ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಕೋಡಗನ ಕೋಳಿ ನುಂಗಿತ್ತ!

ಶರೀಫರ ಈ ಪ್ರಸಿದ್ಧವಾದ ಪದ್ಯವನ್ನು, ಅದರಲ್ಲೂ ಅಶ್ವಥರು ಅದಕ್ಕೆ ಸುಂದರವಾದ ಸಂಗೀತ ನೀಡಿದ ಮೇಲೆ ಯಾರು ಕೇಳಿಲ್ಲ! ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೇಳುವಂತೆ ಹಾಡುಗಳ ಕ್ಯಾಸೆಟ್ ಹೊರಬಂದ ಕೆಲವೇದಿನಗಳಲ್ಲಿ ಮಲೆನಾಡಿನ ಸಣ್ಣ ಹುಡುಗಿ ಕೂಡ ತನ್ನ ಗೆಳತೆಯನ್ನು ಕೆಣಕಲು ಈ ಹಾಡನ್ನು ಹಾಡುತ್ತಿದ್ದಳಂತೆ. ಕೋಡಗನ ಕೋಳಿ ನುಂಗಿತ್ತ ಪದ್ಯದ ಬಗ್ಗೆ ಎನ್.ಎಸ್. ಎಲ್. ಹೀಗೆ ಹೇಳಿದ್ದಾರೆ:

"ಕೋಡಗನ ಕೋಳಿ ನುಂಗಿತ್ತ ಎಂಬ ಪ್ರಸಿದ್ಧ ಪದ ಗೋವಿಂದ ಭಟ್ಟರ, ಪರ್ಯಾಯವಾಗಿ ಯಾವುದೇ ನಿಜವಾದ ಗುರುವಿನ ಹಿರಿತನವನ್ನು ಕೀರ್ತಿಸುತ್ತದೆ. ಗುರುವಿನ ಪಾದಕ್ಕೆ ಬಿದ್ದ ಶಿಷ್ಯ ಲೌಕಿಕವಾಗಿ ಎಷ್ಟೇ ದೊಡ್ಡವನಾಗಿದ್ದರೇನು? ಅಧಿಕಾರ, ಹಣ, ಪ್ರಸಿದ್ದ್ಧಿಗಳಲ್ಲಿ ಗುರುವಿಗಿಂತ ಎಷ್ಟೇ ಎತ್ತರದಲ್ಲಿದ್ದರೇನು? ಗುರುವಿನ ಮಹಿಮೆ ಶಿಷ್ಯನ ಲೌಕಿಕ ವ್ಯಕ್ತಿತ್ವವನ್ನು ಲಕ್ಷ್ಯವಿಲ್ಲದೆ ನುಂಗಿಹಾಕಿಬಿಡುತ್ತದೆ. ಅದು ಕೋಳಿ ಕೋಡಗನನ್ನು ನುಂಗಿ ಹಾಕುವ ಹಾಗೆ, ನರ್ತಕಿಯ ಕುಣಿತವನ್ನು ಮದ್ದಳೆ ಗತಿಗೆಡಿಸಿಬಿಡುವ ಹಾಗೆ. ಬೀಸುವ ಕಲ್ಲು ಅದಕ್ಕೆ ಸಿಕ್ಕಿಸಿದ ಗೂಟವನ್ನೇ ನುಂಗಿಬಿಟ್ಟರೆ ಹೇಗೋ ಹಾಗೆ.

ಗೋವಿಂದ ಗುರುವಿನ ಪಾದ ನೋಡಲು ಎಷ್ಟು ಸಣ್ಣದು, ಎಷ್ಟು ಸಾಮಾನ್ಯ! ಆದರೆ ಅದರ ಅಡಿಯಲ್ಲಿ ತಲೆಯಿಟ್ಟ ತಮ್ಮ ಅಗಾಧ ಲೌಕಿಕ ಮೋಹವನ್ನು ಅದು ನುಂಗಿ ಹಾಕಿತಲ್ಲ! ಎಂದು ಉದ್ಗಾರ ತೆಗೆಯುತ್ತಾರೆ."
ಈ ಪದ್ಯವಿರುವದು ಹೀಗೆ:

ಕೋಡಗನ ಕೋಳಿ ನುಂಗಿತ್ತ
ಕೇಳವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಿಲೆ ನುಂಗಿತ್ತ!

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ!

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ!

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕುಟ ತಿರುವೋ ಅಣ್ಣನನ್ನೆ ಮೇಳಿ ನುಂಗಿತ್ತ!

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತ - ತಂಗಿ
ಕೋಡಗನ ಕೋಳಿ ನುಂಗಿತ್ತ!

ಕಳೆದ ಒಂದು ವಾರವನ್ನು ಈ ಪದ್ಯದ ಗೀಳಿನಲ್ಲೇ ಕಳೆಯುತ್ತಿದ್ದೇನೆ. ಪದ್ಯ ಬಾಯಿಪಾಠವಾಗಿದೆ. ಹಲವಾರು ಬಾರಿ ನನಗೆ ನಾನೇ ಇದನ್ನು ಗುಣುಗಿಕೊಂಡಿದ್ದೆನೆ. ಇದರ ಅದ್ಭುತ ಕಾವ್ಯಶಕ್ತಿಯ ಬಗ್ಗೆ, ಅಶ್ವಥರು ಇದಕ್ಕೆ ಅಸಾಧಾರಣ ಸಂಗೀತ ನೀಡಿರುವುದರ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಅದನ್ನು ಇಲ್ಲಿ ಪುನರಾವರ್ತಿಸುವದಿಲ್ಲ. ಈ ಬ್ಲಾಗನ್ನು ಬರೆದಿರುವದಕ್ಕೇಕೆಂದರೆ, ಎನ್.ಎಸ್.ಎಲ್. ಅವರ ವಿಶ್ಲೇಷಣೆ ನನ್ನ ಈ ವಾರದ ನೂರು ಮನನಗಳ ಅನುಭವಕ್ಕಿಂತ ಭಿನ್ನವಾಗಿರುವದನ್ನು ಚರ್ಚಿಸಲೆಂದು.

ಶರೀಫರೇ ಅಥವಾ ಅವರನ್ನು ಸನಿಹದಿಂದ ಬಲ್ಲವರೇ ಪದ್ಯದ ಅರ್ಥ ಎನ್.ಎಸ್.ಎಲ್. ಹೇಳಿರುವಂತೆ ಇರುವುದಾಗಿ ಹೇಳಿರಬಹುದು; ಹಾಗೆಯೇ ಅದು ಹುಟ್ಟಿರಬಹುದು. ನಾನು ಈ ವಾದಕ್ಕಿಳಿಯುತ್ತಿಲ್ಲ. ಒಂದು ಪದ್ಯವನ್ನು ಹೀಗೇ ಅರ್ಥ ಮಾಡಿಕೊಳ್ಳಬೇಕು ಎನ್ನಲು ಸಾಧ್ಯವೇ? ನನಗೆ ಅನಿಸುತ್ತಿರುವದನ್ನು ನಿಮ್ಮ ಮುಂದಿಟ್ಟಿದ್ದೇನೆ.

ನಮ್ಮ ಊಹಾ ಶಕ್ತಿಯನ್ನು ಬಿಡೆಯಿಲ್ಲದೆ ಹರಿಬಿಟ್ಟರೆ ಪ್ರತಿ ಪಂಕ್ತಿಯ ಪ್ರತಿಮೆಗಳಲ್ಲಿ, ಹಾಗೇ ಪಂಕ್ತಿಗಳನ್ನು
ಪೋಣಿಸಿರುವ ಕ್ರಮದಲ್ಲಿ ನಾವು ಒಂದು ಸಮಗ್ರವಾದ ಯೋಚನಾಲಹರಿಯನ್ನು ಗುರುತಿಸಬಹುದೇನೋ! ಹಾಗಿರಬಹುದು ಎಂದು ಯೋಚಿಸಿ ಅಜ-ಗಜ, ಒಳ್ಳು-ಒನಕೆ, ಹಗ್ಗ-ಮಗ್ಗ-ಲಾಳಿ, ಬತ್ತ-ಬಾನ ಇವುಗಳ ಸಂಬಂಧದ ಬಗ್ಗೆ ನಾನು ಚಿಂತಿಸಲೇ ಇಲ್ಲ ಎಂದೂ ಇಲ್ಲ. ಯೋಚಿಸಿದೆ. ಆದರೆ ಅವ್ಯಾವೂ ನನಗೆ ಸಮಾಧಾನ ತರಲಿಲ್ಲ. ಈ ಪದ್ಯ ನನಗರಿಯದಂತೇ ತರುವ ನಿರಾಳವಾದ ತನ್ಮಯತೆ ಮತ್ತು ಶಾಂತಿಯನ್ನು ಈ ರೀತಿಯಲ್ಲಿ ಅರ್ಥೈಸಿಸಲು ಆಗಲಿಲ್ಲ. ಪದೇ ಪದೇ ಕೊನೆಯ ಸಾಲೇ ನನ್ನೆದರು ಬರುತ್ತಿತ್ತು. ಇಂದು ನನಗೆ ಹೊಳೆದದ್ದೇನೆಂದರೆ ಹಾಡುಗನಿಗೆ ನಿರಾಳವಾಗುವದು "ನನ್ನನೆ ನುಂಗಿತ್ತ" ಆದಾಗಲೇ! ಅಂದರೆ "ನಾನು" ಎಂಬ ಅಹಂಭಾವ ಹಾಡುಗನಿಂದ ಮಾಯವಾದಾಗ. ಅದು ಸಾಧ್ಯವಾದದ್ದು ಗುರುವಿನ ಕೃಪೆಯಿಂದ.

ಹಾಗಾದರೆ ಎನ್.ಎಸ್.ಎಲ್. ಹೇಳಿರುವದಕ್ಕೂ ನನಗೆ ಹೊಳೆದದ್ದಕ್ಕೂ ವ್ಯತ್ಯಾಸವಿದೆಯೆ ಎಂದು ಕೇಳಬಹುದು. ಇದೆ. ಅದೇನೆಂದರೆ ಈ ಪ್ರಕ್ರಿಯೆ ಕೋಳಿ ಕೋಡಗನನ್ನು ನುಂಗಿ ಹಾಕಿದಂತಲ್ಲ! ಅದು ಹೀಗಿರಲೂ ಸಾಕು: ನಾವು ನಮ್ಮ ಯೋಚನಾಶಕ್ತಿಯಿಂದ, ಹೊರಗಿನಿಂದ ಭಿನ್ನ ಭಿನ್ನವಾಗಿ ಕಾಣುವ ವಸ್ತುಗಳ ನಡುವಿನ ಸಂಬಂಧ ತಿಳಿದು ಅವುಗಳನ್ನು ಸಮಗ್ರವಾಗಿ ನೋಡಲು ಕಲಿಯಲೂಬಹುದು, ಆದರೆ, ನಮ್ಮ ಅಹಂಭಾವವವನ್ನು ಕಳೆದುಕೊಂಡು ಮಹತ್ತರವಾದ ಜ್ಞಾನವನ್ನು ಸಂಪಾದಿಸಲು ಗುರುವಿನ ಪಾದವೇ ದಾರಿ. ಅಂದರೆ, ನಾವು ಕಷ್ಟಪಟ್ಟು ಲೋಕಜ್ಞಾನವನ್ನು ಪಡೆಯಬಹುದು ಆದರೆ ಮುಕ್ತಿ ನೀಡುವಂತಹ ಸತ್ಯದ ಜ್ಞಾನ ಪಡೆಯಲು ಗುರುವಿಗೆ ಶರಣೆನ್ನಬೇಕು. ನನ್ನನ್ನು ನುಂಗುವಂತಹ ಗುರುಗಳ ಸಂಪರ್ಕವಿಲ್ಲದೆ, "ನಾನು" ಈಗಲೂ ಇರುವುದರಿಂದ ಅನಿಸಿದ್ದನ್ನು ಬರೆದಿದ್ದೇನೆ. ನಿಮ್ಮ ಅನಿಸಿಕೆಗಳ ಬಗ್ಗೆ ದಯವಿಟ್ಟು ತಿಳಿಸಿ.

6 Comments:

Blogger Raghu Kuvempunagar said...

ವಿನಾಯಕ,
ಶ್ರೀನಿವಾಸರ 'ಮಾಯಣ್ಣನ ಕನ್ನಡಿ' ಓದು.

- ರಾಘು

9:50 pm  
Blogger Supreeth.K.S said...

“ಒಂದು ಪದ್ಯವನ್ನು ಹೀಗೇ ಅರ್ಥ ಮಾಡಿಕೊಳ್ಳಬೇಕು ಎನ್ನಲು ಸಾಧ್ಯವೇ?”
ಒಳ್ಳೆಯ ಮಾತು.
ಇಂತಹ ಪದ್ಯಗಳು ಒಂದೋ ಭಕ್ತಿ ಗೀತೆಗಳಾಗಿ ಇಲ್ಲವೇ ಜನಪದ ಗೀತೆಗಳಾಗಿ, ಭಾವಗೀತೆಗಳಾಗಿ ಅವುಗಳ ಮಹತ್ವ ಕೇವಲ ಗೇಯತೆ, ಹಾಡುಗಾರಿಕೆಯಲ್ಲಿ ಕಳೆದುಹೋಗಿಬಿಡಬಾರದು. ಪದ್ಯವನ್ನು ಧೇನಿಸಬೇಕು, ಒಂದು ವಾರದ ಮಟ್ಟಿಗೆ ಅದು ನಿಮ್ಮನ್ನು ಕಾಡಿದೆಯೆಂದ ಮೇಲೆ ಅದರ ಶಕ್ತಿ ಎಂಥದ್ದೋ, ಅಲ್ಲವೇ?
ನಾನು ತತ್ ಕ್ಷಣದಲ್ಲಿ ಕಂಡುಕೊಂಡ ಅರ್ಥದ ಮಗ್ಗುಲೊಂದನ್ನು ತಿಳಿಸುವೆ: ಇಲ್ಲಿ ಕೋಳಿ ಕೋಡಗನ ನುಂಗಿತ್ತ ಎಂಬ ರೂಪಕದಿಂದ ಆರಂಭವಾಗುವಾಗ ನಾವು ನಮ್ಮಿಂದ ಹೊರಗೆ ನಡೆಯುತ್ತಿರುವ, ನಂಬಲು ಸಾಧ್ಯವಿಲ್ಲದ ಪ್ರಕ್ರಿಯೆಗೆ ಸಾಕ್ಷಿಯಾಗುತ್ತೇವೆ? ಕೋಳಿ ಕೋಡಗನನ್ನು ನುಂಗುವುದನ್ನು ನಾವು ಎಲ್ಲಿಯೂ ಕಂಡಿಲ್ಲ, ಹಾಗೆ ಕಾಣುವುದೂ ಇಲ್ಲ, ಅದು ಲೋಕ ರೀತಿಗೆ ವಿರುದ್ಧವಾದದ್ದು. ನಾವು ಸೃಷ್ಠಿಸಿಕೊಂಡ ಸಮಾಜದ ದೃಷ್ಠಿಗೆ ಅಪಥ್ಯವಾದದ್ದು... ಹೀಗೆಯೇ ನಮಗೇ ದೊಡ್ಡದಾದ ನಮ್ಮ ಅಹಂಕಾರ, ಐಡೆಂಟಿಟಿ ಕಳೆದು ಹೋಗಿ ನಾವು ನುಂಗಲ್ಪಡುವುದು ಇಂಥದ್ದೇ ಪ್ರಕ್ರಿಯೆಯಲ್ಲವೇ?


http://uniquesupri.wordpress.com/

6:12 am  
Blogger ಶ್ರೀನಿಧಿ.ಡಿ.ಎಸ್ said...

ನಮಸ್ತೇ ವಿನಾಯಕ ಪಂಡಿತರೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ನೀವು ದೂರದ ದೆಹಲಿಯಲ್ಲಿದ್ದೀರಿ, ಎಲ್ಲಾದರೂ ಬೆಂಗಳೂರಿಗೆ ಬರುವ ಪ್ಲಾನಿದ್ದರೆ ಈ ಸಮಯದಲ್ಲೇ ಇಟ್ಟುಕೊಳ್ಳಿ ಅಂತ ಹೇಳುತ್ತಾ!:)
,

ಶ್ರೀನಿಧಿ.ಡಿ.ಎಸ್.

11:13 am  
Blogger Kannada Sahithya said...

Dear Vinayak,

On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

12:27 am  
Anonymous Anonymous said...

Nannanu guru nungida
guruvannu yar nungidaru?

Thanks for your KOdaga and Koli
H M SADANANDA
sadananda62@yahoomail.com

7:42 am  
Blogger Unknown said...

ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

ನಿಮ್ಮ ಅಂತರ್ಜಾಲ ಅಗಸೆಯ ಅಂಗಳ ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
ಕನ್ನಡ ಹನಿಗಳ ಬಳಗ

11:27 pm  

Post a Comment

<< Home