ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಒಣಗಿದ ಅಂಗಳ!

ಅನೇಕರು ಅಂಗಳಕ್ಕೆ ಬಂದು, ಹೊಸದೇನೂ ಕಾಣದೆ, ಬರಿದಾಗಿದೆಯೆಲ್ಲಾ ಎಂದು ಕೇಳಿದ್ದಾರೆ. ಒಬ್ಬರು ಸೂಚಿಸಿದಂತೆ ದಿಲ್ಲಿಯ ಧಗೆಯ ಕಾರಣ ಕೊಟ್ಟು ಪಾರಾಗುವ ಹಂಚಿಲ್ಲ! ಕೆಲಸದ ನಡುವೆ ಬರೆಯಲು ಸಮಯ ಮಾಡಿಕೊಳ್ಳದಿರುವ ಬಗ್ಗೆ ನನಗೆ ಬೇಸರವಿದೆ. ಚುರುಕಾಗಬೇಕು ಎಂದು ಹಲವಾರು ಬಾರಿ ಯೋಚಿಸಿಯಾಗಿದೆ. ಅದರ ಫಲ ಇದುವರೆಗೆ ಶೂನ್ಯವೇ ಆಗಿದೆ.

ಈ ವರ್ಷ ಉತ್ತರ ಭಾರತದಲ್ಲೇ ದಾಖಲೆಯ ಧಗೆ. ನಾನು ಕಳೆದ ಎಂಟು ವರ್ಷಗಳಲ್ಲಿ ಇಷ್ಟು ಕಷ್ಟ ಎಂದೂ ಪಟ್ಟಿರಲಿಲ್ಲ. ರಾತ್ರಿ ೧೦-೧೫ ನಿಮಿಷಗಳ ಕಾಲ 'ಪವರ್' ಇಲ್ಲಿದಿದ್ದರೂ ಎಚ್ಚರವಾಗಿ, ಪೂರ್ತಿ ಚಂಬು ನೀರು ಕುಡಿದರೂ ದಾಹ ತೀರುವದಿಲ್ಲ. ಮೊನ್ನೆ ಹೀಗೇ ಆಗಿ, ಮಧ್ಯದಲ್ಲಿ ನಾಲ್ಕಾರು ಬಾರಿ ಪವರ್ ಹೋಗಿ, ಸರಿಯಾದ ನಿದ್ದೆಯಿಲ್ಲದೆ ಎದ್ದೆ. ಅಷ್ಟು ಹೊತ್ತಿಗೆ ಮನೆಯ ಕೆಲಸ ಮಾಡುವ ಹೆಂಗಸು ಬಂದಳು. ಬಿಹಾರದಲ್ಲಿ ಕೆಲವೇ ಎಕರೆ ಜಮೀನಿದ್ದು, ಅದರಿಂದ ಜೀವನ ನಡೆಸಲಾಗದ ಸಣ್ಣ ರೈತರುಗಳ ದೊಡ್ಡ ಸಂಸಾರಗಳು ಲೆಕ್ಕಕ್ಕೆ ಲಕ್ಷಗಟ್ಟಳೆ. ಒಟ್ಟು ಆದಾಯವನ್ನು ಹೆಚ್ಚಿಸಲು ಒಬ್ಬ ಗಂಡಸು ಊರಲ್ಲೇ ಉಳಿದು, ಉಳಿದವರೆಲ್ಲರೂ ದಿಲ್ಲಿಯನ್ನೋ ಮುಂಬೈಯನ್ನೋ ಸೇರುತ್ತಾರೆ. ಗಂಡ 'ಸೆಕ್ಯುರಿಟಿ'ಯ ಕೆಲಸ ಮಾಡಿದರೆ ಹೆಂಡತಿ ಅದೇ ಬಡಾವಣೆಯಲ್ಲಿ ಮನೆಯ ಕೆಲಸ ಮಡುತ್ತಾಳೆ. ಹೀಗೆಯೇ ಇರುವ ಸಂಸಾರ ನಮ್ಮ ಮನೆಯ ಕೆಲಸದವಳದ್ದೂ. ನಾನು ಗಮನಿಸಿರುವಂತೆ ಇಂತಹ ಎಲ್ಲಾ ಸಂಸಾರಗಳೂ ವರ್ಷಕ್ಕೊಮ್ಮೆ ಹಳ್ಳಿಗೆ ಹೋಗುತ್ತಾರೆ, ಅಲ್ಲದೆ ಯಾವುದೇ ಸಂಭ್ರಮದ ಕಾರ್ಯವಿದ್ದರೂ ಹಳ್ಳಿಗೇ ಹೋಗಿ ಮಾಡುತ್ತಾರೆ. ನೆಮ್ಮದಿಗಾಗಿ ಬಿಹಾರವನ್ನು ಬಿಟ್ಟ ಈ ಸಂಸಾರಗಳು ನಗರದ ಮನೆಗಳಿಗಂತೂ ನೆಮ್ಮದಿ ತಂದಿವೆ.

"ಏನು ಹೇಳೋದು ಸಾರ್, ಎಂತಹ ಸೆಕೆ! ಬರೀ ಧಗೆಯಷ್ಟೇ ಅಲ್ಲ ಮಣ್ಣೂ ಧೂಳೂ ಏಳುತ್ತವೆ ಈ ಕಾಲದಲ್ಲಿ; ಮೂರು ದಿನಗಳಿಂದ ಮನೆಯವನಿಗೆ ಕೂಲರ್ ಸರಿಮಾಡಿಸು ಎಂದು ಹೇಳುತ್ತಿದ್ದೇನೆ, ಕೇಳಿಲ್ಲ. ಒಂದು ನಿಮಿಷ ನಿದ್ದೆ ಬಂದಿಲ್ಲ" ಎನ್ನುತ್ತಲೇ ಬಂದಳು. ಅಯ್ಯೋ ಪಾಪ ಅನ್ನಿಸಿತು. "ಹೌದು; ಈ ಸಲದ ಬೇಸಿಗೆ ಜೋರು" ಎಂದೆ. ಹಾಗೇ ನೋಡಿದರೆ ಬೇಕಾಬಿಟ್ಟಿ ಮಾಡುತ್ತಿದ್ದಾಳೇನೋ ಎನ್ನುವಂತೆ ಬೇಗ ಬೇಗ ಕೆಲಸ ಮಾಡಿ "ಮಧ್ಯಾಹ್ನದ ಬಿಸಿಲೇರುವದಕ್ಕಿಂತ ಮುಂಚೆ ಮನೆ ಸೇರಬೇಕು ಸಾರ್" ಎಂದು ಹೇಳಿ ನಡೆದಳು.

ಬೆಳಿಗ್ಗೆ ಏಳು ಘಂಟೆಗೆ ನಲ್ಲಿಯಲ್ಲಿ ಬರುವ ನೀರು ಬೆಚ್ಚಗಿರುತ್ತದೆ, ಆ ಮಟ್ಟಕ್ಕಿದೆ ಈ ವರ್ಷದ ಬೇಸಿಗೆ. ಹಿಂದಿನ ದಿನ ತಂದ ಬಾಳೆ ಹಣ್ಣು ಇಂದು ಬಾಡಿ ಹೋಗಿರುತ್ತದೆ. ದಿನಕ್ಕೆದಷ್ಟು ನೀರು ಕುಡಿದೆವೋ ಅದರ ಲೆಕ್ಕವೇ ಮರೆತು ಹೋಗುತ್ತದೆ. ಆದರೂ ದಿಲ್ಲಿಯ ಜನ ಈ ಸೆಕೆಗೆ ಒಗ್ಗಿಕೊಂಡಿದ್ದಾರೆ. ಕರ್ನಾಟಕದಲ್ಲೇ ಹುಟ್ಟಿ ಬೆಳೆದ ನಾನೂ ಇಲ್ಲಿಗೆ ಹೊಂದಿಕೊಂಡಿದ್ದೇನೆ. ನಮ್ಮ ಬೀದಿಯ ಹೆಚ್ಚಿನ ಜನರೆಲ್ಲಾ ಬೆಳಿಗ್ಗೆ ನಡೆದಾಡಲು ಎದುರಿಗಿರುವ ಪಾರ್ಕಿನಲ್ಲಿ ಹಾಜರಾಗುತ್ತಾರೆ. ಬೇಸಿಗೆ ರಜೆಯ ಮಜದಲ್ಲಿರುವ ಚಿಣ್ಣರು ಬೆಳಿಗ್ಗೆ ಹತ್ತರವರೆಗೆ ಅದೇ ಪಾರ್ಕಿನಲ್ಲಿ ಫುಟ್-ಬಾಲ್ ಆಡುತ್ತಿರುತ್ತಾರೆ. ಕುಡಿಯಲು ಪಾನಕ, ನೀರು ಎಲ್ಲದರ ವ್ಯವಸ್ಥೆಯೂ ಮಾಡಿಕೊಂಡೇ ಬರುತ್ತಾರೆ! ಈರುಳ್ಳಿಗೆ ಲಿಂಬೆ ಹಣ್ಣಿನ ರಸ ಸೇರಿಸಿ ಅದನ್ನು ಸೇವಿಸಿದರೆ ಬಿಸಿಲನ್ನು ತಡೆದುಕೊಳ್ಳಬಹುದು ಎಂದು ಹೆಚ್ಚಿನ ಮನೆಗಳಲ್ಲಿ ಬೆಳಿಗ್ಗೆ 'ಈರುಳ್ಳಿ ಸಲಾಡ್' ಮಾಡುತ್ತಾರೆ. ಬೇಸಿಗೆಯಲ್ಲಿ ಈ ಕತೆಯಾದರೆ ಚಳಿಗಾಲದ ಕತೆಯೇ ಬೇರೆ;

ದಿಲ್ಲಿಯಲ್ಲಿ ಕಾಲಗಳು ಬಂದು ಹೋಗುವದು ಸ್ಪಷ್ಟವಾಗಿ ತಿಳಿಯುತ್ತದೆ. ಇದನ್ನು ನಾನು ಕೇವಲ ಹವೆಯ ವಿಷಯದಲ್ಲಿ ಹೇಳುತ್ತಿಲ್ಲ! ರಾಜಕೀಯ, ಮನೋರಂಜನೆ, ಸ್ಪೋರ್ಟ್ಸ್ ಇವುಗಳಲ್ಲೆಲ್ಲಾ ಎಂದೂ ಬದಲಾಗುತ್ತಿರುವ ಹವಾಮಾನಗಳ ಒಂದು ಮೀಟರ್ ದಿಲ್ಲಿಯಲ್ಲಿ ಓಡುತ್ತಿರುತ್ತದೆ; ಬೇಸರದ ವಿಷಯವೇನೆಂದರೆ ನಮ್ಮ ಹಳ್ಳಿಗಳಲ್ಲಿ ಜನರು ಪಡುತ್ತಿರುವ ಪಾಡಿನ ಮೀಟರ್ ಇರುವದೂ ದಿಲ್ಲಿಯಲ್ಲೇ! ರಾಜಕೀಯ, ಮನೋರಂಜನೆ, ಸ್ಪೋರ್ಟ್ಸ್ ಇವುಗಳ ಮೀಟರುಗಳನ್ನು ನಿಖರವಾಗಿಸುವದರಲ್ಲಿ ನಮ್ಮ ದೇಶದ ಜಾಣರೆಲ್ಲಾ ಮಗ್ನರಾದಂತೆ ಕಾಣುತ್ತದೆ! ಮೊನ್ನೆ ತಾನೆ ವಿದ್ಯುತ್ ಶಕ್ತಿಯ ಬಳಕೆಯನ್ನು ತೋರಿಸುವ ಮೀಟರುಗಳನ್ನು ಬದಲಾಯಿಸು ಅಗತ್ಯವಿದೆಯೋ ಎಂದು ಪವರ್ ಸೆಕ್ಟರ್-ನ ರಿಫಾರ್ಮ ಬಯಸುವ ಜನ ಟೀವಿಯಲ್ಲಿ ಬಹು ಆತುರದಿಂದ ಚರ್ಚಿಸುತ್ತಿದ್ದರು. ಹಳ್ಳಿಯ ಮೀಟರು ಹಾಳಾಗಿ ದಶಕಗಳೆ ಕಳೆದಿವೆ. ಹಳ್ಳಿಯ ಮೀಟರು ಹೇಗಿರಬೇಕೆಂದು ಬರೆದ ಗಾಂಧೀಜಿ ಇಂದು ಗಾಂಧಿಗಿರಿಯ ಐಕೊನ್ ಆಗಿದ್ದಾರೆ. ಹಳ್ಳಿಯ ಮೀಟರು ಸರಿಯಾಗದವರೆಗೆ ವಿನಾಕಾರಣ ನಮ್ಮ ಮನೆಯ ಕೆಲಸದವಳು ದಿಲ್ಲಿಯ ಧಗೆಯಲ್ಲಿ ಕೂಲರ್ ಇಲ್ಲದೇ ಬೆಂದು ಬೆರಗಾಗುತ್ತಲೇ ಇರುತ್ತಾಳೆ!