷಿಕೆಯ ಸಂಗೀತದ ನೆನಪಿನಲ್ಲಿ, ವೇದಗಳ ಉದ್ಘೋಷಗಳನ್ನು ದೂರದರ್ಶನ ಮಾಧ್ಯಮದಲ್ಲಿ ಹಿಂದಿಯಲ್ಲಿ ಅಷ್ಟು ಸಮರ್ಪಕವಾಗಿ ನಮಗೆ ಕೊಟ್ಟಿದ್ದಕ್ಕೆ ಅವರಿಗೆ ಅಭಿನಂದಿಸುತ್ತಾ ಅವರ ಕಾರ್ಯಗಳಲ್ಲಿ ಶುಭ (ಅದು ಇಂಥದೇ ರೂಪದಲ್ಲಿರಲಿ ಎಂದು ಬಯಸದೆ) ಬಯಸೋಣ. ಸಂವೇದನಾಶೀಲರಾಗಲು ಪ್ರಯತ್ನಿಸೋಣ!