ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಕೋಡಗನ ಕೋಳಿ ನುಂಗಿತ್ತ!

ಶರೀಫರ ಈ ಪ್ರಸಿದ್ಧವಾದ ಪದ್ಯವನ್ನು, ಅದರಲ್ಲೂ ಅಶ್ವಥರು ಅದಕ್ಕೆ ಸುಂದರವಾದ ಸಂಗೀತ ನೀಡಿದ ಮೇಲೆ ಯಾರು ಕೇಳಿಲ್ಲ! ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೇಳುವಂತೆ ಹಾಡುಗಳ ಕ್ಯಾಸೆಟ್ ಹೊರಬಂದ ಕೆಲವೇದಿನಗಳಲ್ಲಿ ಮಲೆನಾಡಿನ ಸಣ್ಣ ಹುಡುಗಿ ಕೂಡ ತನ್ನ ಗೆಳತೆಯನ್ನು ಕೆಣಕಲು ಈ ಹಾಡನ್ನು ಹಾಡುತ್ತಿದ್ದಳಂತೆ. ಕೋಡಗನ ಕೋಳಿ ನುಂಗಿತ್ತ ಪದ್ಯದ ಬಗ್ಗೆ ಎನ್.ಎಸ್. ಎಲ್. ಹೀಗೆ ಹೇಳಿದ್ದಾರೆ:

"ಕೋಡಗನ ಕೋಳಿ ನುಂಗಿತ್ತ ಎಂಬ ಪ್ರಸಿದ್ಧ ಪದ ಗೋವಿಂದ ಭಟ್ಟರ, ಪರ್ಯಾಯವಾಗಿ ಯಾವುದೇ ನಿಜವಾದ ಗುರುವಿನ ಹಿರಿತನವನ್ನು ಕೀರ್ತಿಸುತ್ತದೆ. ಗುರುವಿನ ಪಾದಕ್ಕೆ ಬಿದ್ದ ಶಿಷ್ಯ ಲೌಕಿಕವಾಗಿ ಎಷ್ಟೇ ದೊಡ್ಡವನಾಗಿದ್ದರೇನು? ಅಧಿಕಾರ, ಹಣ, ಪ್ರಸಿದ್ದ್ಧಿಗಳಲ್ಲಿ ಗುರುವಿಗಿಂತ ಎಷ್ಟೇ ಎತ್ತರದಲ್ಲಿದ್ದರೇನು? ಗುರುವಿನ ಮಹಿಮೆ ಶಿಷ್ಯನ ಲೌಕಿಕ ವ್ಯಕ್ತಿತ್ವವನ್ನು ಲಕ್ಷ್ಯವಿಲ್ಲದೆ ನುಂಗಿಹಾಕಿಬಿಡುತ್ತದೆ. ಅದು ಕೋಳಿ ಕೋಡಗನನ್ನು ನುಂಗಿ ಹಾಕುವ ಹಾಗೆ, ನರ್ತಕಿಯ ಕುಣಿತವನ್ನು ಮದ್ದಳೆ ಗತಿಗೆಡಿಸಿಬಿಡುವ ಹಾಗೆ. ಬೀಸುವ ಕಲ್ಲು ಅದಕ್ಕೆ ಸಿಕ್ಕಿಸಿದ ಗೂಟವನ್ನೇ ನುಂಗಿಬಿಟ್ಟರೆ ಹೇಗೋ ಹಾಗೆ.

ಗೋವಿಂದ ಗುರುವಿನ ಪಾದ ನೋಡಲು ಎಷ್ಟು ಸಣ್ಣದು, ಎಷ್ಟು ಸಾಮಾನ್ಯ! ಆದರೆ ಅದರ ಅಡಿಯಲ್ಲಿ ತಲೆಯಿಟ್ಟ ತಮ್ಮ ಅಗಾಧ ಲೌಕಿಕ ಮೋಹವನ್ನು ಅದು ನುಂಗಿ ಹಾಕಿತಲ್ಲ! ಎಂದು ಉದ್ಗಾರ ತೆಗೆಯುತ್ತಾರೆ."
ಈ ಪದ್ಯವಿರುವದು ಹೀಗೆ:

ಕೋಡಗನ ಕೋಳಿ ನುಂಗಿತ್ತ
ಕೇಳವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಿಲೆ ನುಂಗಿತ್ತ!

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ!

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ!

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕುಟ ತಿರುವೋ ಅಣ್ಣನನ್ನೆ ಮೇಳಿ ನುಂಗಿತ್ತ!

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತ - ತಂಗಿ
ಕೋಡಗನ ಕೋಳಿ ನುಂಗಿತ್ತ!

ಕಳೆದ ಒಂದು ವಾರವನ್ನು ಈ ಪದ್ಯದ ಗೀಳಿನಲ್ಲೇ ಕಳೆಯುತ್ತಿದ್ದೇನೆ. ಪದ್ಯ ಬಾಯಿಪಾಠವಾಗಿದೆ. ಹಲವಾರು ಬಾರಿ ನನಗೆ ನಾನೇ ಇದನ್ನು ಗುಣುಗಿಕೊಂಡಿದ್ದೆನೆ. ಇದರ ಅದ್ಭುತ ಕಾವ್ಯಶಕ್ತಿಯ ಬಗ್ಗೆ, ಅಶ್ವಥರು ಇದಕ್ಕೆ ಅಸಾಧಾರಣ ಸಂಗೀತ ನೀಡಿರುವುದರ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಅದನ್ನು ಇಲ್ಲಿ ಪುನರಾವರ್ತಿಸುವದಿಲ್ಲ. ಈ ಬ್ಲಾಗನ್ನು ಬರೆದಿರುವದಕ್ಕೇಕೆಂದರೆ, ಎನ್.ಎಸ್.ಎಲ್. ಅವರ ವಿಶ್ಲೇಷಣೆ ನನ್ನ ಈ ವಾರದ ನೂರು ಮನನಗಳ ಅನುಭವಕ್ಕಿಂತ ಭಿನ್ನವಾಗಿರುವದನ್ನು ಚರ್ಚಿಸಲೆಂದು.

ಶರೀಫರೇ ಅಥವಾ ಅವರನ್ನು ಸನಿಹದಿಂದ ಬಲ್ಲವರೇ ಪದ್ಯದ ಅರ್ಥ ಎನ್.ಎಸ್.ಎಲ್. ಹೇಳಿರುವಂತೆ ಇರುವುದಾಗಿ ಹೇಳಿರಬಹುದು; ಹಾಗೆಯೇ ಅದು ಹುಟ್ಟಿರಬಹುದು. ನಾನು ಈ ವಾದಕ್ಕಿಳಿಯುತ್ತಿಲ್ಲ. ಒಂದು ಪದ್ಯವನ್ನು ಹೀಗೇ ಅರ್ಥ ಮಾಡಿಕೊಳ್ಳಬೇಕು ಎನ್ನಲು ಸಾಧ್ಯವೇ? ನನಗೆ ಅನಿಸುತ್ತಿರುವದನ್ನು ನಿಮ್ಮ ಮುಂದಿಟ್ಟಿದ್ದೇನೆ.

ನಮ್ಮ ಊಹಾ ಶಕ್ತಿಯನ್ನು ಬಿಡೆಯಿಲ್ಲದೆ ಹರಿಬಿಟ್ಟರೆ ಪ್ರತಿ ಪಂಕ್ತಿಯ ಪ್ರತಿಮೆಗಳಲ್ಲಿ, ಹಾಗೇ ಪಂಕ್ತಿಗಳನ್ನು
ಪೋಣಿಸಿರುವ ಕ್ರಮದಲ್ಲಿ ನಾವು ಒಂದು ಸಮಗ್ರವಾದ ಯೋಚನಾಲಹರಿಯನ್ನು ಗುರುತಿಸಬಹುದೇನೋ! ಹಾಗಿರಬಹುದು ಎಂದು ಯೋಚಿಸಿ ಅಜ-ಗಜ, ಒಳ್ಳು-ಒನಕೆ, ಹಗ್ಗ-ಮಗ್ಗ-ಲಾಳಿ, ಬತ್ತ-ಬಾನ ಇವುಗಳ ಸಂಬಂಧದ ಬಗ್ಗೆ ನಾನು ಚಿಂತಿಸಲೇ ಇಲ್ಲ ಎಂದೂ ಇಲ್ಲ. ಯೋಚಿಸಿದೆ. ಆದರೆ ಅವ್ಯಾವೂ ನನಗೆ ಸಮಾಧಾನ ತರಲಿಲ್ಲ. ಈ ಪದ್ಯ ನನಗರಿಯದಂತೇ ತರುವ ನಿರಾಳವಾದ ತನ್ಮಯತೆ ಮತ್ತು ಶಾಂತಿಯನ್ನು ಈ ರೀತಿಯಲ್ಲಿ ಅರ್ಥೈಸಿಸಲು ಆಗಲಿಲ್ಲ. ಪದೇ ಪದೇ ಕೊನೆಯ ಸಾಲೇ ನನ್ನೆದರು ಬರುತ್ತಿತ್ತು. ಇಂದು ನನಗೆ ಹೊಳೆದದ್ದೇನೆಂದರೆ ಹಾಡುಗನಿಗೆ ನಿರಾಳವಾಗುವದು "ನನ್ನನೆ ನುಂಗಿತ್ತ" ಆದಾಗಲೇ! ಅಂದರೆ "ನಾನು" ಎಂಬ ಅಹಂಭಾವ ಹಾಡುಗನಿಂದ ಮಾಯವಾದಾಗ. ಅದು ಸಾಧ್ಯವಾದದ್ದು ಗುರುವಿನ ಕೃಪೆಯಿಂದ.

ಹಾಗಾದರೆ ಎನ್.ಎಸ್.ಎಲ್. ಹೇಳಿರುವದಕ್ಕೂ ನನಗೆ ಹೊಳೆದದ್ದಕ್ಕೂ ವ್ಯತ್ಯಾಸವಿದೆಯೆ ಎಂದು ಕೇಳಬಹುದು. ಇದೆ. ಅದೇನೆಂದರೆ ಈ ಪ್ರಕ್ರಿಯೆ ಕೋಳಿ ಕೋಡಗನನ್ನು ನುಂಗಿ ಹಾಕಿದಂತಲ್ಲ! ಅದು ಹೀಗಿರಲೂ ಸಾಕು: ನಾವು ನಮ್ಮ ಯೋಚನಾಶಕ್ತಿಯಿಂದ, ಹೊರಗಿನಿಂದ ಭಿನ್ನ ಭಿನ್ನವಾಗಿ ಕಾಣುವ ವಸ್ತುಗಳ ನಡುವಿನ ಸಂಬಂಧ ತಿಳಿದು ಅವುಗಳನ್ನು ಸಮಗ್ರವಾಗಿ ನೋಡಲು ಕಲಿಯಲೂಬಹುದು, ಆದರೆ, ನಮ್ಮ ಅಹಂಭಾವವವನ್ನು ಕಳೆದುಕೊಂಡು ಮಹತ್ತರವಾದ ಜ್ಞಾನವನ್ನು ಸಂಪಾದಿಸಲು ಗುರುವಿನ ಪಾದವೇ ದಾರಿ. ಅಂದರೆ, ನಾವು ಕಷ್ಟಪಟ್ಟು ಲೋಕಜ್ಞಾನವನ್ನು ಪಡೆಯಬಹುದು ಆದರೆ ಮುಕ್ತಿ ನೀಡುವಂತಹ ಸತ್ಯದ ಜ್ಞಾನ ಪಡೆಯಲು ಗುರುವಿಗೆ ಶರಣೆನ್ನಬೇಕು. ನನ್ನನ್ನು ನುಂಗುವಂತಹ ಗುರುಗಳ ಸಂಪರ್ಕವಿಲ್ಲದೆ, "ನಾನು" ಈಗಲೂ ಇರುವುದರಿಂದ ಅನಿಸಿದ್ದನ್ನು ಬರೆದಿದ್ದೇನೆ. ನಿಮ್ಮ ಅನಿಸಿಕೆಗಳ ಬಗ್ಗೆ ದಯವಿಟ್ಟು ತಿಳಿಸಿ.

ಒಣಗಿದ ಅಂಗಳ!

ಅನೇಕರು ಅಂಗಳಕ್ಕೆ ಬಂದು, ಹೊಸದೇನೂ ಕಾಣದೆ, ಬರಿದಾಗಿದೆಯೆಲ್ಲಾ ಎಂದು ಕೇಳಿದ್ದಾರೆ. ಒಬ್ಬರು ಸೂಚಿಸಿದಂತೆ ದಿಲ್ಲಿಯ ಧಗೆಯ ಕಾರಣ ಕೊಟ್ಟು ಪಾರಾಗುವ ಹಂಚಿಲ್ಲ! ಕೆಲಸದ ನಡುವೆ ಬರೆಯಲು ಸಮಯ ಮಾಡಿಕೊಳ್ಳದಿರುವ ಬಗ್ಗೆ ನನಗೆ ಬೇಸರವಿದೆ. ಚುರುಕಾಗಬೇಕು ಎಂದು ಹಲವಾರು ಬಾರಿ ಯೋಚಿಸಿಯಾಗಿದೆ. ಅದರ ಫಲ ಇದುವರೆಗೆ ಶೂನ್ಯವೇ ಆಗಿದೆ.

ಈ ವರ್ಷ ಉತ್ತರ ಭಾರತದಲ್ಲೇ ದಾಖಲೆಯ ಧಗೆ. ನಾನು ಕಳೆದ ಎಂಟು ವರ್ಷಗಳಲ್ಲಿ ಇಷ್ಟು ಕಷ್ಟ ಎಂದೂ ಪಟ್ಟಿರಲಿಲ್ಲ. ರಾತ್ರಿ ೧೦-೧೫ ನಿಮಿಷಗಳ ಕಾಲ 'ಪವರ್' ಇಲ್ಲಿದಿದ್ದರೂ ಎಚ್ಚರವಾಗಿ, ಪೂರ್ತಿ ಚಂಬು ನೀರು ಕುಡಿದರೂ ದಾಹ ತೀರುವದಿಲ್ಲ. ಮೊನ್ನೆ ಹೀಗೇ ಆಗಿ, ಮಧ್ಯದಲ್ಲಿ ನಾಲ್ಕಾರು ಬಾರಿ ಪವರ್ ಹೋಗಿ, ಸರಿಯಾದ ನಿದ್ದೆಯಿಲ್ಲದೆ ಎದ್ದೆ. ಅಷ್ಟು ಹೊತ್ತಿಗೆ ಮನೆಯ ಕೆಲಸ ಮಾಡುವ ಹೆಂಗಸು ಬಂದಳು. ಬಿಹಾರದಲ್ಲಿ ಕೆಲವೇ ಎಕರೆ ಜಮೀನಿದ್ದು, ಅದರಿಂದ ಜೀವನ ನಡೆಸಲಾಗದ ಸಣ್ಣ ರೈತರುಗಳ ದೊಡ್ಡ ಸಂಸಾರಗಳು ಲೆಕ್ಕಕ್ಕೆ ಲಕ್ಷಗಟ್ಟಳೆ. ಒಟ್ಟು ಆದಾಯವನ್ನು ಹೆಚ್ಚಿಸಲು ಒಬ್ಬ ಗಂಡಸು ಊರಲ್ಲೇ ಉಳಿದು, ಉಳಿದವರೆಲ್ಲರೂ ದಿಲ್ಲಿಯನ್ನೋ ಮುಂಬೈಯನ್ನೋ ಸೇರುತ್ತಾರೆ. ಗಂಡ 'ಸೆಕ್ಯುರಿಟಿ'ಯ ಕೆಲಸ ಮಾಡಿದರೆ ಹೆಂಡತಿ ಅದೇ ಬಡಾವಣೆಯಲ್ಲಿ ಮನೆಯ ಕೆಲಸ ಮಡುತ್ತಾಳೆ. ಹೀಗೆಯೇ ಇರುವ ಸಂಸಾರ ನಮ್ಮ ಮನೆಯ ಕೆಲಸದವಳದ್ದೂ. ನಾನು ಗಮನಿಸಿರುವಂತೆ ಇಂತಹ ಎಲ್ಲಾ ಸಂಸಾರಗಳೂ ವರ್ಷಕ್ಕೊಮ್ಮೆ ಹಳ್ಳಿಗೆ ಹೋಗುತ್ತಾರೆ, ಅಲ್ಲದೆ ಯಾವುದೇ ಸಂಭ್ರಮದ ಕಾರ್ಯವಿದ್ದರೂ ಹಳ್ಳಿಗೇ ಹೋಗಿ ಮಾಡುತ್ತಾರೆ. ನೆಮ್ಮದಿಗಾಗಿ ಬಿಹಾರವನ್ನು ಬಿಟ್ಟ ಈ ಸಂಸಾರಗಳು ನಗರದ ಮನೆಗಳಿಗಂತೂ ನೆಮ್ಮದಿ ತಂದಿವೆ.

"ಏನು ಹೇಳೋದು ಸಾರ್, ಎಂತಹ ಸೆಕೆ! ಬರೀ ಧಗೆಯಷ್ಟೇ ಅಲ್ಲ ಮಣ್ಣೂ ಧೂಳೂ ಏಳುತ್ತವೆ ಈ ಕಾಲದಲ್ಲಿ; ಮೂರು ದಿನಗಳಿಂದ ಮನೆಯವನಿಗೆ ಕೂಲರ್ ಸರಿಮಾಡಿಸು ಎಂದು ಹೇಳುತ್ತಿದ್ದೇನೆ, ಕೇಳಿಲ್ಲ. ಒಂದು ನಿಮಿಷ ನಿದ್ದೆ ಬಂದಿಲ್ಲ" ಎನ್ನುತ್ತಲೇ ಬಂದಳು. ಅಯ್ಯೋ ಪಾಪ ಅನ್ನಿಸಿತು. "ಹೌದು; ಈ ಸಲದ ಬೇಸಿಗೆ ಜೋರು" ಎಂದೆ. ಹಾಗೇ ನೋಡಿದರೆ ಬೇಕಾಬಿಟ್ಟಿ ಮಾಡುತ್ತಿದ್ದಾಳೇನೋ ಎನ್ನುವಂತೆ ಬೇಗ ಬೇಗ ಕೆಲಸ ಮಾಡಿ "ಮಧ್ಯಾಹ್ನದ ಬಿಸಿಲೇರುವದಕ್ಕಿಂತ ಮುಂಚೆ ಮನೆ ಸೇರಬೇಕು ಸಾರ್" ಎಂದು ಹೇಳಿ ನಡೆದಳು.

ಬೆಳಿಗ್ಗೆ ಏಳು ಘಂಟೆಗೆ ನಲ್ಲಿಯಲ್ಲಿ ಬರುವ ನೀರು ಬೆಚ್ಚಗಿರುತ್ತದೆ, ಆ ಮಟ್ಟಕ್ಕಿದೆ ಈ ವರ್ಷದ ಬೇಸಿಗೆ. ಹಿಂದಿನ ದಿನ ತಂದ ಬಾಳೆ ಹಣ್ಣು ಇಂದು ಬಾಡಿ ಹೋಗಿರುತ್ತದೆ. ದಿನಕ್ಕೆದಷ್ಟು ನೀರು ಕುಡಿದೆವೋ ಅದರ ಲೆಕ್ಕವೇ ಮರೆತು ಹೋಗುತ್ತದೆ. ಆದರೂ ದಿಲ್ಲಿಯ ಜನ ಈ ಸೆಕೆಗೆ ಒಗ್ಗಿಕೊಂಡಿದ್ದಾರೆ. ಕರ್ನಾಟಕದಲ್ಲೇ ಹುಟ್ಟಿ ಬೆಳೆದ ನಾನೂ ಇಲ್ಲಿಗೆ ಹೊಂದಿಕೊಂಡಿದ್ದೇನೆ. ನಮ್ಮ ಬೀದಿಯ ಹೆಚ್ಚಿನ ಜನರೆಲ್ಲಾ ಬೆಳಿಗ್ಗೆ ನಡೆದಾಡಲು ಎದುರಿಗಿರುವ ಪಾರ್ಕಿನಲ್ಲಿ ಹಾಜರಾಗುತ್ತಾರೆ. ಬೇಸಿಗೆ ರಜೆಯ ಮಜದಲ್ಲಿರುವ ಚಿಣ್ಣರು ಬೆಳಿಗ್ಗೆ ಹತ್ತರವರೆಗೆ ಅದೇ ಪಾರ್ಕಿನಲ್ಲಿ ಫುಟ್-ಬಾಲ್ ಆಡುತ್ತಿರುತ್ತಾರೆ. ಕುಡಿಯಲು ಪಾನಕ, ನೀರು ಎಲ್ಲದರ ವ್ಯವಸ್ಥೆಯೂ ಮಾಡಿಕೊಂಡೇ ಬರುತ್ತಾರೆ! ಈರುಳ್ಳಿಗೆ ಲಿಂಬೆ ಹಣ್ಣಿನ ರಸ ಸೇರಿಸಿ ಅದನ್ನು ಸೇವಿಸಿದರೆ ಬಿಸಿಲನ್ನು ತಡೆದುಕೊಳ್ಳಬಹುದು ಎಂದು ಹೆಚ್ಚಿನ ಮನೆಗಳಲ್ಲಿ ಬೆಳಿಗ್ಗೆ 'ಈರುಳ್ಳಿ ಸಲಾಡ್' ಮಾಡುತ್ತಾರೆ. ಬೇಸಿಗೆಯಲ್ಲಿ ಈ ಕತೆಯಾದರೆ ಚಳಿಗಾಲದ ಕತೆಯೇ ಬೇರೆ;

ದಿಲ್ಲಿಯಲ್ಲಿ ಕಾಲಗಳು ಬಂದು ಹೋಗುವದು ಸ್ಪಷ್ಟವಾಗಿ ತಿಳಿಯುತ್ತದೆ. ಇದನ್ನು ನಾನು ಕೇವಲ ಹವೆಯ ವಿಷಯದಲ್ಲಿ ಹೇಳುತ್ತಿಲ್ಲ! ರಾಜಕೀಯ, ಮನೋರಂಜನೆ, ಸ್ಪೋರ್ಟ್ಸ್ ಇವುಗಳಲ್ಲೆಲ್ಲಾ ಎಂದೂ ಬದಲಾಗುತ್ತಿರುವ ಹವಾಮಾನಗಳ ಒಂದು ಮೀಟರ್ ದಿಲ್ಲಿಯಲ್ಲಿ ಓಡುತ್ತಿರುತ್ತದೆ; ಬೇಸರದ ವಿಷಯವೇನೆಂದರೆ ನಮ್ಮ ಹಳ್ಳಿಗಳಲ್ಲಿ ಜನರು ಪಡುತ್ತಿರುವ ಪಾಡಿನ ಮೀಟರ್ ಇರುವದೂ ದಿಲ್ಲಿಯಲ್ಲೇ! ರಾಜಕೀಯ, ಮನೋರಂಜನೆ, ಸ್ಪೋರ್ಟ್ಸ್ ಇವುಗಳ ಮೀಟರುಗಳನ್ನು ನಿಖರವಾಗಿಸುವದರಲ್ಲಿ ನಮ್ಮ ದೇಶದ ಜಾಣರೆಲ್ಲಾ ಮಗ್ನರಾದಂತೆ ಕಾಣುತ್ತದೆ! ಮೊನ್ನೆ ತಾನೆ ವಿದ್ಯುತ್ ಶಕ್ತಿಯ ಬಳಕೆಯನ್ನು ತೋರಿಸುವ ಮೀಟರುಗಳನ್ನು ಬದಲಾಯಿಸು ಅಗತ್ಯವಿದೆಯೋ ಎಂದು ಪವರ್ ಸೆಕ್ಟರ್-ನ ರಿಫಾರ್ಮ ಬಯಸುವ ಜನ ಟೀವಿಯಲ್ಲಿ ಬಹು ಆತುರದಿಂದ ಚರ್ಚಿಸುತ್ತಿದ್ದರು. ಹಳ್ಳಿಯ ಮೀಟರು ಹಾಳಾಗಿ ದಶಕಗಳೆ ಕಳೆದಿವೆ. ಹಳ್ಳಿಯ ಮೀಟರು ಹೇಗಿರಬೇಕೆಂದು ಬರೆದ ಗಾಂಧೀಜಿ ಇಂದು ಗಾಂಧಿಗಿರಿಯ ಐಕೊನ್ ಆಗಿದ್ದಾರೆ. ಹಳ್ಳಿಯ ಮೀಟರು ಸರಿಯಾಗದವರೆಗೆ ವಿನಾಕಾರಣ ನಮ್ಮ ಮನೆಯ ಕೆಲಸದವಳು ದಿಲ್ಲಿಯ ಧಗೆಯಲ್ಲಿ ಕೂಲರ್ ಇಲ್ಲದೇ ಬೆಂದು ಬೆರಗಾಗುತ್ತಲೇ ಇರುತ್ತಾಳೆ!

ಪ್ರಾಚಾರ್ಯ ಕಟ್ಟಾ ಮೂರ್ತಿಗಳು

ಹಿಂದಿನ ವಾರ ಪ್ರಾಚಾರ್ಯ ಕಟ್ಟಾ ಮೂರ್ತಿಯವರ ವಿಚಾರಗೋಷ್ಟಿಯಲ್ಲಿರುವ ಅವಕಾಶ ದೊರೆತಿತ್ತು. ಅವರು Operations Researchನಲ್ಲಿ ತಾವು ಮಾಡಿದ ಸಂಶೋಧನಾ ಕೆಲಸವನ್ನು ವಿವರಿಸಿದರು. ಎಪ್ಪತ್ತು ವರ್ಷಗಳ ಪ್ರಾಚಾರ್ಯರು ಅನುಭವೀ ಜೀವಿ. ಅವರು ಮಾತಾಡಿದಾಗ ತಾಂತ್ರಿಕ ವಿಷಯದ ಬಗ್ಗೆ ಜ್ಞಾನ ಪಡೆಯುವುದಲ್ಲದೇ ಜೀವನಕ್ಕೆ ಉಪಯೋಗವಾಗುವ ವಿಷಯಗಳನ್ನು ಕಲಿಯಬಹುದು. ಅವರು ಬೇರೆ ಬೇರೆ ಭಾಷೆಗಳಿಂದ ಉತ್ತಮ ಗಾದೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಎರಡು ನನಗೆ ಅತಿ ಇಷ್ಟವಾದವು. ಅವುಗಳನ್ನೇ ಇಲ್ಲಿ ದಾಖಲಿಸಿದ್ದೇನೆ:
೧. ಚೈನಾದಲ್ಲಿ ಪ್ರಚಲಿತವಿರುವ ಗಾದೆ:
ದೀರ್ಘವಾದ ಯಾತ್ರೆ ಶುರುವಾಗುವದು ಮೊದಲ ಹೆಜ್ಜೆಯಿಂದಲೇ!
೨. ತೆಲುಗು ಭಾಷೆಯ ಗಾದೆ (ಅವರು ತೆಲುಗುನಲ್ಲಿ ಹೇಳಿಯೂ ಹೇಳಿದರು; ತುಂಬಾ ಕಾವ್ಯಾತ್ಮಕವಾಗಿತ್ತು):
ಕತ್ತಲು, ಕತ್ತಲು ಎಂದು ಅದೇನು ಕೊರಗುತ್ತೀಯ, ಒಂದು ದೀಪವನ್ನಾದರೂ ಹಚ್ಚು!
ಕಠಿಣವಾದ ಸಮಸ್ಯೆಗಳನ್ನು ಜಾಣತನದಿಂದ, ಸರಳವಾಗಿ ಬಗೆಹರಿಸುವದು ಹೇಗೆ ಎಂದು ವಿವರಿಸಿದ ಪ್ರಾಚಾರ್ಯರು ಗಣಿತದಿಂದ ಕಲಿತದ್ದನ್ನು ನಿಜಜೀವನಕ್ಕೆ ಉಪಯೋಗಿಸಿದಷ್ಟೇ, ನಿಜಜೀವನದಿಂದ ಕಲಿತದ್ದನ್ನು ಗಣಿತದ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸಿಕೊಟ್ಟಿದ್ದಾರೆ. ಬಹುಆಯಾಮಗಳ ಬುಗ್ಗೆಯಂತಹ ವ್ಯಕ್ತಿ ಇವರು. ಸದ್ಯಕ್ಕೆ ಅಮೇರಿಕೆಯಲ್ಲಿ ತಾವು ಕೊಂಡಿರುವ ಹನ್ನೆರಡು ಎಕರೆ ಜಮೀನಿನಲ್ಲಿ ಪ್ರಾಕೃತಿಕವಾದ ಕಾಡನ್ನು ಬೆಳೆಸುವದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ. ದೇಹದ ಎಲ್ಲಾ ಭಾಗಗಳಿಗೂ ಶುಭವಾಗುವಂತಹ ವ್ಯಾಯಾಮಗಳನ್ನು ನಿರೂಪಿಸಿರುವುದಲ್ಲದೇ, ತಮ್ಮ ವೆಬ್-ಸೈಟ್-ನಲ್ಲಿ ಅವುಗಳ ವೀಡಿಯೋ ಕೂಡ ಇಟ್ಟಿದ್ದಾರೆ ಇಳಿವಯಸ್ಸಿನ ಈ ತರುಣ!

ಪಂಜಾಬಿಗಳಿಂದ ದೂರ ...

ಮುಂದಿನ ಹದಿನೈದು ದಿನಗಳನ್ನು ದಿಲ್ಲಿಯ ತಾಪದಿಂದ, ಗುಡುಗುವ ಹರ್ಯಾನ್ವಿಗಳಿಂದ, ಕುಣಿಯುವ ಪಂಜಾಬಿಗಳಿಂದ, ದುರುಗುಟ್ಟುವ ಕಾರು ಡ್ರೈವರುಗಳಿಂದ ದೂರವಾದ, ಪ್ರಶಾಂತವಾದ ಮೈಸೂರಿನಲ್ಲಿ ಕಳೆಯಲಿದ್ದೇನೆ. ಮೇ ತಿಂಗಳ ಕೊನೆಯಲ್ಲಿ ಬರುವ ಮಳೆಯನ್ನು ದಿಲ್ಲಿಯಾಗಲೇ ಕಂಡಿದೆ. ಇನ್ನು ಕುದಿಯಲು ಶುರುವಾದರೆ ಮಾನ್ಸೂನ್ ಬಂದಾಗಲೇ ಸ್ವಲ್ಪ ಮಟ್ಟಿಗೆ ತಣಿಯುವದು. ಹದಿನೈದು ದಿನಗಳಿಗಾದರೂ ಈ ಸೆಕೆಯಿಂದ ಮುಕ್ತಿ ಪಡೆಯುವುದೇ ನನ್ನ ಮುಖ್ಯ ಉದ್ದೇಶ. ಮೈಸೂರಿನಲ್ಲಿ ಬ್ಲಾಗಿಸುವಂತ ಘಟನೆ ನಡೆಯುವದು ಕಷ್ಟವೇ! ಏನಾದರೂ ಸಿಗಬಹುದು, ಸಿಕ್ಕರೆ ವಾಪಸಾದ ಮೇಲೆ ಬ್ಲಾಗಿಸುತ್ತೇನೆ.

ಕುರೋಸಾವಾರ ಚಿತ್ರಗಳು





ಕುರೋಸಾವರ ಏಳು ಸಮುರಾಯಿಗಳು (seven samurai), ಇಕುರು, ರಹಸ್ಯ ಕೋಟೆ (the hidden fortress), ಆತ್ಮ ರಕ್ಷಕ (yojimbo), ಸಂಜೂರೋ, ರಕ್ತಸಿಂಛಿತ ಸಿಂಹಾಸನ (the throne of blood), ರಾಶೋಮನ್, ಮತ್ತು ಮಾದದೆಯೋ ಚಿತ್ರಗಳನ್ನು ನೋಡಿ ಪಡೆದ ಆನಂದವೇ ಈ ಲೇಖನಕ್ಕೆ ಕಾರಣ. ಇಲ್ಲಿ ಕುರೋಸಾವರ ಚಿತ್ರಗಳ ವಿಮರ್ಶೆಯಿಲ್ಲ. ಅವರ ಚಿತ್ರಗಳನ್ನು ನೋಡಿದ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನವಿದೆ.ಇವುಗಳಲ್ಲಿ ರಹಸ್ಯ ಕೋಟೆ, ಯೊಜಿಂಬೋ, ಮತ್ತು ಸಂಜೂರೊ ಒಂದೇ ಗುಂಪಿನ ಚಿತ್ರಗಳೆನ್ನಬಹುದು. ಇವುಗಳ ಬರುವನ್ನು ಸಾರುತ್ತ ಬಂದಂತಿದೆ, ಏಳು ಸಮುರಾಯಿಗಳು. ಉಳಿದ ಚಿತ್ರಗಳಲ್ಲಿ ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ ಒಂದೇ ಗುಂಪಿನವು. ಇಕುರು ಮತ್ತು ಮಾದದೆಯೋ ಸ್ವತಂತ್ರವಾಗಿ ಮೂಡಿ ಬಂದ ಚಿತ್ರಗಳು. ಇಕುರು ಯುರೋಪಿನ existentialismನಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು. ಜಪಾನಿನ ತಮ್ಮ ಸಮಕಾಲೀನ ಪರಿಸ್ಥಿತಿ ಮತ್ತು ಸಂಸ್ಕೃತಿಯೊಂದಿಗೆ ಅನುಕಂಪ ಬೆಳೆದ ಮೇಲಿನ ಹೇಳಿಕೆ, ಮಾದದೆಯೊ. ಮನುಷ್ಯರ ಅಸ್ತಿತ್ವದ, ನಡುವಳಿಕೆಯ ಹಲವು ಆಯಾಮಗಳ ಬಗ್ಗೆ ಕುರೋಸಾವರಿಗಿರುವ ಕುತೂಹಲವೇ ಈ ಎಲ್ಲ ಚಿತ್ರಗಳನ್ನು ಒಂದುಗೂಡಿಸಿದೆ.

ನಾನು ಮೇಲೆ ಮಾಡಿರುವ ವರ್ಗೀಕರಣವನ್ನು ವಿವರಿಸುವ ಅಗತ್ಯವಿದೆ. ಕುರೋಸಾವರ ಚಿತ್ರಗಳಲ್ಲಿ ನಮ್ಮ ಮತ್ತು ಕುರೋಸಾವರ ಕುತೂಹಲವನ್ನು ಕೆರಳಿಸುವವರು ಸಮುರಾಯಿಗಳು - ಅಂದರೆ ಗುತ್ತಿಗೆಯ ಯೋಧರು (ಇವರನ್ನು ರಾಜರಿಂದ ಹಿಡಿದು ಹಳ್ಳಿಯ ರೈತರು ಕೂಡ ಉಪಯೋಗಿಸಿಕೊಳ್ಳುತ್ತಿದ್ದರು). ಅವರ ಹಾವ ಭಾವಗಳನ್ನು ಕುರೋಸಾವ ಪೂರ್ತಿಯಾಗಿ ಕಲ್ಪಿಸಿಕೊಳ್ಳಬಲ್ಲರು. ಅವರ ಸಾಮಾಜಿಕ ಬದುಕು ಮತ್ತು ಧೋರಣೆಯ ಬಗ್ಗೂ ಕುರೊಸಾವಾರಿಗೆ ಸಹಾನುಭೂತಿಯಿದೆ. ಒಂದು ರೀತಿಯಲ್ಲಿ ಅವರು ಅವರ ಪ್ರೀತಿಪಾತ್ರರು. ಆದರೂ, ಅವರಿಗೆ ಅವರ ಅಂತರಂಗವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಆಗಿಲ್ಲ. ಸಮುರಾಯಿಗಳು ಈ ಆತ್ಮೀಯತೆಯ ಮತ್ತು ಕುತೂಹಲದ ಭವ್ಯ ಮಿಶ್ರಣಗಳಾಗಿ, ಸಾಹಸಮಯ ಪ್ರಸಂಗಗಳಾದ ಯೊಜಿಂಬೊ, ಸಂಜೂರೋ, ಮತ್ತು ಆತ್ಮರಕ್ಷಕಗಳಲ್ಲಿ ಹೊರಹೊಮ್ಮಿದ್ದಾರೆ. ಈ ಮೂರೂ ಚಿತ್ರಗಳಿಗೆ ಪೀಠಿಕೆಯೆಂಬಂತೆ ಮೂಡಿಬಂದಿರುವದು, ಏಳು ಸಮುರಾಯಿಗಳು. ಇದು ಐತಿಹಾಸಿಕ, ಜಾನಪದ ಕತೆ ಹೇಳುವಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಮಾನವರು ತಮ್ಮ ಸಹಜ ನಡುವಳಿಕೆಯ ಹೊರತಾಗಿ, ಪ್ರಚೋದನೆಯ ಅಡಿಯಲ್ಲಿ ನಾವು ಗುರುತಿಸಲೇ ಸಾಧ್ಯವಾಗದಂತವರಾಗಿ ಕಾಣಬರುತ್ತಾರೆ. ಮಾನವರ ಈ ಅಸ್ತಿತ್ವದ ಬಗ್ಗೆ ನಮ್ಮ ಅರಿವಿಕೆಯನ್ನು ಹೆಚ್ಚಿಸುವ ಚಿತ್ರಗಳೆಂದರೆ, ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ. ಇಕುರು, ಪಾಶ್ಚಿಮಾತ್ಯ ಸಾಹಿತ್ಯ ಮತ್ತು ನಾಟಕಗಳಿಂದ ಪ್ರಭಾವಿತವಾದದ್ದು. ಅನೇಕ ಕಾರಣಗಳಿಂದ ಈ ಚಿತ್ರ ನನಗೆ ದೂರವಾಗೇ ಉಳಿಯಿತು. ಮಾದದೆಯೋ ಕುರೋಸಾವಾರ ಅರಳು-ಮರಳು ಎಂಬಂತಿದೆ.

ಕುರೊಸಾವರ ನೈಪುಣ್ಯತೆ ಚಲನ ಚಿತ್ರ ಮಾಧ್ಯಮದ ಎಲ್ಲ ಅಂಶಗಳನ್ನೂ ಒಳಗೊಂದಿದೆ. ತಾಂತ್ರಿಕತೆ, ಕಥೆಯ ನಿರೂಪಣೆ ಮತ್ತು ಪಾತ್ರ ಸೄಷ್ಟಿ. ವೈಯಕ್ತಿಕವಾಗಿ ನನ್ನನ್ನು ಆಕರ್ಷಿಸುವದು ನಿರೂಪಣ ಕೌಶಲ್ಯ ಮತ್ತು ಪಾತ್ರ ಸೃಷ್ಟಿ. ಅವರ ಮೆಚ್ಚುಗೆಯ ಸಂಜೂರೊ ನಮಗೂ ಚಿರಪರಿಚಿತನಾದರೆ ಆಶ್ಚರ್ಯವೇನಿಲ್ಲ. ಇದರಲ್ಲಿ ಅವರ ನಟರ ತಂಡದ ಯೋಗದಾನ ಅಷ್ಟೇ ಮಹತ್ವದ್ದು. ಹಾಗೆಂದು, ಅವರ ತಾಂತ್ರಿಕತೆಯ ಬಗ್ಗೆ ನಾವು ನಿರ್ಲಿಪ್ತರಾಗಿರಲು ಸಾಧ್ಯವಿಲ್ಲ. Dedicated to the memory of Kurosava ಎಂದು ಮಾಡಿರುವ ಚಿತ್ರಗಳನ್ನು ನೋಡಿದರೆ, ಇವರು ಕುರೋಸಾವಾನಿಂದ ಒಂದಿನಿತಾದರೂ ಪ್ರಭಾವಿತರಾಗಿದ್ದರೇ ಎಂಬ ಪ್ರಶ್ನೆಯೇಳುತ್ತದೆ (ಪ್ರಮುಖವಾಗಿ ಹಿಂದಿಯ "ಚೈನಾ ಗೇಟ್" ಎಂಬ ಚಿತ್ರವನ್ನು ಗಮನಿಸಿ..ಬೇಕಾದಷ್ಟು ಇಂಗ್ಲಿಷ್ ಚಿತ್ರಗಳೂ ಇವೆ). ನಂತರ ಹೊಳೆಯುವದೇನೆಂದರೆ ಈ ನಿರ್ದೇಶಕರುಗಳು ಕುರೋಸಾವರ ತಾಂತ್ರಿಕತೆಯಿಂದ ಮಾತ್ರ ಪ್ರಭಾವಿತರಾಗಿದ್ದಾರೆ ಎಂಬುದು.

ಸಾಹಿತ್ಯ ಹಾಗೂ ನಾಟಕಗಳಂತೆ, ಚಲನಚಿತ್ರ ಮಾಧ್ಯಮಕ್ಕೂ ತನ್ನದೇ ಆದ ವಿಶೇಷ ಸಾಧ್ಯತೆಗಳಿವೆ. ಈ ಸಾಧ್ಯತೆಗಳನ್ನು ಸಾಕ್ಷಾತ್ಕಾರಗೊಳಿಸುವವನು ನಿರ್ದೇಶಕ. ಗುರಿ ಸಾಧಿಸಲು ತಂತ್ರಜ್ಞರ ಮತ್ತು ನಟರ ತಂಡವನ್ನು ಉಪಯೋಗಿಸುತ್ತಾನೆ. ಆದರೆ, ಅವರೆಲ್ಲರನ್ನೂ ಉಪಯೋಗಿಸಿಕೊಂಡು ತನ್ನ ಕಲ್ಪನೆಗೆ ರೂಪ ಕೊಡುವದರಲ್ಲೇ ಇರುವದು ಅವನ ತಾಂತ್ರಿಕತೆ. ಇವತ್ತು ಕುಶಲತೆ ಎಂದ ತಕ್ಷಣ ತಂತ್ರಜ್ಞಾನದ ಸಮರ್ಥ ಬಳಕೆ ಎಂಬ ಧೋರಣೆಯಿದೆ. ಕುರೊಸಾವರ ಕುಶಲತೆ ಇದನ್ನು ಮೇರಿದ್ದು. ಆದರೂ, ಮೊದಲು ತಂತ್ರಜ್ನಾನದ ಅವಶ್ಯಕತೆಯಿರುವ ಕೆಮೆರಾ, ಶಬ್ದ ಗ್ರಹಣ, ಹಿನ್ನೆಲೆ ಸಂಗೀತಗಳನ್ನು ಗಮನಿಸಿ ಮುಂದುವರಿಯೋಣ.

ಕೆಮರ ಕೆಲಸಕ್ಕೆ ಏಳು ಸಮುರಾಯಿ ಚಿತ್ರವನ್ನೇ ಉದಾಹರಣೆಯನ್ನಾಗಿ ಬಳಸೋಣ. ಈ ಚಿತ್ರದ ಕೆಮರಾ ಕೆಲಸ ಮತ್ತು ಸಿನೆಮಾಟೋಗ್ರಾಫೀ ಅದ್ಭುತವಾಗಿದೆ. ಚಿತ್ರದಲ್ಲಿ ಮೂರು ಕೆಮರಾಗಳು ಕೆಲಸ ವಹಿಸಿದಂತಿದೆ. ಒಂದು ಕೆಮರಾಕ್ಕೆ ಪಾತ್ರಗಳ ಬಗ್ಗೆ ವಿಶೇಷ ಒಲವು. ಯಾವಾಗಲೂ ಪಾತ್ರಗಳ ಸುತ್ತಮುತ್ತಲೇ ಇದ್ದು, ಅವರ ಹಾವಭಾಗಳನ್ನು ಕಲಿಯುತ್ತಾ ತನ್ನೊಂದಿಗೆ ನಮಗೂ ಪತ್ರಗಳನ್ನು ಪರಿಚಯಿಸುತ್ತದೆ. ಅದರಲ್ಲೂ ರೈತ ಕುಲದಿಂದ ಬಂದು ವಿದೂಷಕನಂತೆ ವರ್ತಿಸುವ ಸಮುರಾಯಿಯ ಪಾತ್ರ, ಎಲ್ಲಿ ಹಸಿವೆಯಿಂದ ನರಳಿ ಪ್ರಾಣ ಬಿಡುವೆನೇನೋ ಎಂದು ಹೆದರಿ ಯಾವಾಗಲು ಮುಖ ಕಪ್ಪಿಟ್ಟಿರುವ ರೈತನ ಪಾತ್ರಗಳು ಮಾತಾಡದಿದ್ದರೂ ನಮಗೆ ಕೆಮರಾವೇ ಪರಿಚಿಯಸಿ ಕೊಡಬಲ್ಲುದು. ಈ ತಂತ್ರ ಸ್ವಾಭಾವಿಕ ಎಂದು ನಮಗನಿಸಬಹುದು. ಸ್ವಾಭಾವಿಕವಾದದ್ದನ್ನು ಒಪ್ಪಿ, ಶೄದ್ಢೆಯಿಂದ ಸಮರ್ಪಕವಾಗಿ ನಿರೂಪಿಸುವದು ಹಿರಿಮೆಯ ಸಂಕೇತ. ಇತ್ತೀಚಿನ ಏಷ್ಟೋ ಚಿತ್ರಗಳಲ್ಲಿ ಮುಖ್ಯ ಭೂಮಿಕೆಯವರ ಕಣ್ಣೊಳಗೆ ಕೂಡ ಓಡಾಡಿದ ಕೆಮರಾ ವ್ಯಕ್ತಿಯನ್ನು ನಮಗೆ ಪರಿಚಯಿಸುವಲ್ಲಿ ವಿಫಲವಾದ ಉದಾಹರಣೆಗಳು ನೆನಪಿಗೆ ಬರುತ್ತವೆ. ಇನ್ನೊಂದು ಕೆಮರಾ ಪಾತ್ರಗಳ ಬಗ್ಗೆ ನಿರ್ಲಿಪ್ತ. ಅದರ ಆಸಕ್ತಿ ಇರುವದೆಲ್ಲ ಕಾಲ ಚಿತ್ರಣದ ಬಗ್ಗೆ. ಆ ಕಾಲದ ಬಗ್ಗೆ ನಮ್ಮಲ್ಲಿ ಒಂದು ಊಹಾಲೋಕವನ್ನು ಸೄಷ್ಟಿಸುವ ಬಗ್ಗೆ. ಈ ಕೆಮರಾವನ್ನು ಕುರೋಸಾವ ವಿರಳವಾಗಿ ಉಪಯೋಗಿಸುತ್ತಾರೆ. ಇಲ್ಲವಾದರೆ Documentary ಆಗುವ ಅಪಾಯವಿದೆ. ಸಮುರಾಯಿಗಳನ್ನು ಹುಡುಕಲು ಹೋದಾಗ ಕಂಡುಬರುವ ಪೇಟೆಯ ಚಿತ್ರಣ, ಹಳ್ಳಿಯ ಹಿರಿಯನನ್ನು ಸಮಾಲೋಚಿಸಲು ಹೊರಟ ಹಳ್ಳಿಗರ ಚಿತ್ರಣ ಮುಖ್ಯ ಉದಾಹರಣೆಗಳು. ಮಧ್ಯಕಾಲೀನ ಜಪಾನಿನ ಹಳ್ಳಿಗಳ ಜೀವನದ ಬಗ್ಗೆ ಪ್ರತಿ ಪ್ರೇಕ್ಷಕನಲ್ಲೂ ಒಂದು ಲೋಕ ಉದ್ಭವಗೊಳ್ಳುತ್ತದೆ. ಒಮ್ಮೆ ಹಿಂದಿಯ ಚೈನಾ ಗೇಟ್ ಚಿತ್ರವನ್ನು ಜ್ಞಾಪಿಸಿಕೊಳ್ಳಿ. ಅಲ್ಲಿಯ ಹಳ್ಳಿ ಭಾರತದ ಯಾವ ಕಾಲದ ಹಳ್ಳಿಯಂತೆ ಕಾಣುತ್ತದೆ? ಮೂರನೆಯ ಕೆಮರಾ ಪಾತ್ರಗಳ ಸಾಹಸ ಮತ್ತು ನಿಸರ್ಗದ ಸೌಂದರ್ಯ ಇವುಗಳನ್ನು ಹಿಡಿದಿಡುತ್ತದೆ. ದೂರದ ಶಾಟ್-ನಿಂದ ಹತ್ತಿರದ ಶಾಟ್-ಗೂ, ಹತ್ತಿರದ ಶಾಟ್-ನಿಂದ ದೂರದ ಶಾಟ್-ಗೂ ತೇಲಾಡುತ್ತ ಮೋಜನ್ನೇ ಕಟ್ಟುತ್ತದೆ. ವಸಂತದಲ್ಲಿ ಅರಳಿರುವ ಹೂವುಗಳನ್ನು ಚಿತ್ರದ ಮೊದಲಿನಿಂದ ಹಿಡಿದು ಕೊನೆಯವರೆಗೂ ಗುರುತಿಸಿ, ಹಿಂಬಾಲಿಸುತ್ತದೆ. ಜಪಾನಿನ ಗುಡ್ಡ ಕಣಿವೆಗಳ ಮಧ್ಯದಲ್ಲಿ ಸುಳಿದ ಗಾಳಿಗೆ ನಲಿದಾಡುವ ಹುಲ್ಲು, ಗುಡ್ಡಗಳ ಮಧ್ಯದಲ್ಲೇ ನೇರವಾಗಿ ಏರುವ ಕಾಲ್ದಾರಿಗಳು, ಕುದುರೆಗಳ ಓಟ, ಸಮುರಾಯಿಗಳ ಖಡ್ಗ ವರಸೆ, ಒಂದೇ, ಎರಡೇ!


ಎಲ್ಲೆಲ್ಲೂ ಅರಳಿರುವ ಹೂಗಳು!

ಕುರೋಸಾವ ತಮ್ಮ ಚಿತ್ರಗಳು ಪರದೆಯ ಮುಂದೆ ಕುಳಿತಿರುವರಿಗೆಲ್ಲಾ (ಯಾವುದೇ ದಿಕ್ಕಿನಲ್ಲಿ ಕುಳಿತಿದ್ದರೂ) ಸಮಾನವಾದ ಅನುಭವ ನೀಡಲು ವಿಶೇಷವಾದ ಲೆನ್ಸ್-ಗಳನ್ನು ಉಪಯೋಗಿಸುತ್ತಿದ್ದರು. ತಂತ್ರಜ್ಞಾನದ ಬಳಕೆಯಲ್ಲಿ ಸವಾಲೊಡ್ಡುವ ಶಬ್ದ ಗ್ರಹಣ ಮತ್ತು ಹಿನ್ನೆಲೆ ಸಂಗೀತಗಳ ವಿಷಯದಲ್ಲಂತೂ ಕುರೋಸಾವ ನುರಿತವರು. leitmotif ನ ತಂತ್ರವನ್ನು ಸಿನೇಮಾಕ್ಕೆ ಕೊಟ್ಟವರೇ ಅವರಿರಬೇಕು. ಅದನ್ನೇ ವಿಪರೀತವಾಗಿ ಬಳಸಿ ನಿರ್ವಿಕಾರಗೊಳಿಸಲಾಗಿದೆ ಬಾಲಿವುಡ್ ಮತ್ತು ಹಾಲಿವುಡ್-ಗಳಲ್ಲಿ. ಕುರೋಸಾವ leitmotif ನ್ನು ಚೆನ್ನಾಗಿ ಬಳಸುತ್ತಾರೆ. ಇದರ ಉತ್ತಮ ನಿದರ್ಶನಕ್ಕೆ ನಾವು ರಹಸ್ಯದ ಕೋಟೆ ಅಥವಾ ಯೊಜಿಂಬೋವನ್ನು ಗಮನಿಸಬೇಕು. ಹಿನ್ನೆಲೆ ಸಂಗೀತ ಮತ್ತು ಪರದೆಯ ಮುಂದಿನ ಚಿತ್ರಗಳ ಒಡನಾಟ ಮತ್ತು ಅವುಗಳ ಮನೋಜ್ಞ ಸಂಗಮವನ್ನು ಸಾಧಿಸುವದರ ಬಗ್ಗೆ ಕುರೋಸಾವರ ಯೋಚನೆಗಳು ಅವರ ಲೇಖನದಲ್ಲಿ ದರ್ಜಾಗಿವೆ. ಕಥೆಯನ್ನು ಹೇಳುವ ರೀತಿಯೂ ತಾಂತ್ರಿಕತೆಯ ಅಂಶ. ಅದನ್ನು ಪ್ರತ್ಯೇಕವಾಗಿ ವಿಮರ್ಶಿಸೋಣ. ಇಂದಿಗೂ ಸಮಯಾನುಸಾರ ನೇರವಾಗಿರದೆ, ಹಿಂದಿಂದ ಮುಂದಕ್ಕೆ, ಮುಂದಿಂದ ಪಕ್ಕಕ್ಕೆ, ಅಲ್ಲಿಂದ ಹಿಂದಕ್ಕೆ ಹೀಗೆ ಕಾಲಕ್ರಮವಿಲ್ಲದೆ ಕತೆ ಹೇಳುವ ತಂತ್ರದ ಮಾದರಿಯಾಗಿದೆ. ಕುರೋಸಾವರ ನೆನಪಿಗೆ ಅರ್ಪಿಸಿದ ಚಿತ್ರಗಳೆಲ್ಲ ಅನುಕರಿಸುವದು ಈ ತಾಂತ್ರಿಕ ಕುಶಲತೆಯನ್ನೇ (ಇಂದಿನ ತಂತ್ರಜ್ಞಾನದ ಸಹಾಯದಿಂದ ಅವರನ್ನೂ ಮೀರಿಸುತ್ತವೆಯೇನೋ!). ಆದರೆ, ಅವು ನೀರಸವಾಗುವುದೇಕೆಂದರೆ, ಕುರೋಸಾವರ ಚಿತ್ರಗಳಲ್ಲಿರುವ ಉಳಿದ ಅಂಶಗಳನ್ನು ಕಡೆಗಣಿಸುವಲ್ಲಿ. ಕುರೊಸಾವರ ಚಿತ್ರಗಳಲ್ಲಿ ತಾಂತ್ರಿಕತೆಯ ಹೊರತಾಗಿ ಅನೇಕ ರಸಗಳಿವೆ. ಅವೇ ನನ್ನನ್ನು ಇಷ್ಟೊಂದು ಚಿತ್ರಗಳುದ್ದ ಹಿಡಿದಿಟ್ಟಿದ್ದು.

ಕುರೋಸಾವ ಕುಶಲಿಗ ಎಂಬುದನ್ನು ಸಿದ್ಧಪಡಿಸುವ ಅವಶ್ಯಕತೆ ಇಲ್ಲ. ಅದರೆ, ಅವರ ಚಿತ್ರಗಳನ್ನು ನೋಡಿದ ಮೇಲೆ ನಮ್ಮೊಡನೆಯೇ ಉಳಿದು, ನಾವು ಪದೇ ಪದೇ ಮೆಲಕು ಹಾಕುವ ಅಂಶಗಳು ಯಾವವು? ಈ ಕುರಿತು ವೈಯಕ್ತಿಕ ಅನುಭವ ಮತ್ತು ಗೆಳೆಯರ ಅನುಭವಗಳನ್ನು ಆಧಾರವಾಗಿ ಇಟ್ಟುಕೊಂಡು ಹೇಳುವದಾದರೆ, ಅವು ಎರಡು: ಮೊದಲನೆಯದಾಗಿ ಪಾತ್ರ ಬೆಳೆವಣಿಗೆ ಮತ್ತು ಎರಡನೆಯದಾಗಿ ಮನುಕುಲದ ಬಗ್ಗೆ ಕುರೋಸಾವರ ಸೂಕ್ಷ್ಮವಾದ ಅರಿವು (ಇದು ತೋರಿಕೆಯದ್ದಲ್ಲ, ಸಹಜವಾಗಿ ಅವರಿಗೆ ವ್ಯಕ್ತಿಗತವಾದದ್ದು). ಮೊದಲು ಪಾತ್ರಗಳ ರಚನೆಯನ್ನು ಗಮನಿಸೋಣ. ಕುರೋಸಾವರ ಬಗ್ಗೆ ಯೋಚಿಸಿದಾಗಲೆಲ್ಲಾ ನೆನಪಾಗುವದು ಅವರ ಚಿತ್ರಗಳಲ್ಲಿನ ಮಿಫುನೆಯ ದಶಾವತಾರವೆ! ಹಲವಾರು ಚಿತ್ರಗಳಲ್ಲಿ ಅದ್ಭುತವಾದ ಪಾತ್ರಗಳನ್ನು ಬೆಳೆಸಿದ್ದಾರೆ, ಈ ಇಬ್ಬರು. ರಹಸ್ಯದ ಕೋಟೆಯಲ್ಲಂತೂ ಮಾತುಕತೆಗಳ ಅವಶ್ಯಕತೆಯಿಲ್ಲದೆಯೇ ಮಿಫುನೆಯ ಪಾತ್ರ ಜೀವಂತವಾಗುತ್ತದೆ.

ಮೇರುನಟ ಮಿಫುನೆ


ಕುರೊಸಾವಾಗೆ ಕಥೆಯಲ್ಲಿ ಹಾಸ್ಯವಿರಬೇಕು. ಹಾಗೆಂದು ಲೇವಡಿಯ ಹಾಸ್ಯವಾಗಲಿ ಅಥವ ಹಾಸ್ಯಕ್ಕೆಂದೇ ನಿರ್ಮಿಸಿದ ಪಾತ್ರಗಳಿಂದಲ್ಲ. ಹಾಸ್ಯ, ಪಾತ್ರ ಬೆಳೆವಣಿಗೆಯ ಸಾಧನವಾಗಿದೆ. ಯೊಜಿಂಬೊದಲ್ಲಿ ಒಬ್ಬ ಖಳನಾಯಕ ಪಟ್ಟಣಕ್ಕೆ ಹೊಸತಾದ ಪಿಸ್ತೂಲನ್ನು ತಂದು, ಉಳಿದವರ ಮೇಲೆ ಮೇಲುಗೈ ಸಾಧಿಸುತ್ತಾನೆ. ಆದರೆ, ಪ್ರತಿಸಲ ಅವನು ಪಿಸ್ತೂಲನ್ನು ತೆಗೆದಾಗಲೂ ನಾವು ನಗುತ್ತೇವೆ. ಅವನ ಪಿಸ್ತೂಲು ಅವನಿಗೆ ಗಂಭೀರತೆಯನ್ನು ಕೊಡದೆ ಹಾಸ್ಯಮಯವಾದ ಕೋಡನ್ನು ಕೊಡುತ್ತದೆ! ಏಳು ಸಮುರಾಯಿಗಳ ನಾಯಕನ ನೆನಪಾಗುತ್ತದೆ. ಯಾವಾಗಲೂ ಮುಗುಳ್ನಗುತ್ತಲೇ ತನ್ನ ತಲೆಯನ್ನು ನೇವರಿಸಿಕೊಳ್ಳುತ್ತಾನೆ. ಅವನಿಗೆ ಯಾವದು ಮೋಜು ಎಂದು ಅನಿಸುತ್ತಿದೆಯೋ ಅದು ನಮಗೂ ಹಾಗೇ ಕಾಣುತ್ತದೆ. ರಹಸ್ಯದ ಕೋಟೆಯಲ್ಲಿ ಸಾಹಸದ ಜೊತೆಗೆ ಕುರೋಸಾವನನ್ನು ಸೋಜಿಗಗೊಳಿಸುವ ಪಾತ್ರಗಳೆಂದರೆ, ಇಬ್ಬರು ರೈತರು. ಅವರಿಗೆ ತಾವಿಬ್ಬರೂ "ಪಾಪದವರು" ಎಂದು ಅನಿಸಿದರೂ, ಅವರ ಕುಂದುಗಳನ್ನು ಕುರೋಸಾವ ಚೆನ್ನಾಗಿ ಬಲ್ಲರು. ಸ್ವಾರ್ಥ, ಆಸೆಬುರುಕುತನ, ಎಲ್ಲ ನೀತಿ ನಿಯಮಗಳನ್ನು ಬದಿಗೊಡ್ಡಿ ಸಮಯ ಸಾಧನೆ ಇವೆಲ್ಲವೂ ಅವರಲ್ಲಿವೆ. ಚಿತ್ರದ ಹಲುವ ಹಂತಗಳಲ್ಲಿ ಅವರ ನಡುವಳಿಕೆ ತುಚ್ಛವಾಗಿಯೂ, ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ, ಕೆಲವೊಮ್ಮೆ ದಯನೀಯವಾಗಿಯೂ ಕಾಣುತ್ತದೆ. ಮಲಗಿರುವ ರಾಜಕುಮಾರಿಯನ್ನು ನೋಡಿ ಚಪ್ಪರಿಸುತ್ತ ಒಬ್ಬ ರೈತ ಇನ್ನೊಬ್ಬನಿಗೆ, ತನ್ನ ಕೈಯಲ್ಲಿರುವ ಎರಡು ಕಡ್ಡಿಗಳನ್ನು ತೋರಿಸುತ್ತಾ, "ನೀನು ಒಂದನ್ನು ಆರಿಸು; ಯಾರ ಕೈಯಲ್ಲಿ ಚಿಕ್ಕ ಕಡ್ಡಿ ಇರುತ್ತದೋ, ಅವನು ಸ್ವಲ್ಪಕಾಲ ಮಾಯವಾಗಬೇಕು" ಎನ್ನುತ್ತಾನೆ. ಇಬ್ಬರೂ ಒಪ್ಪುತ್ತಾರೆ. ಆದರೆ ಪ್ರೇಕ್ಷಕರಾದ ನಮಗೆ ಅವರ ಈ ಕುತಂತ್ರ ಹಾಸ್ಯಾಸ್ಪದವಾಗಿ ಕಾಣುತ್ತದೆ. ನಗುತ್ತೇವೆ. ನಗುವಿನ ನಂತರವೇ ಚಿಂತನೆ ಎಂದು ಕುರೋಸಾವ ಅರಿತಂತಿದೆ. ನಿಜ ಹೇಳಬೇಕೆಂದರೆ, ಅವರ ಚಿತ್ರಗಳಲ್ಲಿ ಮಾನವ ಪೄವೄತ್ತಿ ನಿರಾಶಾದಾಯಕವಾಗಿಯೂ, ಚಿಂತಾತ್ಮಕವಾಗಿಯೂ ಮೂಡಿಬಂದಿರುವದು ನಿಜ. ಮಾನವ ಅಸ್ತಿತ್ವದ ಶೋಚನೀಯ, ಭಯಾನಕ ಮಜಲುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಮಂಡಿಸುವದಾಗಲೀ ಅಥವಾ ಸಾಂಕೇತಿಕವಾಗಿ ಸೂಚಿಸುವದಾಗಲಿ ಅವರ ಉದ್ದೇಶವಲ್ಲ. ಹಾಗೆ ಮಾಡಿದಾಗ, ನಾವು ಸ್ವಾಭಾವಿಕವಾಗಿಯೇ ಅದಕ್ಕೆ ಸ್ಪಂದಿಸುತ್ತೇವೆ. ಆ ಸ್ಪಂದನೆ, "ನಾವು ಈ ದುರಂತಕ್ಕೆ ಸ್ಪಂದಿಸಿದೆವು" ಎಂಬ ಹುಸಿ ನೆಮ್ಮದಿಯನ್ನು ಕೊಡುತ್ತದೆ. ಉದಾಹರಣಿಗೆ, "ನನ್ನ ಒಲುಮೆಯ ಹಿರೋಶಿಮ" ಎಂಬ ಚಿತ್ರವನ್ನು ತೆಗೆದುಕೊಳ್ಳೋಣ. ಬಹಳ ಸುಲಭವಾಗಿ ಇಷ್ಟವಾಗುವ ನಿರೂಪಣೆ ಅದರಲ್ಲಿಲ್ಲ. ಆದರೂ ಆ ಚಿತ್ರವನ್ನು ಮೆಚ್ಚುವವರ ಸಂಖ್ಯೆ ಬಹಳ. ಗಂಭೀರವಾದ ವಿಷಯ ಮತ್ತು ಬಳಸಿರುವ ತಾಂತ್ರಿಕತೆ ಬೇಗ ಮನಸ್ಸಿಗೆ ನಾಟುತ್ತದೆ. ಮಾನವಕುಲದ ಒಂದು ದುರಂತಕ್ಕೆ ನಾವು ಸ್ಪಂದಿಸಿದ ಅನುಭವ ಸಿಗುತ್ತದೆ. "ಎಲ್ಲರೂ ನೊಡಲೇಬೇಕಾದ, ನೋಡಿ ಕಲಿಯಲೇ ಬೇಕಾದ ಚಿತ್ರ" ಎಂದು ಹೇಳುತ್ತೇವೆ. ಅದಾದ ಮೇಲೆ ಅದರ ಬಗ್ಗೆ ಎಷ್ಟು ಯೋಚಿಸುತ್ತೇವೆ ಎಂಬುದು ಎಲ್ಲರ ಊಹೆಗೆ ಬಿಟ್ಟದ್ದು. ಆದರೆ, ಕುರೋಸಾವಾ ಇದರ ವಿರುದ್ಧವಾದ ತಂತ್ರವನ್ನು ಬಳಸುತ್ತಾರೆ. ಅವರು ಮಾನವರ ವಿಕಾರ ಪರಿಸ್ಥಿತಿಯ ಬಗ್ಗೆ ಮೊದಲು ನಮ್ಮನ್ನು ನಗಿಸುತ್ತಾರೆ. ನಗು ನಿಂತ ಮೇಲೆ ಬರುವ ಯೋಚನೆಗಳು ಪ್ರೇಕ್ಷಕರ ಸ್ವಂತದ್ದಾಗಿದ್ದು, ಹೆಚ್ಚಿನ ಪರಿಣಾಮ ಬೀಳಬಲ್ಲದು ಎಂಬುದು ಅವರ ಸಿದ್ಧಾಂತ ಎಂದು ಅನಿಸುತ್ತದೆ.

ಸಾಹಿತ್ಯ ಹಾಗೂ ನಾಟಕಗಳನ್ನು ಚಲನಚಿತ್ರ ಮಾಧ್ಯಮಕ್ಕೆ ಅಳವಡಿಕೊಳ್ಳುವಲ್ಲೂ ಕುರೋಸಾವ ನಿಸ್ಸೀಮ. ನಾಟಕದ ವಸ್ತುಗಳನ್ನುಳ್ಳ ಅವರ ಕೆಲವು ಚಿತ್ರಗಳು ಅದೆಷ್ಟು ಸಹಜವಾಗಿ ಬೆಳೆದುಬಂದಿವೆ. ಉದಾಹರಣೆಗಳೆಂದರೆ, ಯೊಜಿಂಬೊ ಮತ್ತು ರಕ್ತದ ಸಿಂಹಾಸನ. ರಕ್ತದ ಸಿಂಹಾಸನವಂತೂ shakespeareನ macbeth ನಾಟಕದಿಂದಲೇ ಪ್ರಭಾವಗೊಂಡದ್ದು. ಎರಡೂ ಉತ್ತಮ ಚಿತ್ರಗಳಾಗಿವೆ. ನಾಟಕಕ್ಕೆ ವಿಶೇಷವಾದ ಹಾವ ಭಾವಗಳಿವೆ. ನಾಟಕದ ವಸ್ತು ಅಂತಹ ಹಾವ ಭಾವಗಳಿಗೆ ಪೂರಕವಾಗಿರಬೇಕು. ಆದರೆ, ಚಲನಚಿತ್ರದ ಹಾವ ಭಾವಗಳೇ ಬೇರೆ. ಚಲನಚಿತ್ರದಲ್ಲಿ ಬೇರೆ ಬೇರೆ ದೂರದ ಶಾಟಗಳನ್ನು ಬಳಸಬಹುದು. ನಾಟಕಕ್ಕೆ ಈ ಸೌಲಭ್ಯವಿಲ್ಲ. ಹೀಗಾಗಿ ಮೊದಲ ಪಂಕ್ತಿಯಲ್ಲಿರುವವನಿಗೂ ಕೊನೆಯ ಪಂಕ್ತಿಯಲ್ಲಿರುವವನಿಗೂ ಒಂದೇ ಅನುಭವ ನೀಡುವ ಸವಾಲಿದೆ. ಈ ಸವಾಲಿಗೆ ಸ್ಪಂದಿಸಿಯೇ ನಾಟಕವನ್ನು ಬರೆಯಬೇಕು. ಹಾಗೆ ಬರೆದ ನಾಟಕದ ವಸ್ತುವನ್ನು ಚಲನಚಿತ್ರಕ್ಕೆ ಅಳವಡಿಸಿಕೊಳ್ಳುವದು ಕಷ್ಟ. ಹಿಂದಿಯ ಮಕ್ಬೂಲ ನೋಡಿದರೆ ಹೆಜ್ಜೆ ತಪ್ಪುವದು ಎಷ್ಟು ಸಸಾರ ಎಂದು ತಿಳಿಯುತ್ತದೆ. ಅಷ್ಟೇ ಏಕೆ, ಪೊಲಾನ್ಸ್ಕಿಯಂತ ನುರಿತ ನಿರ್ದೇಶಕರು ಇಂತಹ ಪ್ರಯತ್ನದಲ್ಲಿ ಸೋತಿದ್ದಾರೆ. ಆದರೆ, ಕುರೋಸಾವ, ನಾಟಕದ ಹಾವ ಭಾವಗಳನ್ನು ತ್ಯಜಿಸದೆ ಚಿತ್ರವನ್ನು ಕಟ್ಟುತ್ತಾರೆ. ರಕ್ತದ ಸಿಂಹಾಸನದ ಸೆಟ್ಟುಗಳು, ಕೆಮೆರಾ ಇರುವಾ ಜಾಗ ಎಲ್ಲವೂ ನಾಟಕೀಕರಣಕ್ಕೆ ಪೂರಕವಾಗಿವೆ. ಉನ್ಮಾದಿಂದ ಅಭಿನಯಿಸಲು ಸ್ವಾತಂತ್ರ್ಯವಿದೆ. ಯೊಜಿಂಬೊ ಚಿತ್ರದಲ್ಲಿ ಪಟ್ಟಣದ ನಿರೀಕ್ಷಕನ ಹಾವ ಭಾವಗಳನ್ನು ಗಮನಿಸಿ. ಥೇಟ್ ನಾಟಕದ್ದು. ಮೇಲಿನ ಅಧಿಕಾರಿ ವಿಚಾರಣೆಗೆಂದು ಬಂದಾಗ, ನಿರೀಕ್ಷಕನ ಮನೆಯಲ್ಲಿ ಖಳನಾಯಕರು ಏರ್ಪಡಿಸುವ ಸತ್ಕಾರದ ದೄಶ್ಯವಿದೆ. ಇದನ್ನು ಕುರೋಸಾವ ಚಿತ್ರಿಸಿರುವ ರೀತಿ ಗಮನೀಯವಾದದ್ದು. ಬೀದಿಯ ಎದುರಿನ ಖಾನಾವಳಿಯ ಕಿಟಕಿಯ ಗಳಿಗಳ ನಡುವೆಯಿಂದ ನಾಯಕ ಮತ್ತು ಖಾನಾವಳಿಯ ಮಾಲಿಕ ಸತ್ಕಾರವನ್ನು ಗಮನಿಸುತ್ತಾರೆ. ಕೆಮೆರಾ ಇರುವದೂ ಇಲ್ಲೇ! ನಾಯಕ ನೋಡುವ ದೃಶ್ಯವನ್ನೇ ನಾವೂ ನೋಡುತ್ತೇವೆ (ಕೆಳಗಿನ ಒಂದು ಚಿತ್ರದಲ್ಲಿ ಆ ಕಿಟಕಿಯ ಗಳಿಗಳನ್ನು ಕಾಣಬಹುದು). ಪಟ್ಟಣದ ನಿರೀಕ್ಷಕನ ಮನೆಯ ಕೋಣೆ ನಾಟಕದ ಅಂಕಣದಂತೆಯೇ ಇದೆ. ಜಿಗಿಯುತ್ತ, ಚಿಮ್ಮುತ್ತ, ಸೇವೆಯ ಮುಗುಳ್ನಗೆಯೊಂದಿಗೆ ಸತ್ಕರಿಸುತ್ತಿರುವ ನಿರೀಕ್ಷಕ, ಖಾದ್ಯ ಮತ್ತು ಪಾನೀಯಗಳನ್ನು ಸರಬರಾಜು ಮಾಡುತ್ತಿತುವವರು, ಅಧಿಕಾರಿಯ ಮನೋರಂಜನೆಗೆಂದು ಬಂದ ಸೂಳೆಯರು, ಎಲ್ಲರ ಹಾವಭಾವಗಳೂ ನಾಟಕದ್ದೆ. ನಿರೂಪಣೆಯ ಸರಪಳಿ ಕಡಿಯದಂತೆ ಸಹಜವಾಗಿ ಇದನ್ನು ಸಾಧಿಸಿದ್ದಾರೆ. ಹಾಗೆಯೇ ರಾಶೋಮನ್ ಚಿತ್ರದಲ್ಲಿ ಎರಡು ಸಣ್ಣ ಕಥೆಗಳನ್ನು ಹೇಗೆ ಹೆಣೆದಿದ್ದಾರೆ ಎಂಬುದು ಅದ್ಭುತವಾಗಿದೆ. ಈ ತರಹದ ಕಲಾತ್ಮಕವಾಗಿ ಸೂಕ್ತವಾದ ದಾರಿಗಳನ್ನು ಹುಡುಕುವಲ್ಲಿ ನಿಪುಣರು.ಇದೆಲ್ಲಾ ಸಾಧ್ಯವಾಗುವದು ಅವರು ತಮ್ಮ ಮಾಧ್ಯಮವನ್ನು ತಿಳಿದಿರುವ ಸಂಕೀರ್ಣದಲ್ಲಿ, ಸಂಪೂರ್ಣದಲ್ಲಿ.

ರಂಗಸ್ಥಳವನ್ನು ನೆನಪಿಸುವ ಸೆಟ್ಟುಗಳು

ಇನ್ನು ಕುರೋಸಾವ ಅವರ ಅತ್ಯಂತ ಮಹತ್ವದ ಚಿತ್ರವಾದ ರಾಶೋಮನ್ ಬಗ್ಗೆ ಗಮನ ಹರಿಸೋಣ. ಇದರ ಕಥಾಶೈಲಿ ಅಂದಿನ ಕಾಲಕ್ಕೆ ಅಸಾಧಾರಣವಾದ ಹಾಗೂ ಅತಿ ಯಶಸ್ವಿಯಾದ ಪ್ರಯೋಗ ಎಂಬುದು ನಿರ್ವಿವಿವಾದ. ಮೂಲ ಕಥೆಗಳಲ್ಲಿ, ಕುರೋಸಾವ ಹಲಾವಾರು ಅರ್ಥಗಳಿರುವ, ಯಾವುದೂ ನಿರ್ದಿಷ್ಟವಾಗಿರದ ಒಗಟುಗಳನ್ನು ಕಂಡಿದ್ದಾರೆ. ಇವೆಲ್ಲವನ್ನೂ ಚಲನಚಿತ್ರದಲ್ಲಿ ಮೂಡಿಸುವದೇ ಅವರ ಉದ್ದೇಶ. ಇದು ಕಥಾಪ್ರಸಂಗದ ಸೃಷ್ಟಿಗೆ ಮತ್ತು ಅಭಿನಯ ತಂಡಕ್ಕೆ ಮಹಾಸವಾಲು. ಈ ಚಿತ್ರವನ್ನು ಚಿತ್ರೀಕರಿಸಿರುವ ತಾಣಗಳು, ಸೃಷ್ಟಿಸಿರುವ ಸೆಟ್ಟುಗಳು, ಇವುಗಳ ಬಗ್ಗೆ ಕುರೋಸಾವ ವಿವರವಾದ ಲೇಖನವನ್ನೇ ಬರೆದಿದ್ದಾರೆ. ಹೊಸದಾಗಿ ಮದುವೆಯಾದ ಸಿಪಾಯಿ ತನ್ನ ಹೆಂಡತಿಯೊಡನೆ ನಿರ್ಜನವಾದ ಕಾಡಿನಲ್ಲಿ ಸಾಗುತ್ತಿರುವಾಗ ಒಬ್ಬ ದರೋಡೆಕೋರ ಹಲ್ಲೆ ನಡೆಸುತ್ತಾನೆ. ಖಚಿತವಾಗಿ ತಿಳಿಯುವುದೇನೆಂದರೆ, ಸೈನಿಕ ಸಾಯುತ್ತಾನೆ, ಹೆಂಡತಿಯ ಮೇಲೆ ದೌರ್ಜನ್ಯದ ಕುರುಹಗಳಿವೆ, ಮತ್ತು ಘಟನೆಯ ಕೆಲಘಂಟೆಗಳ ನಂತರ ದೂರದಲ್ಲಿ ಒಬ್ಬ ಪರಹೆಯವನು ಅವನನ್ನು ಬಂಧಿಸುತ್ತಾನೆ. ಅಲ್ಲದೆ, ಘಟನೆಯ ಸಮಯದ ಸ್ವಲ್ಪ ಆಚೆ-ಈಚೆಗೆ ಕಾಡಿಗೆ ಹೋದ ಕಟ್ಟಿಗೆಯವ ಬಂದು ಹಳ್ಳಿಯಲ್ಲಿ ವರದಿ ಒಪ್ಪೊಸುತ್ತಾನೆ. ಚಿತ್ರದ ಕೇಂದ್ರಬಿಂದು ಕೊಲೆಯ ವಿಚಾರಣೆ. ಎಲ್ಲರಿಗೂ ತಮ್ಮ ಹೇಳಿಕೆಗೆ ಅವಕಾಶ ಸಿಗುತ್ತದೆ. ಕಟ್ಟಿಗೆಯವ, ದರೋಡೆಕೋರನ್ನನ್ನು ಬಂಧಿಸಿದ ಪಹರೆಯವ, ದರೋಡೆಕೋರ, ಸಿಪಾಯಿಯ ಹೆಂಡತಿ ಮತ್ತು ಸಿಪಾಯಿಯ ಆತ್ಮ ಇವುಗಳೆಲ್ಲ ಬಂದು ತಮ್ಮ ವರದಿ ಒಪ್ಪಿಸುತ್ತಾರೆ. ಎಲ್ಲರ ವರದಿಗಳನ್ನು ಕೇಳಿದ ಮೇಲೆ ಒಂದು ದುರ್ಘಟನೆ ನಡೆಯಿತು ಎಂಬುದು ಮೊದಲಿನಷ್ಟೇ ಖಚಿತವಾಗಿದ್ದರೂ ಅದು ಹೇಗೆ ಆಯಿತು ಎಂಬುದು ಒಗಟಾಗಿಯೇ ಉಳಿಯುತ್ತದೆ. ಇದರಲ್ಲಿ ಗಮನಿಸಬೇಕದದ್ದೆಂದರೆ, ಕಟ್ಟಿಗೆಯವನು ವಿಚಾರಣೆಯಲ್ಲಲ್ಲದೆ, ಯಾವುದೇ ಒತ್ತಡವಿಲ್ಲದ ದುರ್ಗಮ ದೇವಾಲಯದ ವಾತಾವರದಲ್ಲೂ ತನ್ನ ವರದಿ ಒಪ್ಪಿಸುತ್ತಾನೆ. ಇವೆರಡೂ ಬೇರೆಯೇ ಹೇಳಿಕೆಗಳು. ಆದರೂ ನಮಗೆ, ನಮ್ಮ ಮನಸ್ಸು ಮಾಡಲಾಗುವದಿಲ್ಲ! ಈ ಚಿತ್ರಕಥೆಗೆ ತಕ್ಕಂತೆ ಅಭಿನಯಿಸುವದು ಕಠಿಣ. ಉದಾಹರಣಿಗೆ, ಸಿಪಾಯಿ ಮತ್ತು ದರೋಡೆಕೋರನ ನಡುವೆ ನಡೆದಿರಬಹುದಾದ ಚಕಾಮಕಿ. ಇದರ ಬಗ್ಗೆ ಕಟ್ಟಿಗೆವನ ಎರಡು ವರದಿಗಳನ್ನು ಹಿಡಿದು ಒಟ್ಟು ಐದು ಬೇರೆ ಬೇರೆ ವಿವರಗಳಿವೆ. ಪ್ರತಿಬಾರಿಯೂ ಇಬ್ಬರ ಚಲನ ವಲನ, ಹಾವಭಾವಗಳು ಸಂಪೂರ್ಣವಾಗಿ ಬೇರೆಯಾಗಿವೆ. ಒಂದರಲ್ಲಿ ದರೋಡೆಕೋರ ಶೂರನಾಗಿ ಜಯಸಿದರೆ, ಇನ್ನೊಂದರಲ್ಲಿ ಸ್ನಾಯುಗಳೆಲ್ಲ ನಡುಗುತ್ತಾ, ಹೆದರುತ್ತ, ಆತ್ಮರಕ್ಷಣೆಗೆಂದು ಅಸಹ್ಯ ಹುಟ್ಟುವಂತೆ ಅಸಮರ್ಥವಾಗಿ ಕೊಲೆ ಮಾಡುತ್ತಾನೆ. ಕೊನೆಗೂ ನೀವು ಯಾರ ಮಾತು ನಂಬುತ್ತೀರ ಎನ್ನುವದು ಯಾವುದೇ ದೃಶ್ಯಗಳ ಬಗ್ಗೆ ಅವಲಂಬಿಸದೆ, ನೀವು ಯಾರನ್ನು ನಂಬುತ್ತೀರ ಅಥವ ನಿಮ್ಮ ನಿಷ್ಕರ್ಷೆ ಏನು ಎಂಬುಅದರ ಬಗ್ಗೆ ಅವಲಂಬಿಸಿದೆ. ಚಲನಚಿತ್ರ ಎಷ್ಟು ಪರಿಪೂರ್ಣವಾಗಿದೆಯೋ, ಘಟನೆಯ ವಾದ್ಯಾಂತ ಅಷ್ಟೇ ಅನಿರ್ಧಿಷ್ಟವಾಗಿದೆ. ಇಲ್ಲೇ ಇರುವದ ಕುರೋಸಾವಾರ ಗೆಲುವು. ನನಗೆ ಕಟ್ಟಿಗೆಯವನು ಹೇಳುವ ಮಾತು ಮರೆಯಲು ಅಸಾಧ್ಯ: "ನಮ್ಮೆಲ್ಲರ ಒಳಗೂ ಒಂದು ರಾಕ್ಷಸನಡಿಗಿದ್ದಾನೆ; ಅವನು ಎದ್ದಾಗ ನಾವೆಲ್ಲರೂ ಭೀಕರಾರಗಲು ಸಾಧ್ಯ".

ರಾಶೋಮೊನ್ ಚಿತ್ರಗಳು

ಕುರೋಸಾವ ಚಿತ್ರಗಳಲ್ಲಿ ಯಶಸ್ಸಿನ ಪಾಲು ನಟನಟಿಯರಿಗೂ ಸೇರುತ್ತದೆ. ಅನೇಕ ನಟರು ಲೀಲಾಜಾಲವಾಗಿ ಅನೇಕ ಭಿನ್ನ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗಮನ ಸೆಳೆಯುವವರಲ್ಲಿ ಪ್ರಮುಖ ಮಿಫುನೆ. ಕುರೋಸಾವ ಅವರು ಕಲ್ಪಿಸಿರುವ ಸಮುರಾಯಿಗಳ ಲೋಕವನ್ನು ಜೀವಕ್ಕೆ ತರುವ ಕಾರ್ಯಕರ್ತ. ಅವರು ನಿಭಾಯಿಸಿರುವದೆಲ್ಲ ದೈಹಿಕವಾಗಿ ಶ್ರಮದಾಯಕವಾದವು. ಜಾನಪದ ಸನ್ನಿವೇಶಗಳನ್ನು/ಕಾಳಗಳನ್ನು ಕುರೋಸಾವ ಯಾವುದೇ ಎಡಿಟಿಂಗ್ ಇಲ್ಲದೇ ದೀರ್ಘ ದೃಶ್ಯಗಳಂತೆ ಚಿತ್ರಿಸುತ್ತಾರೆ. ಇಂದಿನ ಚಕಾಮಕಿಯ ಚಿತ್ರಗಳಿಗೆ ಹೋಲಿಸಿದರೆ ಇದು ಮಹಾಕಷ್ಟದ್ದು. ಏಕೆಂದರೆ ಯಾವುದೆ ಎಡಿಟಿಂಗಿನ ಸಹಾಯವಿಲ್ಲದೇ ಆಶಿಸಿದ ಲೀಲಾಜಾಲತೆಯನ್ನು ತರಬೇಕು. ಭಾವುಕತೆಯ ನೆರವಿಲ್ಲದೆ, ಸಮುರಾಯಿಗಳ ನಿಖ್ಯವಾದ ಹಾವಭಾವಗಳ ನಡುವೆಯೂ ಕತೆಯ ಎಲ್ಲ ಸೂಕ್ಷ್ಮಗಳನ್ನೂ ಹೊರತರಬೇಕು. ಅವರ ನಟರಲ್ಲಿ ವೈವಿದ್ಯಮಯ ಪಾತ್ರಗಳನ್ನು ನಿಭಾಯಿಸದವರಲ್ಲು ತಕಾಶಿ ಶಿಮುರಾ ಕೂಡ ಒಬ್ಬರು. ಏಳು ಸಮುರಾಯಿಗಳಲ್ಲಿ ಮಹಾವೀರನಾದರೆ, ರಾಶೋಮನ್-ನಲ್ಲಿ ಕಟ್ಟಿಗೆ ಕಡಿಯುವವ ಹಾಗೂ ಇಕುರುವಿನಲ್ಲಿ ಸಾವಿನ ಅಂಚಿನಲ್ಲಿ ತನ್ನ ಜೀವನಕ್ಕೆ ಒಂದು ಗುರಿ ಕಂಡುಕೊಂಡ ನಗರಪಾಲಿಕೆಯ ಅಧಿಕಾರಿಯಾಗಿದ್ದಾರೆ. ಪರಿಣಿತರಾದ ಈ ನಟರುಗಳ ತಂಡ ಕುರೋಸಾವ ಅವರಿಗೆ ಮಹತ್ತರವಾದ ಬೆಂಬಲ ನೀಡಿತು.

ತಕಾಶಿ ಶಿಮುರಾ

ಕೊನೆಯಲ್ಲಿ ಇತ್ತೀಚಿಗೆ ಗಮನಿಸಿದ ಸಂಗತಿ. ಕುರೋಸಾವ ಮೊದಲ ಹತ್ತು ವರ್ಷಗಳಲ್ಲಿ ಸುಮಾರು ಚಿತ್ರಗಳನ್ನು ಮಾಡಿದರು. ಎಲ್ಲವು ಅಂದಿನ ಸಮಕಾಲೀನವಾಗಿದ್ದು, ಮಾನವನ ಅಸ್ತಿತ್ವದ ಬಗ್ಗೆ existentialism ಎತ್ತಿದ ಗಂಭೀರ ಪ್ರಶ್ನೆಗಳಿಂದ ಉದ್ಭವಗೊಂಡಿದ್ದವು. ಕೆಲವು ಮಹಾಯುದ್ಧದ ಸಮಯದಲ್ಲಿ ಒತ್ತಾಯಕ್ಕೆ ಮಣಿದು ಮಾಡಿದ ಪ್ರಾಪಗಾಂಡಾ ಚಿತ್ರಗಳೂ ಇದ್ದವು. ಯಾವುದರಲ್ಲೂ ಜಪಾನಿನ ಮಧ್ಯಕಾಲೀನ ಚರಿತ್ರೆಯ ಪ್ರಸಂಗಗಳಿಲ್ಲ. ಆಧುನಿಕ ಚಿತ್ರಕಥೆಗಳನ್ನು ಬಿಟ್ಟು, ತಮ್ಮದೇ ಮಣ್ಣಿನ ಊಹಾಲೋಕಕ್ಕೆ ಹೊಕ್ಕಿದ ಮೇಲೆ ಅವರಿಗೆ ಹೇಳಲು ಮನೋರಂಜಿತವಾದ ಕತೆಗಳು ಸಿಕ್ಕವು. ನೋಡುವಾಗ ಆನಂದ ಪಟ್ಟ ಶೋತ್ರುಗಳು ತಮ್ಮದೇ ಆದ ರೀತಿಯಲ್ಲಿ ಕುರೋಸಾವಾರ ಕಾಳಜಿಗಳಿಗೆ ಸ್ಪಂದಿಸಲೂ ಸಾಧ್ಯವಾಯಿತು.

ರಾಬರ್ಟ್ ಮುಸಿಲ್-ರ ಒಂದು ಪ್ರಬಂಧ

ರಾಬರ್ಟ್ ಮುಸಿಲ್ ಇಪ್ಪತ್ತನೆ ಶತಮಾನದ ಹೆಸರಾಂತ ಜರ್ಮನ್ ಸಾಹಿತಿ. ತೀಕ್ಷ್ಣಮತಿಯಾಗಿದ್ದ ಮುಸಿಲ್-ರ ಅಗ್ರತೆಯನ್ನು ಅವರ ಸಮಕಾಲೀನ ಜರ್ಮನ್ ಲೇಖಕರೆಲ್ಲ ಒಪ್ಪಿಕೊಂಡಿದ್ದರು. ಪ್ರಸಿದ್ದ ಕಾದಂಬರಿಕಾರ ಥಾಮಸ್ ಮಾನ್-ರಂತೂ ಜರ್ಮನ್ ಭಾಷೆಯಲ್ಲಿ ಬರೆಯುತ್ತಿರುವವರಲ್ಲಿ ಮುಸಿಲ್ ಅಗ್ರಗಣ್ಯರು ಎಂದೇ ಹೇಳಿದ್ದರು. ಅದೂ ಥಾಮಸ್ ಮಾನ್ ಓದುಗರ ಮೆಚ್ಚುಗೆ ಗಳಿಸಲು ಕೊಂಚ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಮುಸಿಲ್ ದೂರುತ್ತಿದ್ದಾಗ. ತಮ್ಮ ಕಾದಂಬರಿಗಳು, ಸಣ್ಣ ಕತೆಗಳು, ಮತ್ತು ಪ್ರಬಂಧಗಳ ಮೂಲಕ ಸಾಕಷ್ಟು ಓದುಗರನ್ನು ಆಕರ್ಷಿಸಿದ್ದ ಮುಸಿಲ್ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ಸೈಟ್-ಗಳು ಇಂಟರ್-ನೆಟ್-ನಲ್ಲಿ ಸುಮಾರಿವೆ ( ಮುಸಿಲ್ ಫೋರಮ್ , ಮತ್ತು ವಿಕಿಪೀಡಿಯ ). ಇಲ್ಲಿ ಸಂಕ್ಷಿಪ್ತವಾಗಿ, ವೈಯಕ್ತಿಕ ಮಾಹಿತಿಗಳನ್ನು ನೀಡದೆ ಮುಸಿಲ್-ರನ್ನು ಪರಿಚಯಿಸಿದ್ದೇನೆ.

ಮುಸಿಲ್ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಕೊನೆಯ ಪ್ರಜೆ ಎಂದೇ ಹೇಳಬಹುದು. ಮಿಲಿಟರಿ ಶಾಲೆಯಲ್ಲಿ ಓದಿ ಹಲವಾರು ಪದವಿಗಳನ್ನು ಪಡೆದ ಮುಸಿಲ್ ಈ ಸಾಮ್ರಾಜ್ಯದ ಅಧಿಕಾರ ಕೇಂದ್ರಕ್ಕೆ ಹತ್ತಿರವಾಗಿದ್ದರು. ಅಲ್ಲದೆ, ಮೊದಲನೇ ಮಹಾಯುದ್ಧದಲ್ಲಿ ಹೋರಾಡಿದರು. ಅಂದಿನ ಇಡೀ ಜರ್ಮನ್ (ಆಸ್ಟ್ರಿಯ ಮತ್ತು ಪ್ರಶಿಯಾ) ಸಮುದಾಯವನ್ನು ಅಂಧರನ್ನಾಗಿ ಮಾಡಿದ ಸಂಸ್ಕೃತಿಯ ಬಗ್ಗೆ ಬಹಳಷ್ಟು ಚಿಂತಿಸಿದ್ದರು. ಹೀಗಾಗಿ ಮಹಾಯುದ್ದಕ್ಕೆ ಎಡೆ ಮಾಡಿಕೊಟ್ಟ ವಾತಾವರಣವನ್ನು ಹಿಡಿದಿಡುವ ಮಹಾಕಾದಂಬರಿಯನ್ನು ಬರೆಯುವದರಲ್ಲೇ ತಮ್ಮ ಕಾಲ ಕಳೆದರು. ಹೀಗೆ ಶುರುವಾದ Man without Qualities ಮಹಾಕಾದಂಬರಿ ಇಪ್ಪತ್ತೈದು ವರ್ಷಗಳ ನಂತರ ಅವರು ನಿಧನರಾದಾಗ, ಮೂರು ಸಾವಿರ ಪುಟಗಳನ್ನು ಮೀರಿದರೂ ಮುಗಿದಿರಲಿಲ್ಲ! ಹಿಟ್ಲರ್-ನ ಫೇಸಿಸಂ-ಗೆ ಸಿಕ್ಕಿ, ಪಕ್ಕದ ಸ್ವಿಟ್ಜರ್-ಲ್ಯಾಂಡಿನಲ್ಲಿ ಕಡು ಬಡತನದಲ್ಲಿ ಬಳಲುತ್ತಿದ್ದಾಗಲೂ ಅದೇ ಕಾದಂಬರಿಯನ್ನು ಬರೆಯುತ್ತಿದ್ದರು. ವ್ಯಾಯಾಮ ಮಾಡಲು ಯಾವಾಗಲೂ ಹುಮ್ಮಸ್ಸಿನಲ್ಲಿರುತ್ತಿದ್ದ ಮುಸಿಲ್ ವ್ಯಾಯಾಮಕ್ಕೆಂದು ಭಾರ ಎತ್ತುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಮೃತ ಮುಸಿಲ್-ರ ಮುಖದಲ್ಲಿ ಸೋಜಿಗ ಮತ್ತು ವ್ಯಂಗ್ಯ ಮಿಶ್ರಣದ ಕಿರುನಗೆಯಿತ್ತಂತೆ.

ಮುಸಿಲ್ ವಿಜ್ಞಾನಿಯಾಗಿ ಕೆಲಸ ಮಾಡಬಯಸಿ ಗಣಿತ ಮತ್ತು ವಿಜ್ಞಾನಗಳಲ್ಲಿ ತರಭೇತಿ ಪಡೆದಿದ್ದರು. ಹೀಗಾಗಿ ಈ ಶಾಸ್ತ್ರಗಳ ನಿಖರತೆಯ ಮೂಲ, ಆಳ, ವ್ಯಾಪ್ತಿ, ಲೋಪ, ಇತಿ, ಮಿತಿ ಇವುಗಳ ಬಗ್ಗೆ ಗಾಢವಾಗಿ ಯೋಚಿಸಿದ್ದರು. ವೈಜ್ಞಾನಿಕ ವೃತ್ತಿಯನ್ನು ಬಿಟ್ಟ ಮುಸಿಲ್ ತತ್ತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ತತ್ವಜ್ಞಾನಿಯಾಗಿ ಅಷ್ಟೊಂದು ನೆಮ್ಮದಿ ಕಾಣದೆ ಸಾಹಿತ್ಯದಲ್ಲಿ ತಮ್ಮನ್ನು ಮುಳುಗಿಸಿಕೊಂಡರು. ಸಾಹಿತಿಯಾಗಿ ವಿಪರೀತ ಕಷ್ಟಪಟ್ಟರು. ಹಲವಾರು ಬಾರಿ ಬರವಣಿಗೆ ತಮ್ಮ ಕೈ ಬಿಡುತ್ತಿದೆಯೇನೋ ಎಂದು ತಳಮಳಗೊಂಡರು. ಆದರೆ ಲೇಖಕನಾದ ಮೇಲೆ ಬರೆಯುವುದನ್ನು ಬಿಡುವ ಯೋಚನೆ ಅವರ ಹತ್ತಿರ ಸುಳಿಯಲಿಲ್ಲ.

ಅತ್ಮ ಮತ್ತು ಭಾವನಾ ಲೋಕದ ಸಂಬಂಧ ಮುಸಿಲ್-ರನ್ನು ಮೊದಲಿನಿಂದಲೂ ಕೆರಳಿಸಿತ್ತು (ಅವರ Confusions of the young Torless ನೋಡಿ). ಆಧುನಿಕ ವಿಜ್ಞಾನದ ನಿಖರತೆಯ ಎಲ್ಲಾ ಮುಖಗಳ ಪರಿಚಯವಿದ್ದ ಅವರಿಗೆ, ಆ ನಿಖರತೆಯ ಕೆಲವು ಆಯಾಮಗಳು, ಆತ್ಮ ಮತ್ತು ಭಾವನಾ ಲೋಕವನ್ನು ಅರಿಯಲು ಅವಶ್ಯ ಎಂಬ ನಂಬಿಕೆಯಿತ್ತು. Precision and Soul ಎಂಬ ಅವರ ಪ್ರಬಂಧಗಳ ಸಂಗ್ರಹ ಇವುಗಳೆಲ್ಲವನ್ನೂ ಒಳಗೊಂಡು ಅದ್ಭುತವಾಗಿದೆ. ಇವುಗಳಲ್ಲಿ 'ಗಣಿತಜ್ಞ' ಎಂಬ ಪ್ರಬಂಧ ನನಗೆ ಬಹು ಇಷ್ಟ. ಇದನ್ನು ಅವರು ಬರೆದದ್ದು ೧೯೧೩ರಲ್ಲಿ. ಈಗಲೂ ಪ್ರಸ್ತುತವಾಗಿದೆ. ಇದನ್ನು ಕನ್ನಡದಲ್ಲಿ ನಿಮ್ಮ ಮುಂದೆ ತರಲು ಪ್ರಯತ್ನಿಸಿದ್ದೇನೆ. ನನ್ನ ಮಿತ್ರ ರಾಘವೇಂದ್ರ ಉಡುಪ ಈ ತರ್ಜುಮೆಯ ಎರಡು ಮೂರು ಕರಡು ಪ್ರತಿಗಳನ್ನು ಪರಿಷ್ಕರಿಸಿ, ತಪ್ಪುಗಳನ್ನು ತಿದ್ದಿ, ಮನಸಾರೆಯಾಗಿ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಉಳಿದಿರುವ ಕುಂದು, ಕೊರತೆಗಳಿಗೆ ನಾನೇ ಜವಾಬ್ದಾರ.

ಗಣಿತಜ್ಞ

ಗಣಿತಶಾಸ್ತ್ರವೆಂದರೇನು ಎಂಬುದರ ಬಗ್ಗೆ ನಮಗಿರುವ ತಿಳುವಳಿಕೆ ತೀರ ಕಡಿಮೆ. ಹೀಗಿದ್ದೂ ಗಣಿತದ ಪ್ರತಿಮೆಗಳ ಮೂಲಕ ಉಳಿದ ವಿದ್ಯಮಾನಗಳನ್ನು ವಿಶ್ಲೇಷಿಸಲು ನಾವು ಹಿಂಜರಿಯುವದಿಲ್ಲ, ಅದೆಷ್ಟೇ ಅಸಂಬದ್ಧವಿರಲಿ. ಉದಾಹರಣೆಗೆ ದುರಂತದ ಮಧ್ಯದಲ್ಲಿ ಮುಳುಗಿರುವ ಸೇನಾಪತಿಗಳನ್ನು ರಣಭೂಮಿಯ ಗಣಿತಜ್ಞರು ಎಂದು ಕರೆಯುವದು! ಕ್ಷುಲ್ಲಕ ದುರಂತಗಳಿಗೆ ಎಡೆಮಾಡಿಕೊಡಬಾರದೆಂದಿದ್ದರೆ ಸೇನಾಪತಿಗಳು ಸರಳವಾದ ಲೆಕ್ಕಾಚಾರಗಳಿಗಿಂತ ಹೆಚ್ಚಿನ ಗಣಿತಕ್ಕೆ ಮೊರೆಹೋಗಬೇಕಾಗಿಲ್ಲ. ಗಣಿತದ ಸಾಧಾರಣ ಸಮಸ್ಯೆಗಳನ್ನು (ಉದಾ: differential equations) ಬಗೆಹರಿಸಲು ಬೇಕಾದಷ್ಟು ಸಮಯ ಯುದ್ಧಭೂಮಿಯಲ್ಲಿ ನಿಶ್ಕ್ರಿಯರಾಗಿರುವುದೂ ಒಂದೇ ಒಮ್ಮೆಲೇ ತನ್ನೆಲ್ಲ ಸೈನಿಕರನ್ನು ಮೃತ್ಯುಕೂಪಕ್ಕೆ ತಳ್ಳುವದೂ ಒಂದೇ.

ಇದರರ್ಥ ಸೇನಾಪತಿಗಳಿಗೆ ಜಾಣತನವಿಲ್ಲ ಎಂದಲ್ಲ. ಗಣಿತಜ್ಞರ ಬಗ್ಗೆ ನಮ್ಮ ಭಾವನೆಗಳು ಸತ್ಯದಿಂದ ಎಷ್ಟು ದೂರವೆಂಬುದಷ್ಟೆ! ಗಣಿತ, ಸೇನಾಪತಿಗಳಂತೆ ಚುರುಕಾಗಿ ಯೋಚಿಸಿ, ತುರ್ತಾದ ಸಮಸ್ಯೆಗಳನ್ನು ಬಗೆಹರಿಸುವ ವಿಧಾನ ಎನ್ನುವದರಲ್ಲೂ ಸತ್ಯವಿದೆ. ಆದರೆ, ಯೋಚನೆಯೆಂಬುದು ವಿಶಾಲವಾದ ಮತ್ತು ಚಂಚಲ ಪ್ರಕ್ರಿಯೆ. ನಮ್ಮ ಜೀವನದ ಅಗತ್ಯಗಳನ್ನು ದಕ್ಷವಾಗಿ ದೊರಕಿಸಿಕೊಳ್ಳಲು ಶುರುವಾದ ಗಣಿತದ ಯೋಚನೆ ಇಂದು ಆಸೆಬುರಕ ಉಳಿತಾಯದ ಮಹಾಸಾಧನವಾಗಿದೆ. ಜಿಪುಣನಿಗೂ ಕಡುಬಡತನಕ್ಕೂ ಎಷ್ಟು ದೂರವೋ ಅಷ್ಟೇ ದೂರ ಈ ದಕ್ಷತೆಯ ಹಂಬಲ ಮತ್ತು ಜೀವನದ ಮೂಲ ಅವಶ್ಯಕತೆಗಳಿಗಿದೆ.

ಗಣಿತ ತನ್ನದೇ ಆದ ಲೋಕದಲ್ಲಿ ನಾವು ಊಹಿಸಲೂ ಅಸಾಧ್ಯವಾದ ಪರಿಣಾಮಗಳಿಗೆ ಜನ್ಮ ಕೊಡುತ್ತದೆ. ಉದಾಹರಣೆಗೆ, ಅಸಂಖ್ಯಾತವಾದ ಸರಣಿಯನ್ನು ನಾವು ಗಣಿತದ ಜಗತ್ತಿನೊಳಗೆ ಉದ್ಧರಿಸಲು ತಿಳಿದಿದ್ದೇವೆ. ಯಂತ್ರಗಳು ಅತಿ ಜಟಿಲವಾದ ಗಣಿತದ ಲೆಕ್ಕಾಚಾರಗಳನ್ನು (ಕ್ರೂಢೀಕರಣ, ಲಾಗರಿದ್ಮ್) ಆಗಲೇ ಸರಾಗವಾಗಿ ನಡೆಸುತ್ತಿವೆ; ಸಮಸ್ಯೆಯ ಗುರುತು ಹೇಳಿ ಯಂತ್ರ ಚಾಲನೆ ಮಾಡಿದರೆ ಉತ್ತರ ಸಿಗುವಷ್ಟು ಸರಳವಾಗುತ್ತಾ ಬರುತ್ತಿವೆ ಗಣಿತದ ಲೆಕ್ಕಾಚಾರಗಳು. ಎರಡುನೂರು ವರ್ಷಗಳ ಹಿಂದೆ ನ್ಯೂಟನ್ ಅಥವಾ ಲೀಬ್ನಿಜ್-ರಂಥ ಮಹಾರಥಿಗಳ ಸಹಾಯವಿಲ್ಲದೇ ಬಿಡಿಸಲಸಾಧ್ಯವಾದ ಸಮಸ್ಯೆಗಳನ್ನು ಸಾಮಾನ್ಯ ಕಾರ್ಯದರ್ಶಿ ಗಣಕಯಂತ್ರಗಳ ಸಹಾಯದಿಂದ ಬಾವಿಯಿಂದ ನೀರೆಳೆದಂತೆ ಬಗೆಹರಿಸಬಹುದು. ಇವುಗಳಲ್ಲಿ ಯಂತ್ರಗಳಿಂದ ಬಗೆಹರಿಸಲು ಇನ್ನೂ ಸಾಧ್ಯವಾಗದ (ಬಗೆಹರಿಸುವ ಸಂಖ್ಯೆಗಳಿಗಿಂತ ಸಾವಿರಪಟ್ಟಿರುವ) ಸಮಸ್ಯೆಗಳ ಬಗ್ಗೆ ಯೋಚಿಸಲು, ಅವುಗಳಲ್ಲಡಗಿರುವ ನೂರಾರು ಸಾಧ್ಯತೆಗಳನ್ನು ಕಲ್ಪಿಸಿಕೊಂಡು, ಚಿಂತಿಸಲು ಗಣಿತ ಸಾಧನವಾಗಿದೆ.

ಇಂದಿನ ಪರಿಸ್ಥಿತಿ ಬುದ್ದಿಶಕ್ತಿಯ ಚಾಣಾಕ್ಷ ಸಂಘಟನೆಯ ಫಲವಾಗಿದೆ. ಕಡು ಹವಾಮಾನ ಮತ್ತು ಕಳ್ಳ ಕಾಕರ ಭಯದಿಂದ ತುಂಬಿದ್ದ ಬುದ್ಧಿಶಕ್ತಿಯ ಹಳೆಯ ಹೆದ್ದಾರಿಯ ಮೇಲೆ ಸುಸಜ್ಜಿತವಾದ, ಸುರಕ್ಷಿತವಾದ ರಥದ ಸವಾರಿಯಂತಿದೆ (ಸಮಾಜದ ವಿರೋಧ ಮತ್ತು ಸಾಧನಗಳ ಕೊರತೆಯ ನಡುವೆ ಸತ್ಯಶೋಧನೆಯಲ್ಲಿ ತೊಡಗಿದ್ದ ಗೆಲಿಲಿಯೊ ಮುಂತಾದವರ ಕಾಲವನ್ನು ಸುಸಜ್ಜಿತವಾದ ಹಾಗೂ ವ್ಯವಸ್ಥೆಯ ಸಹಭಾಗಿಯಾಗಿ ಬೆಳೆಯುತ್ತಿರುವ ಆಧುನಿಕ ವಿಜ್ಞಾನಕ್ಕೆ ಹೋಲಿಸಿದ್ದಾರೆ). ಜ್ಞಾನದ ದೃಷ್ಟಿಯಿಂದಂತೂ ಈ ದಕ್ಷತೆಯ ತೆವಲು ಹೀಗೇ ಕಾಣುತ್ತದೆ.

ಗಣಿತ ತೋರಿಸಿರುವ ಅಸಂಖ್ಯಾತ ವಿಕಲ್ಪಗಳು ನಮಗೆಷ್ಟು ಉಪಯುಕ್ತ ಎಂದು ಹಲವರು ಕೇಳಿದ್ದಾರೆ. ಅದೆಷ್ಟು ಜನರ ಜೀವನ, ಅವರ ಕ್ರಿಯಾಶೀಲತೆ, ಧನ, ಹಾಗೂ ಆಕಾಂಕ್ಷೆಗಳನ್ನು ಈ ದಕ್ಷತೆಯ ಹುಚ್ಚು ಕಬಳಿಸಿದೆಯೋ ಏನೋ! ಅದರ ಆಸೆಯಲ್ಲಿ ಇಂದೂ ಅದೆಷ್ಟು ಬಂಡವಾಳ ಪಣವಾಗಿದೆಯೋ; ನಾವು ಗಳಿಸಿರುವುದನ್ನು ನೆನಪಿಡಲು ಮತ್ತು ಕಳೆದುಕೊಂಡಿರುವದನ್ನು ಮರೆಯಲಾದರೂ ಇದರ ಮುಂದುವರಿಕೆ ಅವಶ್ಯವಾಗಿದೆ! ಹಲವರು, ಗಣಿತದ ಬಲದಿಂದ ಪಡೆದ ಸವಲತ್ತುಗಳ ಮೂಲಕ ಅದರ ಉಪಯುಕ್ತತೆಯನ್ನು ಗ್ರಹಿಸಲು ಹೋಗಿ ಸೋತಿದ್ದಾರೆ. ನಿಜವೇನೆಂದರೆ ಗಣಿತದ ಪ್ರಯೋಜನವನ್ನು ಅರಿಯುವದು ಇಂದು ಅಸಾಧ್ಯವಾಗಿದೆ. ಇದಕ್ಕೆ ಕಾರಣವೆಂದರೆ ನಮ್ಮ ಇಡೀ ಜನಾಂಗವೇ ಇದರ ಸಹಾಯದಿಂದ ಎದ್ದು ನಿಂತಿದೆ; ನಮಗೆ ಬೇರೇ ವಿಧಾನವೇ ತಿಳಿಯದು. ಗಣಿತದ ಗುರಿ ಎಂದು ತಿಳಿದದ್ದೆಲ್ಲವನ್ನೂ ಅದು ಸಲ್ಲಿಸಿರುವುದಲ್ಲದೆ, ಟೀಕೆಗೆ ಸಿಗದಷ್ಟು ವಿಶಾಲವಾಗಿ ಗೊತ್ತು ಗುರಿಯಿಲ್ಲದೆ ಬೆಳೆದಿರುವ ಗಣಿತ ಯಾವುದರ ಹೋಲಿಕೆಗೂ ಸಿಗದೆ, ಅಸಾಮಾನ್ಯವಾಗಿದೆ.

ಗಣಿತದ ಎಲ್ಲಾ ವಿಭಾಗಗಳೂ ಪ್ರಯೋಜನಾಕಾರಿ ಉದ್ದೇಶವುಳ್ಳವು ಎಂಬುದು ಖರೆಯಲ್ಲ. ನಿಜವೇನೆಂದರೆ ಕೇವಲ ತಾತ್ವಿಕವಾದ ಅಧ್ಯಯನದ ವಿಷಯಗಳು ಇಂದು ಗಣಿತದ ಬಹುಮತದಲ್ಲಿವೆ. ನಿರ್ದಿಷ್ಟ ಪ್ರಯೋಜನಾಕಾರಿ ಉದ್ದೇಶವಿಲ್ಲದೆ, ಅತಿವ್ಯಯವೋ ಮಿತವ್ಯಯವೋ ಎಂದು ಚಿಂತಿಸದೆ, ಛಲ ಮತ್ತು ಸತತ ಪರಿಶ್ರಮದಿಂದ ಬೆಳೆದಿರುವ ಗಣಿತದ ಈ ವಿಷಯಗಳ ನಡುವಿರುವ ಸಂಬಂಧವನ್ನು ಗಮನಿಸಿದಾಗಲೇ ನಮಗೆ ಅದರ ಇನ್ನೊಂದು ಮುಖ ಕಾಣಿಸುತ್ತದೆ. ಸಾಮಾನ್ಯರಿಗೆ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸರಳ ಲೆಕ್ಕಾಚಾರಗಳಿಗಿಂತ ಜಟಿಲವಾದದ್ದೇನೂ ಬೇಕಾಗುವದಿಲ್ಲ. ಯಂತ್ರತಂತ್ರಜ್ಞನಿಗೂ ತನ್ನ ಕೆಲಸಗಳನ್ನು ನಿಭಾಯಿಸಲು ಬ್ರಹ್ಮವಿದ್ಯೆಯ ಅವಶ್ಯಕತೆಯಿಲ್ಲ, ಸರಳವಾದ ತಾಂತ್ರಿಕ ಕೈಪಿಡಿ ಸಾಕು. ಭೌತಶಾಸ್ತ್ರಜ್ಞ ಕೂಡ ಸರಳವಾದ ಗಣಿತದ ತಂತ್ರಗಳಿಂದಲೇ ತನ್ನ ಕೆಲಸ ಮಾಡುತ್ತಾನೆ. ಆಕಸ್ಮಾತ್, ಅವರಿಗೇನಾದರೂ ವಿಶೇಷವಾದ ತಂತ್ರದ ಅವಶ್ಯಕತೆಯಿದ್ದಲ್ಲಿ, ಅವನು ತಾನೇ ಬಗೆಹರಿಸಿಕೊಳ್ಳಬೇಕು. ಗಹನವಾದ ಸಮಸ್ಯೆಗಳಲ್ಲಿ ಮುಳುಗಿರುವ ಗಣಿತಜ್ಞನಿಗೆ ಹೆಚ್ಚು ಪರಿಶ್ರಮವಿಲ್ಲದೆ ಬಗೆಹರಿಸಬಹುದಾದ ಅಂತಹ ಸಮಸ್ಯೆಗಳು ಸವಾಲೆನಿಸುವದಿಲ್ಲ, ಆಸಕ್ತಿಯೂ ಇರುವುದಿಲ್ಲ. ಹೀಗಾಗಿ ಇವತ್ತು ಪ್ರಯೋಜನಾಕಾರಿಯಾಗುವ ಅನೇಕ ಗಣಿತದ ತಂತ್ರಗಳಲ್ಲಿ ಪರಿಣಿತರು ಗಣಿತಜ್ಞರಲ್ಲ! ಬದಲಾಗಿ ಮೂಲತಹ ಬೇರೆ ವಿಷಯಗಳಲ್ಲಿ (ಭೌತಶಾಸ್ತ್ರ, ತಂತ್ರಜ್ಞಾನ ಇತ್ಯಾದಿ) ತರಭೇತಿ ಪಡೆದವರು. ಆದರೆ, ಇವುಗಳ ಪಕ್ಕದಲ್ಲೇ, ಇತರರ ಊಹೆಗೂ ನಿಲುಕದ, ಕೇವಲ ಗಣಿತಜ್ಞರಿಗೆ ಸಾಕ್ಷಾತ್ಕಾರವಾದ ಜಗತ್ತೊಂದಿದೆ: ಕೀಳಾದ ಸ್ನಾಯುಗಳ ಗುಡಿಸಿಲಿನ ಪಕ್ಕಕ್ಕೇ ಬೃಹತ್ತಾದ ಚಿತ್ತದ-ಮಹಲು ಎದ್ದು ನಿಂತಿದೆ. ಈ ಮಹಲಿನಲ್ಲಿ ಗಣಿತಜ್ಞ ಒಬ್ಬಂಟಿಯಾಗಿ ತನ್ನ ಕೆಲಸದಲ್ಲಿ ಮಗ್ನನಾಗಿರುತ್ತಾನೆ. ಅವನ ಕೋಣೆಯಿಂದ ಹೊರಜಗತ್ತಿಗೆ ಕಿಟಕಿಗಳೂ ಇಲ್ಲ. ಇರುವ ಕಿಟಕಿಗಳು ಅವನ ಕೆಲಸಕ್ಕೆ ಸಂಬಂಧವಿರುವ ಕೆಲವು ಗಣಿತಜ್ಞರ ಕೋಣೆಗೆ ತೆರೆಯುತ್ತವೆ. ಹೀಗಾಗಿ ಈ ಮಹಲಿನಲ್ಲಿರುವವರಲ್ಲಿ ಇಡೀ ಮಹಲಿನ ಅಂದಾಜಿರುವ ಮೇಧಾವಿಗಳೂ ತೀರ ವಿರಳ (ಎಲ್ಲಾ ಕೋಣೆಗಳನ್ನು ಹೊಕ್ಕಿ, ತಮ್ಮೊಳಗೇ ಮಗ್ನರಾಗಿರುವರೊಡನೆ ಸಂವಾದಿಸಲಾಗದೇ ಯಾವುದೋ ಮೂಲೆಯಲ್ಲಿ ಸುಧಾರಿಸಿಕೊಳ್ಳುತ್ತಿರಬಹುದು). ಹೀಗಾಗಿ ಗಣಿತಜ್ಞ ಅವನಿಗಲ್ಲದೆ ಬೆರಳಲ್ಲೆಣಿಸುವಷ್ಟು ಗಣಿತಜ್ಞರಿಗೆ ಬಿಟ್ಟು ಉಳಿದವರಿಗೆ ಹೊರತಾಗಿರುವ ವಿಶಿಷ್ಟ ತಂತ್ರಗಳ ಪರಿಣಿತ. ತನ್ನ ಕೆಲಸ ಮುಂದೆಂದಾದರೂ ಹೇರಳ ಆರ್ಥಿಕ ಪ್ರಯೋಜನವಿರುವ ಸಾಧನವಾಗಲೆಂಬ ಆಸೆಯಿದ್ದರೂ, ಆ ಆಸೆ ಅವನ ಸ್ಫೂರ್ಥಿಯಲ್ಲ; ಅವನ ಪರಿಶ್ರಮವೆಲ್ಲಾ ಅವನು ನಂಬಿರುವ ಸತ್ಯದ ಗುರಿಯೆಡೆಗೇ ಆಗಿದೆ. ಅದು ಹೊರಜಗತ್ತಿನಲ್ಲಿ ಅತಿಪ್ರಯೋಜನಾಕಾರಿಯಾಗಬಹುದು; ಆದರೆ, ಅವನ ಸಂಪೂರ್ಣ ಅರ್ಪಣೆ ಮತ್ತು ಛಲಭರಿತ ಭಕ್ತಿಯಿಲ್ಲದೆ ಇದು ಸಾಧ್ಯವಿಲ್ಲ.

ಇಂದು ಉಳಿದಿರುವ ಅಪ್ಪಟ ತಾರ್ಕಿಕತೆಯ ಭಂಡ ಐಷಾರಾಮಗಳಲ್ಲಿ ಗಣಿತಶಾಸ್ತ್ರವೂ ಒಂದು. ಟೈ ಅಥವಾ ಅಂಚೆಚೀಟಿಗಳ ಸಂಗ್ರಹಕಾರರಂತೆ ಶಾಸ್ತ್ರೀಯ ಅಧ್ಯಯನಗಳಲ್ಲಿ ನಿರತವಾಗಿರುವವರೂ ಪ್ರಾಯಶಃ ತಮ್ಮ ಕೆಲಸದ ಪ್ರಯೋಜನಗಳ ಬಗ್ಗೆ ಚಿಂತಿಸದೆ ತಮ್ಮ ಕೆಲಸದಲ್ಲೇ ಮಗ್ನರಾಗಿರುತ್ತಾರೆ. ಆದರೆ ಇವು ನಮ್ಮ ಜೀವನದ ಗಂಭೀರ ವ್ಯವಹಾರಗಳಿಂದ ದೂರವಿರುವ ನಿರುಪದ್ರವಿ ಚಂಚಲತೆಗಳು. ಆದರೆ, ಈ ಗಂಭೀರತೆಯ ಆವರಣದಲ್ಲೇ ಮಾನವ ಇತಿಹಾಸದ ಅತ್ಯಂತ ಮನೋರಂಜಿತವಾದ ಹಾಗೂ ಸಾಹಸಮಯವಾದ ಪ್ರಸಂಗಗಳಲ್ಲಿ ಗಣಿತಶಾಸ್ತ್ರದ ಇರುವಿದೆ. ಒಂದು ಸಣ್ಣ ಉದಾಹರಣೆಯೊಂದನ್ನು ಕೊಡುತ್ತೇನೆ: ನಾವು ಇಂದು ಹೆಚ್ಚಿನ ಅಂಶ ಗಣಿತದ ಫಲಾಂಶಗಳ ಆಧಾರದ ಮೇಲೆಯೇ ಜೀವಿಸುತ್ತಿದ್ದರೂ, ಇದರ ಬಗ್ಗೆ ಗಣಿತಶಾಸ್ತ್ರ ನಿರ್ಲಿಪ್ತವಾಗಿರುವದು. ಗಣಿತದ ಸಹಾಯದಿಂದ ನಾವು ನಮ್ಮ ಆಹಾರವನ್ನು ಮಿತವ್ಯಯದಿಂದ ಬೇಯಿಸಿಕೊಳ್ಳಬಹುದು, ನಮ್ಮ ಮನೆಗಳನ್ನು ಕಟ್ಟಬಹುದು ಅಲ್ಲದೆ ನಮ್ಮ ವಾಹನಗಳನ್ನು ಚಲಾಯಿಸಬಹುದು. ಕರಚಳಕದಿಂದ ಮಾಡಿದ ಕೆಲವೇ ಕೆಲವು ಫರ್ನಿಚರಗಳು, ಬಟ್ಟೆಗಳು, ಚಪ್ಪಲಿಗಳು ಮತ್ತು ಮಕ್ಕಳನ್ನು ಬಿಟ್ಟರೆ ಉಳಿದೆಲ್ಲವೂ ಗಣಿತಾಂಶವುಳ್ಳ ಆವಿಷ್ಕಾರಗಳಿಂದ, ಗಣಿತದ ಲೆಕ್ಕಾಚಾರಗಳ ಬಳುವಳಿಗಳಾಗಿವೆ. ನಮ್ಮ ಸುತಮುತ್ತಲಿರುವ, ಹುಚ್ಚಾಗಿ ತಿರುಗುವ ಆಧುನಿಕ ಜಗತ್ತಿನ ಎಲ್ಲ ಆಗುಹೋಗುಗಳು ಗಣಿತದ ಫಲಸ್ವರೂಪವೇ ಅಸ್ತಿತ್ವಕ್ಕೆ ಬಂದಿರುವದಲ್ಲದೆ, ಆ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅದನ್ನು ಅರ್ಥೈಸಿಸಲು ನಾವು ಗಣಿತದ ಮೊರೆಯೇ ಹೋಗಬೇಕಾಗಿದೆ; ಅದೂ ಜಗತ್ತಿನ ಹಲವು ಸಂಗತಿಗಳ ಬಗ್ಗೆ ಗಣಿತ ತಳೆದಿರುವ ನಂಬಿಕೆಗಳ ಆಧಾರಗಳ ಮೇಲೆ. ಮೂಲ ಗಣಿತಜ್ಞರು ನಿರ್ಣಯಗಳಿಗೆ ಬರಲು, ಲೆಕ್ಕಾಚಾರಗಳು ಸರಳವಾಗುವುದಲ್ಲದೆ, ಹೊಸ ಫಲಿತಾಂಶಗಳನ್ನು ಪ್ರತಿಪಾದಿಸಿ ಸಮರ್ಥಿಸಲು ಸಾಧ್ಯವಾಗುವಂತೆ, ಪ್ರಶ್ನೆಗೊಳಗಾಗದ ಕೆಲವು ಮೂಲಭೂತ ನಂಬಿಕೆಗಳನ್ನು ಕೊಟ್ಟರು; ಇವುಗಳನ್ನು ಉಪಯೋಗಿಸಿ ಭೌತಶಾಸ್ತ್ರಜ್ಞರು ತಮ್ಮ ವಿಷಯವನ್ನು ಬೆಳೆಸಿದರು, ಕೊನೆಯಲ್ಲಿ ಬಂದ ತಂತ್ರಜ್ಞ ಈ ಜ್ಞಾನಗಳಿಗೆ ಹೊಸ ಲೆಕ್ಕಾಚಾರಗಳನ್ನು ಸೇರಿಸಿ ಯಂತ್ರಗಳನ್ನು ಆವಿಷ್ಕರಿಸಿದ. ಇವೆಲ್ಲವೂ ಸೇರಿ ಜಗತ್ತಿನಲ್ಲಿರುವದಕ್ಕೆಲ್ಲ ಒಂದು ಸುಂದರವಾದ ಅಸ್ತಿತ್ವ ಕೊಟ್ಟಾಗ, ಇದ್ದಕ್ಕಿದ್ದಂತೆ, ತಮ್ಮೊಳಗೇ ನಿರತವಾಗಿರುವ ಗಣಿತಜ್ಞರು ಇವುಗಳನ್ನೆಲ್ಲಾ ಹೊತ್ತಿರುವ ಸ್ವಯಂಸಿದ್ಧವೆಂದು ನಂಬಿದ್ದ ಬುನಾದಿಯಲ್ಲಿ ಸರಿಪಡಿಸಲಾಗದ ದೋಷ ಕಂಡುಹಿಡಿದರು. ಈ ಭವ್ಯ ಜ್ಞಾನದ ಮಹಲಿನ ತಡಿಪಾಯವನ್ನು ಶೋಧಿಸಿದ ಅವರು ಈ ಮಹಲು ಗಾಳಿಯ ಮೇಲೆ ನಿಂತಿದೆ ಎಂಬುದನ್ನು ಸಾಬೀತುಪಡಿಸಿದರು. ಆದರೆ ಯಂತ್ರಗಳು ತಮ್ಮ ಕೆಲಸ ಮಾಡುತ್ತಿದ್ದವು! ಹೀಗಾದರೆ ನಮ್ಮ ಅಸ್ತಿತ್ವವನ್ನು ನಾವು ಒಂದು ನೀರಸ ಭೂತವೆಂದೇ ಪರಿಗಣಿಸಬೇಕು: ನಾವು ಜೀವಿಸುವ ಜಗತ್ತು ಈ ದೋಷದ ಆಧಾರವಿಲ್ಲದೆ ಎದ್ದೇ ನಿಲ್ಲುತ್ತಿರಲಿಲ್ಲ! ಇಂತಹ ವಿಸ್ಮಯಭರಿತ ದಾರ್ಶನಿಕ ಕಲ್ಪನೆಗಳ ಅನುಭವ ಗಣಿತಜ್ಞರಿಗಲ್ಲದೆ ಬೇರೆ ಯಾರಿಗೂ ಸಾಧ್ಯವಿಲ್ಲ.

ಗಣಿತಜ್ಞರು ಈ ಮಟ್ಟದ ಬೌದ್ಧಿಕ ಹಗರಣವನ್ನು ಮಾದರಿಯಾದ ರೀತಿಯಲ್ಲಿ ನಿಭಾಯಿಸಿದ್ದಾರೆ. ಗಣಿತದ ಆಧಾರದ ಮೇಲೆ ಕೆಲವು ಭೌತಶಾಸ್ತ್ರಜ್ಞರು ಸ್ಥಳ ಮತ್ತು ಸಮಯದ ಇರುವನ್ನೇ ಅಲ್ಲಗಳೆಯುವ ಪಣ ತೊಟ್ಟಿದ್ದಂತಹ ಅನೇಕ ಉದಾಹರಣೆಗಳನ್ನು ನಾನು ಸೇರಿಸಬಹುದು. ಇಂತಹ ಬಾನುಗಡಿಯನ್ನು ಅವರು ಚಿಂತಾಜನಕವಾದ ಮುಸುಕಿನಲ್ಲಿ ಮಾಡುವದಿಲ್ಲ. ಕೆಲವೊಮ್ಮೆ ತತ್ವಜ್ಞಾನಿಗಳು ಹಾಗೆ ಮಾಡುತ್ತಾರೆ (ಆದರೆ ಉಳಿದವರು `ಅವರ ಕಸುಬೇ ಹಾಗೆ' ಎಂದು ನಿರ್ಲಕ್ಷಿಸುತ್ತಾರೆ). ಗಣಿತಜ್ಞರು ಹಾಗಲ್ಲ. ಅವರು, ಇಂಧನವಾಹನಗಳಷ್ಟೇ ಸತ್ಯವೆನಿಸುವ, ನಮ್ಮೆದುರಿಗೇ ಅಧಿಕೃತಗೊಂಡು ಭೀಕರವಾಗಿ ಬೆಳೆದಿರುವ ತರ್ಕಗಳ ಆಧಾರಗಳ ಮೂಲಕ ತಮ್ಮ ಕೆಲಸವನ್ನು ನಿಭಾಯಿಸುತ್ತಾರೆ. ಗಣಿತಜ್ಞರು ಎಂತಹವರು ಎಂಬುದಕ್ಕೆ ಇಷ್ಟೇ ಸಾಕು.

enlightenment ನಂತರ (ಯುರೋಪಿನಲ್ಲಿ ನಡೆದ) ಉಳಿದ ನಾವೆಲ್ಲರೂ ನಮ್ಮ ಧೈರ್ಯವನ್ನು ಕಳೆದುಕೊಂಡೆವು. ಸಣ್ಣಪುಟ್ಟ ವಿಫಲತೆ ನಮ್ಮನ್ನು ತರ್ಕದಿಂದ ದೂರಸರಿಸಲು ಸಾಕಾಯಿತು; ಕೆಲವು ಗೊಡ್ಡು ಹುಂಬರು ಅಲೆಂಬರ್ಟ್ ಅಥವಾ ಡಿಡೆರೊಟ್-ರಂತಹ ಧೀಮಂತಿಕೆ ಮತ್ತು ನವ್ಯ ಕಲ್ಪನೆಗಳನ್ನು ಒಗ್ಗೂಡಿಸಿಕೊಂಡ ಬರಹಗಾರರನ್ನು ಕೇವಲ ವಿಚಾರವಾದಿಗಳೆಂದು ಅವಹೇಳಿಸಿದರೂ ಸುಮ್ಮನಿರುತ್ತೇವೆ. ಚಿಂತನೆಯ ಹೊರತಾಗಿ- ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಉದಾಹರಣೆಗಳಿರಬುಹುದು- ಕೇವಲ ಭಾವನೆಗಳು ಬೋರ್ಗಲ್ಲಿನಷ್ಟೇ ದಟ್ಟವಾಗಿರುತ್ತವೆ ಎಂಬುದನ್ನು ಮರೆತು ಭಾವನೆಗಳ ಪರವಾಗಿ ಹಾಗೂ ತರ್ಕದ ವಿರುದ್ಧ ಡಂಗುರ ಬಾರಿಸುತ್ತೇವೆ. ಹೀಗೆ ನಾವು ಕಲ್ಪನಾತ್ಮಕವಾದ ಸಾಹಿತ್ಯವನ್ನು ಎಷ್ಟರ ಮಟ್ಟಿಗೆ ನಾಶಗೊಳಿಸಿದ್ದೇವೆಂದರೆ, ಎರಡು ಜರ್ಮನ್ ಕಾದಂಬರಿಗಳನ್ನು ಒಂದರ ಹಿಂದೊಂದು ಓದಿದರೆ ಮೈಗೂಡಿದ ಜಿಡ್ಡನ್ನು ಕರಗಿಸಲು ಪಲ್ಲಟ-ಕಲನದ ಸಮೀಕರಣಗಳನ್ನು (differential equations) ಬಿಡಿಸಬೇಕು.

ಗಣಿತಜ್ಞರು ಅವರ ಅಧ್ಯಯನ ಕ್ಷೇತ್ರದ ಹೊರಗೆ ಅತಿಸಾಮಾನ್ಯವಾದ ಅಥವಾ ಹಾಸ್ಯಾಸ್ಪದವಾದ ಧೋರಣೆಯುಳ್ಳವರೆಂದಾಗಲೀ ಅಥವಾ ಅವರೇ ತಮ್ಮ ಯುಕ್ತಿಯನ್ನು ಮೂಲೆಗಟ್ಟಿದವರೆಂದಾಗಲೀ ದೂಷಿಸುವ ಅಗತ್ಯವಿಲ್ಲ. ಇದು ಅವರ ಕ್ಷೇತ್ರವಲ್ಲ್ಲ. ಆದರೆ ನಾವು ನಮ್ಮ ಕ್ಷೇತ್ರಗಳಲ್ಲಿ ಅವರನ್ನು ಅನುಸರಿಸುವ ಅಗತ್ಯವಿದೆ. ಇದರಲ್ಲೇ ಅವರ ಅಸ್ತಿತ್ವದ ಮಾದರಿ ಮತ್ತು ನಾವು ಕಲಿಯಬೇಕಾದ ಪಾಠವಿರುವದು. ಭವಿಷ್ಯದ ಭೌದ್ಧಿಕತೆಯ ಕುರುಹುಗಳು ಅವರಲ್ಲಿವೆ.

ನಾನು ಲಘುವಾಗಿ ಗಣಿತದ ಗುಣದ ಬಗೆಗೆ ಆಡಿರುವ ಮಾತುಗಳ ಹೊರತಾಗಿಯೂ ಗಂಭೀರವಾದದ್ದೇನಾದರೂ ಹೊರಹೊಮ್ಮಿದರೆ, ನನ್ನ ಕೊನೆಯ ಮಾತುಗಳು ಅನಿರೀಕ್ಷಿತವಾಗಿರಲಾರವು. ನಮ್ಮ ಕಾಲದಲ್ಲಿ ಮಾಯವಾಗುತ್ತಿರುವ ಸಂಸ್ಕೃತಿಯ ಬಗೆಗೆ ಅನೇಕರು ದೂರುತ್ತಿರುತ್ತಾರೆ. ಹಾಗೆನ್ನುವುದರ ಅರ್ಥ ಹಲವಾರಿರಬಹುದು, ಮುಖ್ಯವಾಗಿ: ಧಾರ್ಮಿಕವಾಗಿ, ಸಾಮಾಜಿಕ ಪದ್ದತಿಗಳಾಗಿ, ಅಥವ ಕಲೆಗಳ ಮೂಲಕ ಸಂಸ್ಕೃತಿ ಎಲ್ಲವನ್ನೂ ಒಗ್ಗೂಡಿಸುತ್ತದೆ. ಸಾಮಾಜಿಕ ಪದ್ದತಿಗಳಿಗೆ ನಾವು ಮಹಳ ಮಂದಿಗಳಾಗಿದ್ದೇವೆ. ಧಾರ್ಮಿಕವಾಗಿ ಒಗ್ಗೂಡಿಸಲೂ ನಾವು ಬಹುಸಂಖ್ಯೆಯಲ್ಲಿದ್ದೇವೆಂಬುದನ್ನು ಇಲ್ಲಿ ಘೋಷಿಸಬಹುದೇ ಹೊರತು ಸಮರ್ಥಿಸಲು ಸಾಧ್ಯವಿಲ್ಲ. ಕಲೆಗಳ ಬಗ್ಗೆ ಯೋಚಿಸಿದರೆ, ತನ್ನ ಲೇಖಕರನ್ನು ಪ್ರೀತಿಸದ ಮೊದಲ ಕಾಲಮಾನವಿದು. ಹೀಗಿರುವಾಗಲೂ ನಮ್ಮ ಕಾಲದಲ್ಲಿ ನಡೆಯುತ್ತಿರುವಷ್ಟು ಧಾರ್ಮಿಕ ಹಾಗೂ ಬೌದ್ಧಿಕ ಪ್ರಕ್ರಿಯೆಗಳು ಹಿಂದೆಂದೂ ನಡೆದಿರಲಿಲ್ಲ, ಮನಸ್ಸುಗಳ ಮತ್ತು ಚೈತನ್ಯಗಳ ಭಾವೈಕ್ಯ ಹಿಂದೆಂದೂ ಆಗದಷ್ಟು ನಡೆದಿದೆ. ಇವೆಲ್ಲ ಕೇವಲ ಜ್ಞಾನಕ್ಕಾಗಿ ಎಂಬ ನಿಲುವ ತಳೆದರೆ ಮೂರ್ಖತನವಾದೀತು. ಯಾಕೆಂದರೆ ಚಿಂತನೆ ಯಾವಾಗಿನಿಂದಲೂ ಮುಖ್ಯ ಉದ್ದೇಶವಾಗಿದೆ. ಗಹನತೆ, ಎದೆಗಾರಿಕೆ, ಮತ್ತು ಸೃಜನಶೀಲಗಳ ಮೇಲೆ ತನ್ನ ಸ್ವಂತಿಕೆಯನ್ನು ಜತನಿಸುವ ಚಿಂತನೆ ಈಗಲೂ ಕೇವಲ ತಾರ್ಕಿಕ ಮತ್ತು ವೈಜ್ಞಾನಿಕ ಮನಗಳಿಗೆ ಮಾತ್ರ ಹಂಗಾಮಿಯಾಗಿ ಒಲಿದಿದೆ. ಆದರೆ, ಈ ಧೀಮಂತಿಕೆಗೆ ತನ್ನ ಸುತ್ತಮುತ್ತಲಿರುವದನ್ನೆಲ್ಲ ಕಬಳಿಸುವ ಚಾಳಿಯಿದೆ; ಆದರೆ, ಈ ಧೀಶಕ್ತಿಗೆ ಭಾವನೆಗಳ ಆಧಾರ ಸಿಗುತ್ತಿದ್ದಂತೆಯೇ ಚೈತನ್ಯವಾಗುತ್ತದೆ. ಈ ದಿಶೆಯಲ್ಲಿ ಹೆಜ್ಜೆಯಿಡುವದು ಲೇಖಕರ ಗುರಿಯಾಗಿದೆ. ಇದನ್ನು ಸಾಧಿಸಲು ಅವರು ಯಾವುದೇ ವಿಧಾನದ ಮೊರೆಹೋಗುವ ಅವಶ್ಯಕತೆಯಿಲ್ಲ- ಅದರಲ್ಲೂ ಮನಶ್ಯಾಸ್ತ್ರ ಅಥವಾ ಅದರಂತವುಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಹೀಗಿದ್ದೂ ಲೇಖಕರು ತಮ್ಮ ಪರಿಸ್ಥಿತಿಯಲ್ಲಿ ನಿಸ್ಸಹಾಯಕರಾಗಿದ್ದಾರೆ, ತಮ್ಮ ಸಮಾಧಾನಕ್ಕೋಸ್ಕರ ಉಳಿದವರನ್ನು ದೂಷಿಸಿಕೊಳ್ಳುತ್ತಾರೆ; ನಮ್ಮ ಸಮಕಾಲೀನರಿಗೆ ತಮ್ಮ ಬೌದ್ಧಿಕತೆಯನ್ನು ಅವರ ಬದುಕನ್ನು ನಿರೂಪಿಸಿರುವ ಬೌದ್ಧಿಕತೆಯ ಮಟ್ಟಕ್ಕೇರಿಸುವ ದಾರಿ ತಿಳಿಯದಿದ್ದರೂ ತಮ್ಮ ಗ್ರಹಿಕೆಯಡಿಗೆ ಅಡಗಿರುವುದೇನೆಂಬುದರ ಬಗ್ಗೆ ಅಂದಾಜಿದೆ.

ಬೆನೆಗಲ್-ರ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು

ಸುದರ್ಶನರು ತಮ್ಮ ಬ್ಲಾಗನಲ್ಲಿ ಬೆನೆಗಲ್ ಅವರ ಬಗ್ಗೆ ಬರೆದಿದ್ದಾರೆ. ನೇರವಾಗಿ ದೂಷಿಸದಿದ್ದರೂ, ಅವರಿಗೆ ಏನೋ ಅಸಮಾಧಾನವಿದೆಯೆಂದು ಅನಿಸಿತು. ಅವರ ಬ್ಲಾಗಿಗೆ ಪ್ರತಿಕ್ರಯಿಸಿದ ಶಿವು ಅವರು ತಮ್ಮ ಅಸಮಾಧಾನವನ್ನು ಜೋರಾಗೆ ತೋಡಿಕೊಂಡಿದ್ದಾರೆ. ಯಾರಿಗೆ (ಬೆನೆಗಲ್ ಹಿಡಿದು) ಏನೇ ಅನಿಸಲಿ ತಮಗಂತೂ ತಮಗೆ ಸಂವೇದನಾಶೀಲನೆನ್ನಿಸುವ ಬೆನೆಗಲ್ ಬೇಕಾಗಿದೆ ಎಂದು ಹೇಳಿದ್ದಾರೆ. ಶಿವು ಮತ್ತು ಸುದರ್ಶನ್ ಇಬ್ಬರೂ ಸೂಕ್ಷ್ಮರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಂವೇದನೆ ಎಂದರೆ ಏನು ಎಂಬುದನ್ನು ಅರಿತಿದ್ದಾರೆಯೆ ಎಂಬ ಪ್ರಶ್ನೆ ನನ್ನೆದುರು ಬಂದಿದೆ. ಬರೀ ನಮ್ಮಿಂದಲೇ ನಾವು ಸಂವೇದನಾಶೀಲರಾಗಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ, ಪ್ರಸ್ತುತದ ಪ್ರವಾಹದ ದಿಕ್ಕಿಗೆ ಮತ್ತು ನಮ್ಮ ಸುತ್ತಲಿರುವ ಜನರು, ಪ್ರಾಣಿಗಳು, ಮತ್ತು ಪರಿಸರಕ್ಕೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎಂಬುದರಲ್ಲಿ ಅಡಗಿದೆ ನಮ್ಮ ಸಂವೇದನೆ. ನಮ್ಮ ಪ್ರತಿಕ್ರಿಯೆಗಳು ಜೀವನದ ಬಗೆಗಿನ ಖಚಿತವಾದ ಧೋರಣೆಯಿಂದ ಪ್ರೇರಿತವಾಗಿರದಿದ್ದರೆ, ಸಂವೇದನಾಶೀಲರಾಗುವ ಮಾರ್ಗ ಸುಲಭವಾಗಬಹುದು.

ಸಿನೇಮಾ ಮೊದಲು ಕಥನದ ಮಾಧ್ಯಮ. ನಾವು ಇದನ್ನು ಅರಿಯಬೇಕು. ದೂರದರ್ಶನ ಸಾಮಾಜಿಕ ಶಿಕ್ಷಣಕ್ಕೆ ನಾಂದಿ ಕೊಡುತ್ತದೆ ಎಂದು ನಂಬಿದವರು ತಮ್ಮ ತಪ್ಪನ್ನು ಅರಿತಿರಬಹುದು. ಹಾಗೆಯೇ, ಅಂತರ್ಜಾಲವೂ ಸಂವೇದನಾಶಿಲ ಮಾರ್ಗಕ್ಕೆ ನಾಂದಿ ಕೊಡುತ್ತದೆ ಎಂದು ನಂಬಿರುವವರೂ ಇದ್ದಾರೆ. ಅವರ ನಂಬಿಕೆ ಹುಸಿಯಾಗದಿರಲಿ ಎಂದು ಆಶಿಸುತ್ತೇನೆ. ಸಿನೇಮಾ ಕಥನದ ಮಾಧ್ಯಮ. ನಾಟಕ, ಕಾದಂಬರಿಗಳು ಹೇಗೆ ಕಥನದ ಮಾಧ್ಯಮಗಳೋ ಹಾಗೆ. ಸಿನೇಮಾಕ್ಕೆ ತನ್ನದೇ ಆದ ಸವಲತ್ತುಗಳಿವೆ, ಹಾಗೆಯೇ ತನ್ನದೇ ಆದ ಕೊರತೆಗಳೂ ಇವೆ. ರಾಮಾಯಣದ ಹನುಮಂತನ ಸಾಗರೋಲ್ಲಂಘನವೇ ಆಗಲಿ, ಲಂಕಾದಹನವೇ ಆಗಲಿ ಹೇಳಲು, ಕೇಳಲು, ಬರೆಯಲು, ಓದಲು ರೋಮಾಂಚನವಾದ ಪ್ರಸಂಗಗಳು. ನಾಟಕದಲ್ಲೂ ಆ ರೋಮಾಂಚನವನ್ನು ತರಬಹುದು. ಆದರೆ, ಚಲನ ಚಿತ್ರ ಮಾಧ್ಯಮದಲ್ಲಿ ಅದೆಷ್ಟು ಕಷ್ಟ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಈ ಮಾಧ್ಯಮವನ್ನು ಹೇಗೆ ಉಪಯೋಗಿಸಿಕೊಂಡಿದೆ ಎಂಬುದರಲ್ಲೇ ಚಿತ್ರದ ಗುಣವಡಗಿದೆ.

ಮತ್ತೊಂದು ವಿಷಯ. ಪುಸ್ತಕಗಳು ಎಂಬ ಆಧಾರದ ಮೇಲೆ ನಾವು ಸಿಡ್ನಿ ಶೆಲ್ಡನ್ ಅವರ ಪುಸ್ತಕಗಳನ್ನು ಮತ್ತು ನೈಪಾಲರ ಪುಸ್ತಕಗಳನ್ನೂ ಹೋಲಿಸುವದು ಸರಿಯೆ? ಶೆಲ್ಡನ್-ರ ಜನಪ್ರಿಯತೆ ತನಗೆ ಸಿಗುವದಿಲ್ಲ ಎಂದು ಗೊತ್ತಿದ್ದೇ ನೈಪಾಲರು ಬರೆಯಲು ಶುರುಮಾಡುವದಲ್ಲವೆ? ನೈಪಾಲರನ್ನು ನಾವು ಸಾಹಿತಿಗಳಾಗಿ ವಿಮರ್ಶಿಸಬೇಕು. ಚಲನಚಿತ್ರ ಮಾಧ್ಯಮ ಕಲೆಯಾದರೆ, ತಾವು ಕಲಾಕಾರ ಎಂಬ ರೀತಿಯಲ್ಲಿ ನಡೆದುಕೊಂಡು ಬಂದ ಬೆನೆಗಲ್-ರನ್ನು ಕಲಾಕಾರರನ್ನಾಗಿ ವಿಮರ್ಶಿಸಬೇಕು. ಒಬ್ಬ ಕಲಾಕಾರನ ಗುಣ ಅವನ ಸಾಮಾಜಿಕ ಕಾಳಜಿಯಿಂದಾಗಲಿ ಅಥವ ಅವನ ಕೃತಿಗಳಲ್ಲಿ ಕಾಣಬರುವ ಕಾಳಜಿಯಿಂದಾಗಲೀ ಬರುವದಿಲ್ಲ. ಕುಮಾರ ಗಂಧರ್ವರ ಹಾಡು ಕೇಳಬೇಕಾದರೆ ನಿಮಗೆ ಯಾವ ಸಾಮಾಜಿಕ ಕಾಳಜಿ ಜಾಗ್ರತವಾಗುತ್ತದೆ? ನನಗಂತೂ ಕುಮಾರರ ವಿಶಿಷ್ಟ ಪ್ರಪಂಚಕ್ಕೆ ಪ್ರವೇಶ ದೊರಕುತ್ತದೆ. ಅದೇ ನನ್ನ ಆನಂದ. ಕಲಾಕಾರ ನಮ್ಮನ್ನು ಅವನ ವಿಶಿಷ್ಟ ಲೋಕಕ್ಕೆ ಕರೆದೊಯ್ದರೆ ಗೆದ್ದ. ಹಾಗೆಂದು ಎಲ್ಲ ಕಲಾಕೃತಿಗಳೂ ಸಾಮಾಜಿಕ ಕಾಳಜಿಯಿಂದ ಮುಕ್ತವಾದವು ಎಂದು ನಾನು ಹೇಳುತ್ತಿಲ್ಲ. ಅನೇಕ ವಿಶಿಷ್ಟ ಕೃತಿಗಳು ಸಾಮಾಜಿಕ ಕಾಳಜಿಯಿಂದಲೇ ಅಂಕುರಗೊಂಡವು ಎನ್ನುವದು ಮತ್ತು ಅನೇಕ ವಿಶಿಷ್ಟ ಕೃತಿಗಳು ನಮ್ಮಲ್ಲಿ ಸಾಮಾಜಿಕ ಕಾಳಜಿಯನ್ನು ಜಾಗೃತಗೊಳಿಸುತ್ತವೆ ಎಂಬುದು ನಿರ್ವಿವಾದ. ಕಂಬಾರರ `ಚಕೋರಿ' ಎಷ್ಟು ಕಲಾತ್ಮಕವೋ ಅಷ್ಟೇ ಯೋಚನಾ ಪ್ರಚೋದನೀಯವಾಗಿದೆ. ನಮಗೆ ಯಾವುದು ವಿಶಿಷ್ಟ? ಅದು ಸೃಷ್ಟಿಸುವ ಮನೋರಂಜಿತ ಲೋಕವೋ, ಅಧ್ಭುತವಾದ ಕಥೆಯೋ, ಉತ್ಕೃಷ್ಟವಾದ ಕಾವ್ಯಾತ್ಮಕತೆಯೋ, ಅದರಿಂದ ಬರುವ ಸಾಮಾಜಿಕ ಅರಿವೆಯೋ? ಉತ್ತರ ಪ್ರತಿಯೊಬ್ಬರಿಗೂ ಬೇರೆಯಿರಬಹುದು. ಯಾವುದೋ ಒಂದು ಅಂಶ ಉಳಿದೆಲ್ಲವುದಕ್ಕಿಂತ ಮುಖ್ಯ ಎಂಬ ನಂಬಿಕೆಯಿಂದ ನಾವು ಪ್ರತಿಕೃಯಿಸುವದು ಅನುಚಿತವಾಗಬಹುದು.

ಸಿನೇಮಾದ ಬಗ್ಗೆ ಇನ್ನೂ ಕೆಲ ಸಂಗತಿಗಳನ್ನು ಒತ್ತಿ ಹೇಳುವದು ಅವಶ್ಯ. ಮೊದಲನೆಯದಾಗಿ, ಸಿನೇಮಾ ಮಾಡುವದು ದೈಹಿಕವಾಗಿ ಶ್ರಮಪಡಿಸುವ ಕ್ರಿಯೆ, ನಾಟಕದಂತೆ. ಎರಡನೆಯದಾಗಿ ಸಿನೇಮಾ ಮಾಡಲು ಸಕ್ರಿಯರಾಗಿರುವ ದೊಡ್ಡ ತಂಡದ ಅವಶ್ಯಕತೆಯಿದೆ. ನಾಟಕಕ್ಕಿಂತ ದೊಡ್ಡ ತಂಡ ಬೇಕು. ಮೂರನೆಯದಾಗಿ, ಸಿನೇಮಾ ಮಾಡಲು ಕಡಿಮೆಯೇನಲ್ಲದ ಬಂಡವಾಳ ಬೇಕು. ನಾಟಕಕ್ಕಿಂತ ಹೆಚ್ಚು ಬೇಕು. ದೈಹಿಕ ಶ್ರಮದಲ್ಲಿ ಚಿತ್ರೀಕರಣ ಮಾಡಲು ಬೇಕಾಗುವ ಸಿದ್ಧತೆಗಳಿಂದ ಹಿಡಿದು, ಅವಶ್ಯವಿರುವ ಅಧಿಕಾರಿಗಳ ಸಹಮತಿ ಪಡೆಯುವದನ್ನೂ ಹಿಡಿದಿದ್ದೇನೆ. ಈ ಮೂರು ಅಂಶಗಳು ಸಿನೇಮಾ ಮೂಲಕ ಕಲಾತ್ಮಕತೆಯನ್ನು ಸಾಧಿಸಲು ದೊಡ್ಡ ಸವಾಲುಗಳಾಗುತ್ತವೆ ಎಂಬುದನ್ನು ನಾನು ಸಾಬೀತುಪಡಿಸಬೇಕಾಗಿಲ್ಲ ಎಂದುಕೊಂಡಿದ್ದೇನೆ. ಈ ಅಂಶಗಳನ್ನು ಗೌಣ ಮಾಡಿ ಬೆನೆಗಲ್-ರ ಬಗ್ಗೆ ನಿರ್ಧಾರಕ್ಕೆ ಬಂದರೆ ಅವರಿಗೆ ಅನ್ಯಾಯ ಎಂದು ಹೇಳಬೇಕು.

ಈಗ ಬೆನೆಗಲ್-ರ ವಿಷಯಕ್ಕೆ ಬರುತ್ತೇನೆ. ಅವರು ಹಿಂದೆ ಅತ್ಯುತ್ತಮ ಚಿತ್ರಗಳನ್ನೂ ಗಮನೀಯ ದೂರದರ್ಶನ ಧಾರಾವಾಹಿಗಳನ್ನು ಮಾಡಿರುವದು ನಿರ್ವಿವಾದ. ಆಗಿನ ಪರಿಸ್ಥಿತಿ ಹೀಗಿತ್ತು. ಬೆನೆಗಲ್ ಅವರಿಗೆ ಇನ್ನೂ ಹೆಚ್ಚು ವಯಸ್ಸಾಗಿರಲಿಲ್ಲ. ದೈಹಿಕ ಶ್ರಮ ಮಾಡುವ ಪರಿಸ್ಥಿತಿಯಲ್ಲಿದ್ದರು. ಎನ್.ಎಫ್.ಡಿ.ಸಿ. ಸುಮಾರು ಎಂಟರಿಂದ ಹದಿನಾರು ಲಕ್ಷ ರೂಪಾಯಿಗಳ ಹಣ ಕೊಡುತ್ತಿತ್ತು ಒಂದು ಚಿತ್ರ ಮಾಡಲು. ಬೆನೆಗಲ್ ಹೆಚ್ಚೇನೂ ಹೆಸರುವಾಸಿಯಾಗದ, ನಾಟಕಗಳಲ್ಲಿ ಪಳಗಿದೆ ಯುವ ನಟ ನಟಿಯರ ತಂಡ ಕಟ್ಟಿ, ಅವರಿಂದ ಚಿತ್ರಕ್ಕೆ ಬೇಕಾದ ಸಮಯ ಮತ್ತು ಗುಣಮಟ್ಟ ಎರಡನ್ನೂ ಪಡೆಯಲು ಬೇಕಾದ ಶ್ರಮ ಹಾಕುವ ಸ್ಥಿತಿಯಲ್ಲಿದ್ದರು. ಚಲನಚಿತ್ರದ ಉಳಿದ ವಿಭಾಗಗಳಲ್ಲಿ ಪಳಗಿದ, ಕಲಾತ್ಮಕ ಚಿತ್ರಗಳಲ್ಲಿ ಭಾಗವಹಿಸುವ ಇಚ್ಛೆಯಿರುವ ತಂತ್ರಜ್ಞರಿದ್ದರು. ಹೀಗಿದ್ದಾಗ ಸಿಕ್ಕ ಮಿತವಾದ ಹಣದಲ್ಲೂ ಚಿತ್ರ ಮಾಡುವದು ಸಾಧ್ಯವಿತ್ತು. ಅವರಲ್ಲದೆ, ಅನೇಕರು ಒಳ್ಳೆಯ ಚಿತ್ರಗಳನ್ನು ಮಾಡಿದರು.

ಇಂದಿನ ಪರಿಸ್ಥಿತಿಯನ್ನು ಗಮನಿಸಿ. ಸದ್ಯಕ್ಕೆ ಬೆನೆಗಲ್-ರ ವಯಸ್ಸು, ಅವರ ಇಂದಿನ ಧ್ಯೇಯಗಳನ್ನು ಮರೆಯೋಣ. ಎನ್.ಎಸ್.ಡಿ. ಯಂತಹ ನಾಟಕದ ಶಾಲೆಯಿಂದ ಹೊರಬರುವ ಪ್ರತಿಭಾನ್ವಿತರು ಸರಾಗವಾಗಿಯೇ ದೂರದರ್ಶನದ ಧಾರಾವಾಹಿಗಳಿಗೆ ಹೋಗುತ್ತಾರೆ. ಎನ್.ಎಸ್.ಡಿ.ಯಲ್ಲಿ ನಡೆಯುವ ರಾಜಕೀಯ ಹಸ್ತಕ್ಷೇಪಗಳನ್ನು ಗಮನಿಸಿದವರಿಗೆ ಈ ವಿದ್ಯಾರ್ಥಿಗಳು ಎಲ್ಲಾ ವಿಚಾರಧಾರಳಿಗೂ ನಿರ್ಲಿಪ್ತರಾಗಿದ್ದರೆ ಆಶ್ಚರ್ಯವಾಗುವದಿಲ್ಲ. ಹೀಗಾಗಿ ಪ್ರತಿಭಾನ್ವಿತ ನಟರ ತಂಡವನ್ನು ಒಟ್ಟುಹಾಕುವದು ದುಶ್ವಾರವಾಗಿದೆ. ಹೀಗೆಯೇ ಪುಣೆಯ ಸಿನೇಮಾ ಶಾಲೆಯ ವಿದ್ಯಾರ್ಥಿಗಳೂ ಮನೋರಂಜನಾ ಮಾಧ್ಯಮಕ್ಕೆ ಹೋಗುತ್ತಾರೆ. ನುರಿತ, ಸಮಯವಿರುವ, ಕಡಿಮೆ ದುಡ್ಡಿಗೆ ಕೆಲಸ ಮಾಡುವ ತಂತ್ರಜ್ಞರು ಕನಸಲ್ಲೇ ಸಿಗುವದು. ಇದೆಲ್ಲಾ ಕೇವಲ ಐ.ಟಿ. ಉತ್ತೇಜಿತ ಸಂಸ್ಕೃತಿಯ (ಅಂತಹ ಒಂದು ಸಾಮಾಜಿಕ ಘಟಕವಿದ್ದರೆ) ಪರಿಣಾಮ ಎಂದು ನಂಬಲು ಯಾವ ಆಧಾರವೂ ಇಲ್ಲ. ಕಾರವಾರದ ಕಗ್ಗು ಹಳ್ಳಿಗಳಿಗೆ ಹೋಗಿ ನೋಡಿ. ಬೆಂಗಳೂರಿಗೆ ಎಂದೂ ಹೋಗದ ಹಳ್ಳಿಗರು ಬೇರೆಯವರ ಮನೆಗೆ ಹೋಗಿ ಹಿಂದಿಯ ಧಾರವಾಹಿಗಳ ಕನ್ನಡ ಅನುರೂಪವನ್ನು ಶೃದ್ಧೆಯಿಂದ ನೋಡುತ್ತಾರೆ. ಭಾರತದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳ ಬಗ್ಗೆ ನಮಗೆ ಕಳವಳವಾಗುವದು ಸಹಜ. ಆಗಬೇಕು. ಆದರೆ ಅದಕ್ಕೆ ಸರಳವಾದ ಉತ್ತರವಿದೆ ಅಥವಾ ವಿವರಣೆಯಿದೆ ಎಂದು ನಂಬಿದರೆ, ಕಳವಳ ಪಡದೇ ಇರುವದಕ್ಕಿಂತಲೂ ಅಪಾಯಕಾರಿ.

ವಿಷಯಕ್ಕೆ ವಾಪಸಾಗೋಣ. ತಮಗೆ ಬೇಕಾದ ತಂಡವನ್ನು ಒಟ್ಟಿಹಾಕುವದು ಕಷ್ಟವಾಗಿದೆ. ಓಂ ಪುರಿ, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ ಇವರು ಎಳೆಯರಲ್ಲ. ಕೆಲವರು ಒಂದೇ ವಿಚಾರಧಾರೆಗೆ ಮಾರುಹೋದವರು. ಗೋವಿಂದ ನಿಹಲಾನಿಯವರ `ತಮಸ್'ನಲ್ಲಿ ಮಾಡಿದ ಪಾತ್ರವನ್ನು ಓಂ ಪುರಿ ಇವತ್ತು ಮಾಡಲು ಸಾಧ್ಯವೇ? ಅದಕ್ಕೆ ಬೇಕಾದ ದೈಹಿಕ ಪರಿಸ್ಥಿತಿಯಲ್ಲಿ ಇದ್ದಾರೆಯೆ? ಅವರಲ್ಲದಿದ್ದರೆ ತರುಣ ನಟರಲ್ಲಿ ತಮ್ಮ ಜೀವನದ ಒಂದೆರಡು ವರ್ಷಗಳನ್ನು ಅಂತಹ ಒಂದು ಧಾರಾವಾಹಿ ಮಾಡಲು ಪಣವಿಡುವವರು ಹೇಗೆ ಸಿಗಬೇಕು? ಹೀಗಿರುವಾಗ ನಾವು ಯಾವ ರೀತಿಯ ಚಿತ್ರಗಳನ್ನು ನಿರೀಕ್ಷಿಸಬಹುದು? ಬೆನೆಗಲ್ ಅವರು ಏಳು ವರ್ಷಗಳಾ ಹಿಂದೆ ಮಧ್ಯಪ್ರದೇಶದ ಬುಡಕಟ್ಟಿನ ಜಾಗದಲ್ಲಿ ಒಂದು ಚಿತ್ರ ಮಾಡಿದ್ದರು. ರಘುವೀರ್ ಯಾದವ್ ಕೂಡ ಇದ್ದರು ಆ ಚಿತ್ರದಲ್ಲಿ. ಸಾಮಾಜಿಕ ಕಾಳಜಿಯಿದ್ದೂ ಆ ಚಿತ್ರ ವಿಫಲವಾಗಿತ್ತು (ಜನಪ್ರಿಯತೆಯ ದೃಷ್ಟಿಯಿಂದಲ್ಲ) ಎಂಬುದನ್ನು ನೆನಪಿಡೋಣ. ಆ ಚಿತ್ರ ಮಾಡುವಾಗ ಅವರ ಅನುಭವದ ಬಗ್ಗೆ ನಮಗೇನೂ ತಿಳಿದಿಲ್ಲ. ಹಾಗಾಗಿ ಅವರು ಮೊದಲು ಮಾಡಿದ ಚಿತ್ರಗಳನ್ನು ಅವರ ಇಂದಿನ ಪರಿಸ್ಥಿತಿಯಲ್ಲಿ ನಿರೀಕ್ಷಿಸುವದು ಅಸಮ್ಮತ. ಅವರಲ್ಲಿ ಆ ಶಕ್ತಿಯಿಲ್ಲ ಎಂದಲ್ಲ. ಪರಿಸ್ಥಿತಿ ಹಾಗಿದೆ. ಅವರ `ಭಾರತ್ ಏಕ್ ಖೋಜ್'ನ ಶೀರ್ಷಿಕೆಯ ಸಂಗೀತದ ನೆನಪಿನಲ್ಲಿ, ವೇದಗಳ ಉದ್ಘೋಷಗಳನ್ನು ದೂರದರ್ಶನ ಮಾಧ್ಯಮದಲ್ಲಿ ಹಿಂದಿಯಲ್ಲಿ ಅಷ್ಟು ಸಮರ್ಪಕವಾಗಿ ನಮಗೆ ಕೊಟ್ಟಿದ್ದಕ್ಕೆ ಅವರಿಗೆ ಅಭಿನಂದಿಸುತ್ತಾ ಅವರ ಕಾರ್ಯಗಳಲ್ಲಿ ಶುಭ (ಅದು ಇಂಥದೇ ರೂಪದಲ್ಲಿರಲಿ ಎಂದು ಬಯಸದೆ) ಬಯಸೋಣ. ಸಂವೇದನಾಶೀಲರಾಗಲು ಪ್ರಯತ್ನಿಸೋಣ!