ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಪ್ರಾಚಾರ್ಯ ಕಟ್ಟಾ ಮೂರ್ತಿಗಳು

ಹಿಂದಿನ ವಾರ ಪ್ರಾಚಾರ್ಯ ಕಟ್ಟಾ ಮೂರ್ತಿಯವರ ವಿಚಾರಗೋಷ್ಟಿಯಲ್ಲಿರುವ ಅವಕಾಶ ದೊರೆತಿತ್ತು. ಅವರು Operations Researchನಲ್ಲಿ ತಾವು ಮಾಡಿದ ಸಂಶೋಧನಾ ಕೆಲಸವನ್ನು ವಿವರಿಸಿದರು. ಎಪ್ಪತ್ತು ವರ್ಷಗಳ ಪ್ರಾಚಾರ್ಯರು ಅನುಭವೀ ಜೀವಿ. ಅವರು ಮಾತಾಡಿದಾಗ ತಾಂತ್ರಿಕ ವಿಷಯದ ಬಗ್ಗೆ ಜ್ಞಾನ ಪಡೆಯುವುದಲ್ಲದೇ ಜೀವನಕ್ಕೆ ಉಪಯೋಗವಾಗುವ ವಿಷಯಗಳನ್ನು ಕಲಿಯಬಹುದು. ಅವರು ಬೇರೆ ಬೇರೆ ಭಾಷೆಗಳಿಂದ ಉತ್ತಮ ಗಾದೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಎರಡು ನನಗೆ ಅತಿ ಇಷ್ಟವಾದವು. ಅವುಗಳನ್ನೇ ಇಲ್ಲಿ ದಾಖಲಿಸಿದ್ದೇನೆ:
೧. ಚೈನಾದಲ್ಲಿ ಪ್ರಚಲಿತವಿರುವ ಗಾದೆ:
ದೀರ್ಘವಾದ ಯಾತ್ರೆ ಶುರುವಾಗುವದು ಮೊದಲ ಹೆಜ್ಜೆಯಿಂದಲೇ!
೨. ತೆಲುಗು ಭಾಷೆಯ ಗಾದೆ (ಅವರು ತೆಲುಗುನಲ್ಲಿ ಹೇಳಿಯೂ ಹೇಳಿದರು; ತುಂಬಾ ಕಾವ್ಯಾತ್ಮಕವಾಗಿತ್ತು):
ಕತ್ತಲು, ಕತ್ತಲು ಎಂದು ಅದೇನು ಕೊರಗುತ್ತೀಯ, ಒಂದು ದೀಪವನ್ನಾದರೂ ಹಚ್ಚು!
ಕಠಿಣವಾದ ಸಮಸ್ಯೆಗಳನ್ನು ಜಾಣತನದಿಂದ, ಸರಳವಾಗಿ ಬಗೆಹರಿಸುವದು ಹೇಗೆ ಎಂದು ವಿವರಿಸಿದ ಪ್ರಾಚಾರ್ಯರು ಗಣಿತದಿಂದ ಕಲಿತದ್ದನ್ನು ನಿಜಜೀವನಕ್ಕೆ ಉಪಯೋಗಿಸಿದಷ್ಟೇ, ನಿಜಜೀವನದಿಂದ ಕಲಿತದ್ದನ್ನು ಗಣಿತದ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸಿಕೊಟ್ಟಿದ್ದಾರೆ. ಬಹುಆಯಾಮಗಳ ಬುಗ್ಗೆಯಂತಹ ವ್ಯಕ್ತಿ ಇವರು. ಸದ್ಯಕ್ಕೆ ಅಮೇರಿಕೆಯಲ್ಲಿ ತಾವು ಕೊಂಡಿರುವ ಹನ್ನೆರಡು ಎಕರೆ ಜಮೀನಿನಲ್ಲಿ ಪ್ರಾಕೃತಿಕವಾದ ಕಾಡನ್ನು ಬೆಳೆಸುವದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ. ದೇಹದ ಎಲ್ಲಾ ಭಾಗಗಳಿಗೂ ಶುಭವಾಗುವಂತಹ ವ್ಯಾಯಾಮಗಳನ್ನು ನಿರೂಪಿಸಿರುವುದಲ್ಲದೇ, ತಮ್ಮ ವೆಬ್-ಸೈಟ್-ನಲ್ಲಿ ಅವುಗಳ ವೀಡಿಯೋ ಕೂಡ ಇಟ್ಟಿದ್ದಾರೆ ಇಳಿವಯಸ್ಸಿನ ಈ ತರುಣ!

1 Comments:

Blogger Shree said...

ಅಗಸೆಯ ಅಂಗಳದಲ್ಲಿ ಸದ್ದೇ ಇಲ್ಲ ಯಾಕೆ? ಬೇಸಗೆ ಅಲ್ವ, ಮಳೆ ಇಲ್ಲದ್ದಕ್ಕೆ ನೀರಿಲ್ವೇನೋ ಅಲ್ವಾ? ಇಲ್ಲೆಲ್ಲ ಮುಂಗಾರು ಮಳೆ ಬಂದಿದೆ, ನೀರು ಸ್ವಲ್ಪ ಬೇಕಾದ್ರೆ ಕಡ ತಗೊಳ್ಳೀಪ್ಪಾ...!!

ಚೆನ್ನಾಗಿ ಬರೀತೀರ..keep writing, keep going.

2:27 am  

Post a comment

<< Home