ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಕುರೋಸಾವಾರ ಚಿತ್ರಗಳು

ಕುರೋಸಾವರ ಏಳು ಸಮುರಾಯಿಗಳು (seven samurai), ಇಕುರು, ರಹಸ್ಯ ಕೋಟೆ (the hidden fortress), ಆತ್ಮ ರಕ್ಷಕ (yojimbo), ಸಂಜೂರೋ, ರಕ್ತಸಿಂಛಿತ ಸಿಂಹಾಸನ (the throne of blood), ರಾಶೋಮನ್, ಮತ್ತು ಮಾದದೆಯೋ ಚಿತ್ರಗಳನ್ನು ನೋಡಿ ಪಡೆದ ಆನಂದವೇ ಈ ಲೇಖನಕ್ಕೆ ಕಾರಣ. ಇಲ್ಲಿ ಕುರೋಸಾವರ ಚಿತ್ರಗಳ ವಿಮರ್ಶೆಯಿಲ್ಲ. ಅವರ ಚಿತ್ರಗಳನ್ನು ನೋಡಿದ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನವಿದೆ.ಇವುಗಳಲ್ಲಿ ರಹಸ್ಯ ಕೋಟೆ, ಯೊಜಿಂಬೋ, ಮತ್ತು ಸಂಜೂರೊ ಒಂದೇ ಗುಂಪಿನ ಚಿತ್ರಗಳೆನ್ನಬಹುದು. ಇವುಗಳ ಬರುವನ್ನು ಸಾರುತ್ತ ಬಂದಂತಿದೆ, ಏಳು ಸಮುರಾಯಿಗಳು. ಉಳಿದ ಚಿತ್ರಗಳಲ್ಲಿ ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ ಒಂದೇ ಗುಂಪಿನವು. ಇಕುರು ಮತ್ತು ಮಾದದೆಯೋ ಸ್ವತಂತ್ರವಾಗಿ ಮೂಡಿ ಬಂದ ಚಿತ್ರಗಳು. ಇಕುರು ಯುರೋಪಿನ existentialismನಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು. ಜಪಾನಿನ ತಮ್ಮ ಸಮಕಾಲೀನ ಪರಿಸ್ಥಿತಿ ಮತ್ತು ಸಂಸ್ಕೃತಿಯೊಂದಿಗೆ ಅನುಕಂಪ ಬೆಳೆದ ಮೇಲಿನ ಹೇಳಿಕೆ, ಮಾದದೆಯೊ. ಮನುಷ್ಯರ ಅಸ್ತಿತ್ವದ, ನಡುವಳಿಕೆಯ ಹಲವು ಆಯಾಮಗಳ ಬಗ್ಗೆ ಕುರೋಸಾವರಿಗಿರುವ ಕುತೂಹಲವೇ ಈ ಎಲ್ಲ ಚಿತ್ರಗಳನ್ನು ಒಂದುಗೂಡಿಸಿದೆ.

ನಾನು ಮೇಲೆ ಮಾಡಿರುವ ವರ್ಗೀಕರಣವನ್ನು ವಿವರಿಸುವ ಅಗತ್ಯವಿದೆ. ಕುರೋಸಾವರ ಚಿತ್ರಗಳಲ್ಲಿ ನಮ್ಮ ಮತ್ತು ಕುರೋಸಾವರ ಕುತೂಹಲವನ್ನು ಕೆರಳಿಸುವವರು ಸಮುರಾಯಿಗಳು - ಅಂದರೆ ಗುತ್ತಿಗೆಯ ಯೋಧರು (ಇವರನ್ನು ರಾಜರಿಂದ ಹಿಡಿದು ಹಳ್ಳಿಯ ರೈತರು ಕೂಡ ಉಪಯೋಗಿಸಿಕೊಳ್ಳುತ್ತಿದ್ದರು). ಅವರ ಹಾವ ಭಾವಗಳನ್ನು ಕುರೋಸಾವ ಪೂರ್ತಿಯಾಗಿ ಕಲ್ಪಿಸಿಕೊಳ್ಳಬಲ್ಲರು. ಅವರ ಸಾಮಾಜಿಕ ಬದುಕು ಮತ್ತು ಧೋರಣೆಯ ಬಗ್ಗೂ ಕುರೊಸಾವಾರಿಗೆ ಸಹಾನುಭೂತಿಯಿದೆ. ಒಂದು ರೀತಿಯಲ್ಲಿ ಅವರು ಅವರ ಪ್ರೀತಿಪಾತ್ರರು. ಆದರೂ, ಅವರಿಗೆ ಅವರ ಅಂತರಂಗವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಆಗಿಲ್ಲ. ಸಮುರಾಯಿಗಳು ಈ ಆತ್ಮೀಯತೆಯ ಮತ್ತು ಕುತೂಹಲದ ಭವ್ಯ ಮಿಶ್ರಣಗಳಾಗಿ, ಸಾಹಸಮಯ ಪ್ರಸಂಗಗಳಾದ ಯೊಜಿಂಬೊ, ಸಂಜೂರೋ, ಮತ್ತು ಆತ್ಮರಕ್ಷಕಗಳಲ್ಲಿ ಹೊರಹೊಮ್ಮಿದ್ದಾರೆ. ಈ ಮೂರೂ ಚಿತ್ರಗಳಿಗೆ ಪೀಠಿಕೆಯೆಂಬಂತೆ ಮೂಡಿಬಂದಿರುವದು, ಏಳು ಸಮುರಾಯಿಗಳು. ಇದು ಐತಿಹಾಸಿಕ, ಜಾನಪದ ಕತೆ ಹೇಳುವಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಮಾನವರು ತಮ್ಮ ಸಹಜ ನಡುವಳಿಕೆಯ ಹೊರತಾಗಿ, ಪ್ರಚೋದನೆಯ ಅಡಿಯಲ್ಲಿ ನಾವು ಗುರುತಿಸಲೇ ಸಾಧ್ಯವಾಗದಂತವರಾಗಿ ಕಾಣಬರುತ್ತಾರೆ. ಮಾನವರ ಈ ಅಸ್ತಿತ್ವದ ಬಗ್ಗೆ ನಮ್ಮ ಅರಿವಿಕೆಯನ್ನು ಹೆಚ್ಚಿಸುವ ಚಿತ್ರಗಳೆಂದರೆ, ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ. ಇಕುರು, ಪಾಶ್ಚಿಮಾತ್ಯ ಸಾಹಿತ್ಯ ಮತ್ತು ನಾಟಕಗಳಿಂದ ಪ್ರಭಾವಿತವಾದದ್ದು. ಅನೇಕ ಕಾರಣಗಳಿಂದ ಈ ಚಿತ್ರ ನನಗೆ ದೂರವಾಗೇ ಉಳಿಯಿತು. ಮಾದದೆಯೋ ಕುರೋಸಾವಾರ ಅರಳು-ಮರಳು ಎಂಬಂತಿದೆ.

ಕುರೊಸಾವರ ನೈಪುಣ್ಯತೆ ಚಲನ ಚಿತ್ರ ಮಾಧ್ಯಮದ ಎಲ್ಲ ಅಂಶಗಳನ್ನೂ ಒಳಗೊಂದಿದೆ. ತಾಂತ್ರಿಕತೆ, ಕಥೆಯ ನಿರೂಪಣೆ ಮತ್ತು ಪಾತ್ರ ಸೄಷ್ಟಿ. ವೈಯಕ್ತಿಕವಾಗಿ ನನ್ನನ್ನು ಆಕರ್ಷಿಸುವದು ನಿರೂಪಣ ಕೌಶಲ್ಯ ಮತ್ತು ಪಾತ್ರ ಸೃಷ್ಟಿ. ಅವರ ಮೆಚ್ಚುಗೆಯ ಸಂಜೂರೊ ನಮಗೂ ಚಿರಪರಿಚಿತನಾದರೆ ಆಶ್ಚರ್ಯವೇನಿಲ್ಲ. ಇದರಲ್ಲಿ ಅವರ ನಟರ ತಂಡದ ಯೋಗದಾನ ಅಷ್ಟೇ ಮಹತ್ವದ್ದು. ಹಾಗೆಂದು, ಅವರ ತಾಂತ್ರಿಕತೆಯ ಬಗ್ಗೆ ನಾವು ನಿರ್ಲಿಪ್ತರಾಗಿರಲು ಸಾಧ್ಯವಿಲ್ಲ. Dedicated to the memory of Kurosava ಎಂದು ಮಾಡಿರುವ ಚಿತ್ರಗಳನ್ನು ನೋಡಿದರೆ, ಇವರು ಕುರೋಸಾವಾನಿಂದ ಒಂದಿನಿತಾದರೂ ಪ್ರಭಾವಿತರಾಗಿದ್ದರೇ ಎಂಬ ಪ್ರಶ್ನೆಯೇಳುತ್ತದೆ (ಪ್ರಮುಖವಾಗಿ ಹಿಂದಿಯ "ಚೈನಾ ಗೇಟ್" ಎಂಬ ಚಿತ್ರವನ್ನು ಗಮನಿಸಿ..ಬೇಕಾದಷ್ಟು ಇಂಗ್ಲಿಷ್ ಚಿತ್ರಗಳೂ ಇವೆ). ನಂತರ ಹೊಳೆಯುವದೇನೆಂದರೆ ಈ ನಿರ್ದೇಶಕರುಗಳು ಕುರೋಸಾವರ ತಾಂತ್ರಿಕತೆಯಿಂದ ಮಾತ್ರ ಪ್ರಭಾವಿತರಾಗಿದ್ದಾರೆ ಎಂಬುದು.

ಸಾಹಿತ್ಯ ಹಾಗೂ ನಾಟಕಗಳಂತೆ, ಚಲನಚಿತ್ರ ಮಾಧ್ಯಮಕ್ಕೂ ತನ್ನದೇ ಆದ ವಿಶೇಷ ಸಾಧ್ಯತೆಗಳಿವೆ. ಈ ಸಾಧ್ಯತೆಗಳನ್ನು ಸಾಕ್ಷಾತ್ಕಾರಗೊಳಿಸುವವನು ನಿರ್ದೇಶಕ. ಗುರಿ ಸಾಧಿಸಲು ತಂತ್ರಜ್ಞರ ಮತ್ತು ನಟರ ತಂಡವನ್ನು ಉಪಯೋಗಿಸುತ್ತಾನೆ. ಆದರೆ, ಅವರೆಲ್ಲರನ್ನೂ ಉಪಯೋಗಿಸಿಕೊಂಡು ತನ್ನ ಕಲ್ಪನೆಗೆ ರೂಪ ಕೊಡುವದರಲ್ಲೇ ಇರುವದು ಅವನ ತಾಂತ್ರಿಕತೆ. ಇವತ್ತು ಕುಶಲತೆ ಎಂದ ತಕ್ಷಣ ತಂತ್ರಜ್ಞಾನದ ಸಮರ್ಥ ಬಳಕೆ ಎಂಬ ಧೋರಣೆಯಿದೆ. ಕುರೊಸಾವರ ಕುಶಲತೆ ಇದನ್ನು ಮೇರಿದ್ದು. ಆದರೂ, ಮೊದಲು ತಂತ್ರಜ್ನಾನದ ಅವಶ್ಯಕತೆಯಿರುವ ಕೆಮೆರಾ, ಶಬ್ದ ಗ್ರಹಣ, ಹಿನ್ನೆಲೆ ಸಂಗೀತಗಳನ್ನು ಗಮನಿಸಿ ಮುಂದುವರಿಯೋಣ.

ಕೆಮರ ಕೆಲಸಕ್ಕೆ ಏಳು ಸಮುರಾಯಿ ಚಿತ್ರವನ್ನೇ ಉದಾಹರಣೆಯನ್ನಾಗಿ ಬಳಸೋಣ. ಈ ಚಿತ್ರದ ಕೆಮರಾ ಕೆಲಸ ಮತ್ತು ಸಿನೆಮಾಟೋಗ್ರಾಫೀ ಅದ್ಭುತವಾಗಿದೆ. ಚಿತ್ರದಲ್ಲಿ ಮೂರು ಕೆಮರಾಗಳು ಕೆಲಸ ವಹಿಸಿದಂತಿದೆ. ಒಂದು ಕೆಮರಾಕ್ಕೆ ಪಾತ್ರಗಳ ಬಗ್ಗೆ ವಿಶೇಷ ಒಲವು. ಯಾವಾಗಲೂ ಪಾತ್ರಗಳ ಸುತ್ತಮುತ್ತಲೇ ಇದ್ದು, ಅವರ ಹಾವಭಾಗಳನ್ನು ಕಲಿಯುತ್ತಾ ತನ್ನೊಂದಿಗೆ ನಮಗೂ ಪತ್ರಗಳನ್ನು ಪರಿಚಯಿಸುತ್ತದೆ. ಅದರಲ್ಲೂ ರೈತ ಕುಲದಿಂದ ಬಂದು ವಿದೂಷಕನಂತೆ ವರ್ತಿಸುವ ಸಮುರಾಯಿಯ ಪಾತ್ರ, ಎಲ್ಲಿ ಹಸಿವೆಯಿಂದ ನರಳಿ ಪ್ರಾಣ ಬಿಡುವೆನೇನೋ ಎಂದು ಹೆದರಿ ಯಾವಾಗಲು ಮುಖ ಕಪ್ಪಿಟ್ಟಿರುವ ರೈತನ ಪಾತ್ರಗಳು ಮಾತಾಡದಿದ್ದರೂ ನಮಗೆ ಕೆಮರಾವೇ ಪರಿಚಿಯಸಿ ಕೊಡಬಲ್ಲುದು. ಈ ತಂತ್ರ ಸ್ವಾಭಾವಿಕ ಎಂದು ನಮಗನಿಸಬಹುದು. ಸ್ವಾಭಾವಿಕವಾದದ್ದನ್ನು ಒಪ್ಪಿ, ಶೄದ್ಢೆಯಿಂದ ಸಮರ್ಪಕವಾಗಿ ನಿರೂಪಿಸುವದು ಹಿರಿಮೆಯ ಸಂಕೇತ. ಇತ್ತೀಚಿನ ಏಷ್ಟೋ ಚಿತ್ರಗಳಲ್ಲಿ ಮುಖ್ಯ ಭೂಮಿಕೆಯವರ ಕಣ್ಣೊಳಗೆ ಕೂಡ ಓಡಾಡಿದ ಕೆಮರಾ ವ್ಯಕ್ತಿಯನ್ನು ನಮಗೆ ಪರಿಚಯಿಸುವಲ್ಲಿ ವಿಫಲವಾದ ಉದಾಹರಣೆಗಳು ನೆನಪಿಗೆ ಬರುತ್ತವೆ. ಇನ್ನೊಂದು ಕೆಮರಾ ಪಾತ್ರಗಳ ಬಗ್ಗೆ ನಿರ್ಲಿಪ್ತ. ಅದರ ಆಸಕ್ತಿ ಇರುವದೆಲ್ಲ ಕಾಲ ಚಿತ್ರಣದ ಬಗ್ಗೆ. ಆ ಕಾಲದ ಬಗ್ಗೆ ನಮ್ಮಲ್ಲಿ ಒಂದು ಊಹಾಲೋಕವನ್ನು ಸೄಷ್ಟಿಸುವ ಬಗ್ಗೆ. ಈ ಕೆಮರಾವನ್ನು ಕುರೋಸಾವ ವಿರಳವಾಗಿ ಉಪಯೋಗಿಸುತ್ತಾರೆ. ಇಲ್ಲವಾದರೆ Documentary ಆಗುವ ಅಪಾಯವಿದೆ. ಸಮುರಾಯಿಗಳನ್ನು ಹುಡುಕಲು ಹೋದಾಗ ಕಂಡುಬರುವ ಪೇಟೆಯ ಚಿತ್ರಣ, ಹಳ್ಳಿಯ ಹಿರಿಯನನ್ನು ಸಮಾಲೋಚಿಸಲು ಹೊರಟ ಹಳ್ಳಿಗರ ಚಿತ್ರಣ ಮುಖ್ಯ ಉದಾಹರಣೆಗಳು. ಮಧ್ಯಕಾಲೀನ ಜಪಾನಿನ ಹಳ್ಳಿಗಳ ಜೀವನದ ಬಗ್ಗೆ ಪ್ರತಿ ಪ್ರೇಕ್ಷಕನಲ್ಲೂ ಒಂದು ಲೋಕ ಉದ್ಭವಗೊಳ್ಳುತ್ತದೆ. ಒಮ್ಮೆ ಹಿಂದಿಯ ಚೈನಾ ಗೇಟ್ ಚಿತ್ರವನ್ನು ಜ್ಞಾಪಿಸಿಕೊಳ್ಳಿ. ಅಲ್ಲಿಯ ಹಳ್ಳಿ ಭಾರತದ ಯಾವ ಕಾಲದ ಹಳ್ಳಿಯಂತೆ ಕಾಣುತ್ತದೆ? ಮೂರನೆಯ ಕೆಮರಾ ಪಾತ್ರಗಳ ಸಾಹಸ ಮತ್ತು ನಿಸರ್ಗದ ಸೌಂದರ್ಯ ಇವುಗಳನ್ನು ಹಿಡಿದಿಡುತ್ತದೆ. ದೂರದ ಶಾಟ್-ನಿಂದ ಹತ್ತಿರದ ಶಾಟ್-ಗೂ, ಹತ್ತಿರದ ಶಾಟ್-ನಿಂದ ದೂರದ ಶಾಟ್-ಗೂ ತೇಲಾಡುತ್ತ ಮೋಜನ್ನೇ ಕಟ್ಟುತ್ತದೆ. ವಸಂತದಲ್ಲಿ ಅರಳಿರುವ ಹೂವುಗಳನ್ನು ಚಿತ್ರದ ಮೊದಲಿನಿಂದ ಹಿಡಿದು ಕೊನೆಯವರೆಗೂ ಗುರುತಿಸಿ, ಹಿಂಬಾಲಿಸುತ್ತದೆ. ಜಪಾನಿನ ಗುಡ್ಡ ಕಣಿವೆಗಳ ಮಧ್ಯದಲ್ಲಿ ಸುಳಿದ ಗಾಳಿಗೆ ನಲಿದಾಡುವ ಹುಲ್ಲು, ಗುಡ್ಡಗಳ ಮಧ್ಯದಲ್ಲೇ ನೇರವಾಗಿ ಏರುವ ಕಾಲ್ದಾರಿಗಳು, ಕುದುರೆಗಳ ಓಟ, ಸಮುರಾಯಿಗಳ ಖಡ್ಗ ವರಸೆ, ಒಂದೇ, ಎರಡೇ!


ಎಲ್ಲೆಲ್ಲೂ ಅರಳಿರುವ ಹೂಗಳು!

ಕುರೋಸಾವ ತಮ್ಮ ಚಿತ್ರಗಳು ಪರದೆಯ ಮುಂದೆ ಕುಳಿತಿರುವರಿಗೆಲ್ಲಾ (ಯಾವುದೇ ದಿಕ್ಕಿನಲ್ಲಿ ಕುಳಿತಿದ್ದರೂ) ಸಮಾನವಾದ ಅನುಭವ ನೀಡಲು ವಿಶೇಷವಾದ ಲೆನ್ಸ್-ಗಳನ್ನು ಉಪಯೋಗಿಸುತ್ತಿದ್ದರು. ತಂತ್ರಜ್ಞಾನದ ಬಳಕೆಯಲ್ಲಿ ಸವಾಲೊಡ್ಡುವ ಶಬ್ದ ಗ್ರಹಣ ಮತ್ತು ಹಿನ್ನೆಲೆ ಸಂಗೀತಗಳ ವಿಷಯದಲ್ಲಂತೂ ಕುರೋಸಾವ ನುರಿತವರು. leitmotif ನ ತಂತ್ರವನ್ನು ಸಿನೇಮಾಕ್ಕೆ ಕೊಟ್ಟವರೇ ಅವರಿರಬೇಕು. ಅದನ್ನೇ ವಿಪರೀತವಾಗಿ ಬಳಸಿ ನಿರ್ವಿಕಾರಗೊಳಿಸಲಾಗಿದೆ ಬಾಲಿವುಡ್ ಮತ್ತು ಹಾಲಿವುಡ್-ಗಳಲ್ಲಿ. ಕುರೋಸಾವ leitmotif ನ್ನು ಚೆನ್ನಾಗಿ ಬಳಸುತ್ತಾರೆ. ಇದರ ಉತ್ತಮ ನಿದರ್ಶನಕ್ಕೆ ನಾವು ರಹಸ್ಯದ ಕೋಟೆ ಅಥವಾ ಯೊಜಿಂಬೋವನ್ನು ಗಮನಿಸಬೇಕು. ಹಿನ್ನೆಲೆ ಸಂಗೀತ ಮತ್ತು ಪರದೆಯ ಮುಂದಿನ ಚಿತ್ರಗಳ ಒಡನಾಟ ಮತ್ತು ಅವುಗಳ ಮನೋಜ್ಞ ಸಂಗಮವನ್ನು ಸಾಧಿಸುವದರ ಬಗ್ಗೆ ಕುರೋಸಾವರ ಯೋಚನೆಗಳು ಅವರ ಲೇಖನದಲ್ಲಿ ದರ್ಜಾಗಿವೆ. ಕಥೆಯನ್ನು ಹೇಳುವ ರೀತಿಯೂ ತಾಂತ್ರಿಕತೆಯ ಅಂಶ. ಅದನ್ನು ಪ್ರತ್ಯೇಕವಾಗಿ ವಿಮರ್ಶಿಸೋಣ. ಇಂದಿಗೂ ಸಮಯಾನುಸಾರ ನೇರವಾಗಿರದೆ, ಹಿಂದಿಂದ ಮುಂದಕ್ಕೆ, ಮುಂದಿಂದ ಪಕ್ಕಕ್ಕೆ, ಅಲ್ಲಿಂದ ಹಿಂದಕ್ಕೆ ಹೀಗೆ ಕಾಲಕ್ರಮವಿಲ್ಲದೆ ಕತೆ ಹೇಳುವ ತಂತ್ರದ ಮಾದರಿಯಾಗಿದೆ. ಕುರೋಸಾವರ ನೆನಪಿಗೆ ಅರ್ಪಿಸಿದ ಚಿತ್ರಗಳೆಲ್ಲ ಅನುಕರಿಸುವದು ಈ ತಾಂತ್ರಿಕ ಕುಶಲತೆಯನ್ನೇ (ಇಂದಿನ ತಂತ್ರಜ್ಞಾನದ ಸಹಾಯದಿಂದ ಅವರನ್ನೂ ಮೀರಿಸುತ್ತವೆಯೇನೋ!). ಆದರೆ, ಅವು ನೀರಸವಾಗುವುದೇಕೆಂದರೆ, ಕುರೋಸಾವರ ಚಿತ್ರಗಳಲ್ಲಿರುವ ಉಳಿದ ಅಂಶಗಳನ್ನು ಕಡೆಗಣಿಸುವಲ್ಲಿ. ಕುರೊಸಾವರ ಚಿತ್ರಗಳಲ್ಲಿ ತಾಂತ್ರಿಕತೆಯ ಹೊರತಾಗಿ ಅನೇಕ ರಸಗಳಿವೆ. ಅವೇ ನನ್ನನ್ನು ಇಷ್ಟೊಂದು ಚಿತ್ರಗಳುದ್ದ ಹಿಡಿದಿಟ್ಟಿದ್ದು.

ಕುರೋಸಾವ ಕುಶಲಿಗ ಎಂಬುದನ್ನು ಸಿದ್ಧಪಡಿಸುವ ಅವಶ್ಯಕತೆ ಇಲ್ಲ. ಅದರೆ, ಅವರ ಚಿತ್ರಗಳನ್ನು ನೋಡಿದ ಮೇಲೆ ನಮ್ಮೊಡನೆಯೇ ಉಳಿದು, ನಾವು ಪದೇ ಪದೇ ಮೆಲಕು ಹಾಕುವ ಅಂಶಗಳು ಯಾವವು? ಈ ಕುರಿತು ವೈಯಕ್ತಿಕ ಅನುಭವ ಮತ್ತು ಗೆಳೆಯರ ಅನುಭವಗಳನ್ನು ಆಧಾರವಾಗಿ ಇಟ್ಟುಕೊಂಡು ಹೇಳುವದಾದರೆ, ಅವು ಎರಡು: ಮೊದಲನೆಯದಾಗಿ ಪಾತ್ರ ಬೆಳೆವಣಿಗೆ ಮತ್ತು ಎರಡನೆಯದಾಗಿ ಮನುಕುಲದ ಬಗ್ಗೆ ಕುರೋಸಾವರ ಸೂಕ್ಷ್ಮವಾದ ಅರಿವು (ಇದು ತೋರಿಕೆಯದ್ದಲ್ಲ, ಸಹಜವಾಗಿ ಅವರಿಗೆ ವ್ಯಕ್ತಿಗತವಾದದ್ದು). ಮೊದಲು ಪಾತ್ರಗಳ ರಚನೆಯನ್ನು ಗಮನಿಸೋಣ. ಕುರೋಸಾವರ ಬಗ್ಗೆ ಯೋಚಿಸಿದಾಗಲೆಲ್ಲಾ ನೆನಪಾಗುವದು ಅವರ ಚಿತ್ರಗಳಲ್ಲಿನ ಮಿಫುನೆಯ ದಶಾವತಾರವೆ! ಹಲವಾರು ಚಿತ್ರಗಳಲ್ಲಿ ಅದ್ಭುತವಾದ ಪಾತ್ರಗಳನ್ನು ಬೆಳೆಸಿದ್ದಾರೆ, ಈ ಇಬ್ಬರು. ರಹಸ್ಯದ ಕೋಟೆಯಲ್ಲಂತೂ ಮಾತುಕತೆಗಳ ಅವಶ್ಯಕತೆಯಿಲ್ಲದೆಯೇ ಮಿಫುನೆಯ ಪಾತ್ರ ಜೀವಂತವಾಗುತ್ತದೆ.

ಮೇರುನಟ ಮಿಫುನೆ


ಕುರೊಸಾವಾಗೆ ಕಥೆಯಲ್ಲಿ ಹಾಸ್ಯವಿರಬೇಕು. ಹಾಗೆಂದು ಲೇವಡಿಯ ಹಾಸ್ಯವಾಗಲಿ ಅಥವ ಹಾಸ್ಯಕ್ಕೆಂದೇ ನಿರ್ಮಿಸಿದ ಪಾತ್ರಗಳಿಂದಲ್ಲ. ಹಾಸ್ಯ, ಪಾತ್ರ ಬೆಳೆವಣಿಗೆಯ ಸಾಧನವಾಗಿದೆ. ಯೊಜಿಂಬೊದಲ್ಲಿ ಒಬ್ಬ ಖಳನಾಯಕ ಪಟ್ಟಣಕ್ಕೆ ಹೊಸತಾದ ಪಿಸ್ತೂಲನ್ನು ತಂದು, ಉಳಿದವರ ಮೇಲೆ ಮೇಲುಗೈ ಸಾಧಿಸುತ್ತಾನೆ. ಆದರೆ, ಪ್ರತಿಸಲ ಅವನು ಪಿಸ್ತೂಲನ್ನು ತೆಗೆದಾಗಲೂ ನಾವು ನಗುತ್ತೇವೆ. ಅವನ ಪಿಸ್ತೂಲು ಅವನಿಗೆ ಗಂಭೀರತೆಯನ್ನು ಕೊಡದೆ ಹಾಸ್ಯಮಯವಾದ ಕೋಡನ್ನು ಕೊಡುತ್ತದೆ! ಏಳು ಸಮುರಾಯಿಗಳ ನಾಯಕನ ನೆನಪಾಗುತ್ತದೆ. ಯಾವಾಗಲೂ ಮುಗುಳ್ನಗುತ್ತಲೇ ತನ್ನ ತಲೆಯನ್ನು ನೇವರಿಸಿಕೊಳ್ಳುತ್ತಾನೆ. ಅವನಿಗೆ ಯಾವದು ಮೋಜು ಎಂದು ಅನಿಸುತ್ತಿದೆಯೋ ಅದು ನಮಗೂ ಹಾಗೇ ಕಾಣುತ್ತದೆ. ರಹಸ್ಯದ ಕೋಟೆಯಲ್ಲಿ ಸಾಹಸದ ಜೊತೆಗೆ ಕುರೋಸಾವನನ್ನು ಸೋಜಿಗಗೊಳಿಸುವ ಪಾತ್ರಗಳೆಂದರೆ, ಇಬ್ಬರು ರೈತರು. ಅವರಿಗೆ ತಾವಿಬ್ಬರೂ "ಪಾಪದವರು" ಎಂದು ಅನಿಸಿದರೂ, ಅವರ ಕುಂದುಗಳನ್ನು ಕುರೋಸಾವ ಚೆನ್ನಾಗಿ ಬಲ್ಲರು. ಸ್ವಾರ್ಥ, ಆಸೆಬುರುಕುತನ, ಎಲ್ಲ ನೀತಿ ನಿಯಮಗಳನ್ನು ಬದಿಗೊಡ್ಡಿ ಸಮಯ ಸಾಧನೆ ಇವೆಲ್ಲವೂ ಅವರಲ್ಲಿವೆ. ಚಿತ್ರದ ಹಲುವ ಹಂತಗಳಲ್ಲಿ ಅವರ ನಡುವಳಿಕೆ ತುಚ್ಛವಾಗಿಯೂ, ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ, ಕೆಲವೊಮ್ಮೆ ದಯನೀಯವಾಗಿಯೂ ಕಾಣುತ್ತದೆ. ಮಲಗಿರುವ ರಾಜಕುಮಾರಿಯನ್ನು ನೋಡಿ ಚಪ್ಪರಿಸುತ್ತ ಒಬ್ಬ ರೈತ ಇನ್ನೊಬ್ಬನಿಗೆ, ತನ್ನ ಕೈಯಲ್ಲಿರುವ ಎರಡು ಕಡ್ಡಿಗಳನ್ನು ತೋರಿಸುತ್ತಾ, "ನೀನು ಒಂದನ್ನು ಆರಿಸು; ಯಾರ ಕೈಯಲ್ಲಿ ಚಿಕ್ಕ ಕಡ್ಡಿ ಇರುತ್ತದೋ, ಅವನು ಸ್ವಲ್ಪಕಾಲ ಮಾಯವಾಗಬೇಕು" ಎನ್ನುತ್ತಾನೆ. ಇಬ್ಬರೂ ಒಪ್ಪುತ್ತಾರೆ. ಆದರೆ ಪ್ರೇಕ್ಷಕರಾದ ನಮಗೆ ಅವರ ಈ ಕುತಂತ್ರ ಹಾಸ್ಯಾಸ್ಪದವಾಗಿ ಕಾಣುತ್ತದೆ. ನಗುತ್ತೇವೆ. ನಗುವಿನ ನಂತರವೇ ಚಿಂತನೆ ಎಂದು ಕುರೋಸಾವ ಅರಿತಂತಿದೆ. ನಿಜ ಹೇಳಬೇಕೆಂದರೆ, ಅವರ ಚಿತ್ರಗಳಲ್ಲಿ ಮಾನವ ಪೄವೄತ್ತಿ ನಿರಾಶಾದಾಯಕವಾಗಿಯೂ, ಚಿಂತಾತ್ಮಕವಾಗಿಯೂ ಮೂಡಿಬಂದಿರುವದು ನಿಜ. ಮಾನವ ಅಸ್ತಿತ್ವದ ಶೋಚನೀಯ, ಭಯಾನಕ ಮಜಲುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಮಂಡಿಸುವದಾಗಲೀ ಅಥವಾ ಸಾಂಕೇತಿಕವಾಗಿ ಸೂಚಿಸುವದಾಗಲಿ ಅವರ ಉದ್ದೇಶವಲ್ಲ. ಹಾಗೆ ಮಾಡಿದಾಗ, ನಾವು ಸ್ವಾಭಾವಿಕವಾಗಿಯೇ ಅದಕ್ಕೆ ಸ್ಪಂದಿಸುತ್ತೇವೆ. ಆ ಸ್ಪಂದನೆ, "ನಾವು ಈ ದುರಂತಕ್ಕೆ ಸ್ಪಂದಿಸಿದೆವು" ಎಂಬ ಹುಸಿ ನೆಮ್ಮದಿಯನ್ನು ಕೊಡುತ್ತದೆ. ಉದಾಹರಣಿಗೆ, "ನನ್ನ ಒಲುಮೆಯ ಹಿರೋಶಿಮ" ಎಂಬ ಚಿತ್ರವನ್ನು ತೆಗೆದುಕೊಳ್ಳೋಣ. ಬಹಳ ಸುಲಭವಾಗಿ ಇಷ್ಟವಾಗುವ ನಿರೂಪಣೆ ಅದರಲ್ಲಿಲ್ಲ. ಆದರೂ ಆ ಚಿತ್ರವನ್ನು ಮೆಚ್ಚುವವರ ಸಂಖ್ಯೆ ಬಹಳ. ಗಂಭೀರವಾದ ವಿಷಯ ಮತ್ತು ಬಳಸಿರುವ ತಾಂತ್ರಿಕತೆ ಬೇಗ ಮನಸ್ಸಿಗೆ ನಾಟುತ್ತದೆ. ಮಾನವಕುಲದ ಒಂದು ದುರಂತಕ್ಕೆ ನಾವು ಸ್ಪಂದಿಸಿದ ಅನುಭವ ಸಿಗುತ್ತದೆ. "ಎಲ್ಲರೂ ನೊಡಲೇಬೇಕಾದ, ನೋಡಿ ಕಲಿಯಲೇ ಬೇಕಾದ ಚಿತ್ರ" ಎಂದು ಹೇಳುತ್ತೇವೆ. ಅದಾದ ಮೇಲೆ ಅದರ ಬಗ್ಗೆ ಎಷ್ಟು ಯೋಚಿಸುತ್ತೇವೆ ಎಂಬುದು ಎಲ್ಲರ ಊಹೆಗೆ ಬಿಟ್ಟದ್ದು. ಆದರೆ, ಕುರೋಸಾವಾ ಇದರ ವಿರುದ್ಧವಾದ ತಂತ್ರವನ್ನು ಬಳಸುತ್ತಾರೆ. ಅವರು ಮಾನವರ ವಿಕಾರ ಪರಿಸ್ಥಿತಿಯ ಬಗ್ಗೆ ಮೊದಲು ನಮ್ಮನ್ನು ನಗಿಸುತ್ತಾರೆ. ನಗು ನಿಂತ ಮೇಲೆ ಬರುವ ಯೋಚನೆಗಳು ಪ್ರೇಕ್ಷಕರ ಸ್ವಂತದ್ದಾಗಿದ್ದು, ಹೆಚ್ಚಿನ ಪರಿಣಾಮ ಬೀಳಬಲ್ಲದು ಎಂಬುದು ಅವರ ಸಿದ್ಧಾಂತ ಎಂದು ಅನಿಸುತ್ತದೆ.

ಸಾಹಿತ್ಯ ಹಾಗೂ ನಾಟಕಗಳನ್ನು ಚಲನಚಿತ್ರ ಮಾಧ್ಯಮಕ್ಕೆ ಅಳವಡಿಕೊಳ್ಳುವಲ್ಲೂ ಕುರೋಸಾವ ನಿಸ್ಸೀಮ. ನಾಟಕದ ವಸ್ತುಗಳನ್ನುಳ್ಳ ಅವರ ಕೆಲವು ಚಿತ್ರಗಳು ಅದೆಷ್ಟು ಸಹಜವಾಗಿ ಬೆಳೆದುಬಂದಿವೆ. ಉದಾಹರಣೆಗಳೆಂದರೆ, ಯೊಜಿಂಬೊ ಮತ್ತು ರಕ್ತದ ಸಿಂಹಾಸನ. ರಕ್ತದ ಸಿಂಹಾಸನವಂತೂ shakespeareನ macbeth ನಾಟಕದಿಂದಲೇ ಪ್ರಭಾವಗೊಂಡದ್ದು. ಎರಡೂ ಉತ್ತಮ ಚಿತ್ರಗಳಾಗಿವೆ. ನಾಟಕಕ್ಕೆ ವಿಶೇಷವಾದ ಹಾವ ಭಾವಗಳಿವೆ. ನಾಟಕದ ವಸ್ತು ಅಂತಹ ಹಾವ ಭಾವಗಳಿಗೆ ಪೂರಕವಾಗಿರಬೇಕು. ಆದರೆ, ಚಲನಚಿತ್ರದ ಹಾವ ಭಾವಗಳೇ ಬೇರೆ. ಚಲನಚಿತ್ರದಲ್ಲಿ ಬೇರೆ ಬೇರೆ ದೂರದ ಶಾಟಗಳನ್ನು ಬಳಸಬಹುದು. ನಾಟಕಕ್ಕೆ ಈ ಸೌಲಭ್ಯವಿಲ್ಲ. ಹೀಗಾಗಿ ಮೊದಲ ಪಂಕ್ತಿಯಲ್ಲಿರುವವನಿಗೂ ಕೊನೆಯ ಪಂಕ್ತಿಯಲ್ಲಿರುವವನಿಗೂ ಒಂದೇ ಅನುಭವ ನೀಡುವ ಸವಾಲಿದೆ. ಈ ಸವಾಲಿಗೆ ಸ್ಪಂದಿಸಿಯೇ ನಾಟಕವನ್ನು ಬರೆಯಬೇಕು. ಹಾಗೆ ಬರೆದ ನಾಟಕದ ವಸ್ತುವನ್ನು ಚಲನಚಿತ್ರಕ್ಕೆ ಅಳವಡಿಸಿಕೊಳ್ಳುವದು ಕಷ್ಟ. ಹಿಂದಿಯ ಮಕ್ಬೂಲ ನೋಡಿದರೆ ಹೆಜ್ಜೆ ತಪ್ಪುವದು ಎಷ್ಟು ಸಸಾರ ಎಂದು ತಿಳಿಯುತ್ತದೆ. ಅಷ್ಟೇ ಏಕೆ, ಪೊಲಾನ್ಸ್ಕಿಯಂತ ನುರಿತ ನಿರ್ದೇಶಕರು ಇಂತಹ ಪ್ರಯತ್ನದಲ್ಲಿ ಸೋತಿದ್ದಾರೆ. ಆದರೆ, ಕುರೋಸಾವ, ನಾಟಕದ ಹಾವ ಭಾವಗಳನ್ನು ತ್ಯಜಿಸದೆ ಚಿತ್ರವನ್ನು ಕಟ್ಟುತ್ತಾರೆ. ರಕ್ತದ ಸಿಂಹಾಸನದ ಸೆಟ್ಟುಗಳು, ಕೆಮೆರಾ ಇರುವಾ ಜಾಗ ಎಲ್ಲವೂ ನಾಟಕೀಕರಣಕ್ಕೆ ಪೂರಕವಾಗಿವೆ. ಉನ್ಮಾದಿಂದ ಅಭಿನಯಿಸಲು ಸ್ವಾತಂತ್ರ್ಯವಿದೆ. ಯೊಜಿಂಬೊ ಚಿತ್ರದಲ್ಲಿ ಪಟ್ಟಣದ ನಿರೀಕ್ಷಕನ ಹಾವ ಭಾವಗಳನ್ನು ಗಮನಿಸಿ. ಥೇಟ್ ನಾಟಕದ್ದು. ಮೇಲಿನ ಅಧಿಕಾರಿ ವಿಚಾರಣೆಗೆಂದು ಬಂದಾಗ, ನಿರೀಕ್ಷಕನ ಮನೆಯಲ್ಲಿ ಖಳನಾಯಕರು ಏರ್ಪಡಿಸುವ ಸತ್ಕಾರದ ದೄಶ್ಯವಿದೆ. ಇದನ್ನು ಕುರೋಸಾವ ಚಿತ್ರಿಸಿರುವ ರೀತಿ ಗಮನೀಯವಾದದ್ದು. ಬೀದಿಯ ಎದುರಿನ ಖಾನಾವಳಿಯ ಕಿಟಕಿಯ ಗಳಿಗಳ ನಡುವೆಯಿಂದ ನಾಯಕ ಮತ್ತು ಖಾನಾವಳಿಯ ಮಾಲಿಕ ಸತ್ಕಾರವನ್ನು ಗಮನಿಸುತ್ತಾರೆ. ಕೆಮೆರಾ ಇರುವದೂ ಇಲ್ಲೇ! ನಾಯಕ ನೋಡುವ ದೃಶ್ಯವನ್ನೇ ನಾವೂ ನೋಡುತ್ತೇವೆ (ಕೆಳಗಿನ ಒಂದು ಚಿತ್ರದಲ್ಲಿ ಆ ಕಿಟಕಿಯ ಗಳಿಗಳನ್ನು ಕಾಣಬಹುದು). ಪಟ್ಟಣದ ನಿರೀಕ್ಷಕನ ಮನೆಯ ಕೋಣೆ ನಾಟಕದ ಅಂಕಣದಂತೆಯೇ ಇದೆ. ಜಿಗಿಯುತ್ತ, ಚಿಮ್ಮುತ್ತ, ಸೇವೆಯ ಮುಗುಳ್ನಗೆಯೊಂದಿಗೆ ಸತ್ಕರಿಸುತ್ತಿರುವ ನಿರೀಕ್ಷಕ, ಖಾದ್ಯ ಮತ್ತು ಪಾನೀಯಗಳನ್ನು ಸರಬರಾಜು ಮಾಡುತ್ತಿತುವವರು, ಅಧಿಕಾರಿಯ ಮನೋರಂಜನೆಗೆಂದು ಬಂದ ಸೂಳೆಯರು, ಎಲ್ಲರ ಹಾವಭಾವಗಳೂ ನಾಟಕದ್ದೆ. ನಿರೂಪಣೆಯ ಸರಪಳಿ ಕಡಿಯದಂತೆ ಸಹಜವಾಗಿ ಇದನ್ನು ಸಾಧಿಸಿದ್ದಾರೆ. ಹಾಗೆಯೇ ರಾಶೋಮನ್ ಚಿತ್ರದಲ್ಲಿ ಎರಡು ಸಣ್ಣ ಕಥೆಗಳನ್ನು ಹೇಗೆ ಹೆಣೆದಿದ್ದಾರೆ ಎಂಬುದು ಅದ್ಭುತವಾಗಿದೆ. ಈ ತರಹದ ಕಲಾತ್ಮಕವಾಗಿ ಸೂಕ್ತವಾದ ದಾರಿಗಳನ್ನು ಹುಡುಕುವಲ್ಲಿ ನಿಪುಣರು.ಇದೆಲ್ಲಾ ಸಾಧ್ಯವಾಗುವದು ಅವರು ತಮ್ಮ ಮಾಧ್ಯಮವನ್ನು ತಿಳಿದಿರುವ ಸಂಕೀರ್ಣದಲ್ಲಿ, ಸಂಪೂರ್ಣದಲ್ಲಿ.

ರಂಗಸ್ಥಳವನ್ನು ನೆನಪಿಸುವ ಸೆಟ್ಟುಗಳು

ಇನ್ನು ಕುರೋಸಾವ ಅವರ ಅತ್ಯಂತ ಮಹತ್ವದ ಚಿತ್ರವಾದ ರಾಶೋಮನ್ ಬಗ್ಗೆ ಗಮನ ಹರಿಸೋಣ. ಇದರ ಕಥಾಶೈಲಿ ಅಂದಿನ ಕಾಲಕ್ಕೆ ಅಸಾಧಾರಣವಾದ ಹಾಗೂ ಅತಿ ಯಶಸ್ವಿಯಾದ ಪ್ರಯೋಗ ಎಂಬುದು ನಿರ್ವಿವಿವಾದ. ಮೂಲ ಕಥೆಗಳಲ್ಲಿ, ಕುರೋಸಾವ ಹಲಾವಾರು ಅರ್ಥಗಳಿರುವ, ಯಾವುದೂ ನಿರ್ದಿಷ್ಟವಾಗಿರದ ಒಗಟುಗಳನ್ನು ಕಂಡಿದ್ದಾರೆ. ಇವೆಲ್ಲವನ್ನೂ ಚಲನಚಿತ್ರದಲ್ಲಿ ಮೂಡಿಸುವದೇ ಅವರ ಉದ್ದೇಶ. ಇದು ಕಥಾಪ್ರಸಂಗದ ಸೃಷ್ಟಿಗೆ ಮತ್ತು ಅಭಿನಯ ತಂಡಕ್ಕೆ ಮಹಾಸವಾಲು. ಈ ಚಿತ್ರವನ್ನು ಚಿತ್ರೀಕರಿಸಿರುವ ತಾಣಗಳು, ಸೃಷ್ಟಿಸಿರುವ ಸೆಟ್ಟುಗಳು, ಇವುಗಳ ಬಗ್ಗೆ ಕುರೋಸಾವ ವಿವರವಾದ ಲೇಖನವನ್ನೇ ಬರೆದಿದ್ದಾರೆ. ಹೊಸದಾಗಿ ಮದುವೆಯಾದ ಸಿಪಾಯಿ ತನ್ನ ಹೆಂಡತಿಯೊಡನೆ ನಿರ್ಜನವಾದ ಕಾಡಿನಲ್ಲಿ ಸಾಗುತ್ತಿರುವಾಗ ಒಬ್ಬ ದರೋಡೆಕೋರ ಹಲ್ಲೆ ನಡೆಸುತ್ತಾನೆ. ಖಚಿತವಾಗಿ ತಿಳಿಯುವುದೇನೆಂದರೆ, ಸೈನಿಕ ಸಾಯುತ್ತಾನೆ, ಹೆಂಡತಿಯ ಮೇಲೆ ದೌರ್ಜನ್ಯದ ಕುರುಹಗಳಿವೆ, ಮತ್ತು ಘಟನೆಯ ಕೆಲಘಂಟೆಗಳ ನಂತರ ದೂರದಲ್ಲಿ ಒಬ್ಬ ಪರಹೆಯವನು ಅವನನ್ನು ಬಂಧಿಸುತ್ತಾನೆ. ಅಲ್ಲದೆ, ಘಟನೆಯ ಸಮಯದ ಸ್ವಲ್ಪ ಆಚೆ-ಈಚೆಗೆ ಕಾಡಿಗೆ ಹೋದ ಕಟ್ಟಿಗೆಯವ ಬಂದು ಹಳ್ಳಿಯಲ್ಲಿ ವರದಿ ಒಪ್ಪೊಸುತ್ತಾನೆ. ಚಿತ್ರದ ಕೇಂದ್ರಬಿಂದು ಕೊಲೆಯ ವಿಚಾರಣೆ. ಎಲ್ಲರಿಗೂ ತಮ್ಮ ಹೇಳಿಕೆಗೆ ಅವಕಾಶ ಸಿಗುತ್ತದೆ. ಕಟ್ಟಿಗೆಯವ, ದರೋಡೆಕೋರನ್ನನ್ನು ಬಂಧಿಸಿದ ಪಹರೆಯವ, ದರೋಡೆಕೋರ, ಸಿಪಾಯಿಯ ಹೆಂಡತಿ ಮತ್ತು ಸಿಪಾಯಿಯ ಆತ್ಮ ಇವುಗಳೆಲ್ಲ ಬಂದು ತಮ್ಮ ವರದಿ ಒಪ್ಪಿಸುತ್ತಾರೆ. ಎಲ್ಲರ ವರದಿಗಳನ್ನು ಕೇಳಿದ ಮೇಲೆ ಒಂದು ದುರ್ಘಟನೆ ನಡೆಯಿತು ಎಂಬುದು ಮೊದಲಿನಷ್ಟೇ ಖಚಿತವಾಗಿದ್ದರೂ ಅದು ಹೇಗೆ ಆಯಿತು ಎಂಬುದು ಒಗಟಾಗಿಯೇ ಉಳಿಯುತ್ತದೆ. ಇದರಲ್ಲಿ ಗಮನಿಸಬೇಕದದ್ದೆಂದರೆ, ಕಟ್ಟಿಗೆಯವನು ವಿಚಾರಣೆಯಲ್ಲಲ್ಲದೆ, ಯಾವುದೇ ಒತ್ತಡವಿಲ್ಲದ ದುರ್ಗಮ ದೇವಾಲಯದ ವಾತಾವರದಲ್ಲೂ ತನ್ನ ವರದಿ ಒಪ್ಪಿಸುತ್ತಾನೆ. ಇವೆರಡೂ ಬೇರೆಯೇ ಹೇಳಿಕೆಗಳು. ಆದರೂ ನಮಗೆ, ನಮ್ಮ ಮನಸ್ಸು ಮಾಡಲಾಗುವದಿಲ್ಲ! ಈ ಚಿತ್ರಕಥೆಗೆ ತಕ್ಕಂತೆ ಅಭಿನಯಿಸುವದು ಕಠಿಣ. ಉದಾಹರಣಿಗೆ, ಸಿಪಾಯಿ ಮತ್ತು ದರೋಡೆಕೋರನ ನಡುವೆ ನಡೆದಿರಬಹುದಾದ ಚಕಾಮಕಿ. ಇದರ ಬಗ್ಗೆ ಕಟ್ಟಿಗೆವನ ಎರಡು ವರದಿಗಳನ್ನು ಹಿಡಿದು ಒಟ್ಟು ಐದು ಬೇರೆ ಬೇರೆ ವಿವರಗಳಿವೆ. ಪ್ರತಿಬಾರಿಯೂ ಇಬ್ಬರ ಚಲನ ವಲನ, ಹಾವಭಾವಗಳು ಸಂಪೂರ್ಣವಾಗಿ ಬೇರೆಯಾಗಿವೆ. ಒಂದರಲ್ಲಿ ದರೋಡೆಕೋರ ಶೂರನಾಗಿ ಜಯಸಿದರೆ, ಇನ್ನೊಂದರಲ್ಲಿ ಸ್ನಾಯುಗಳೆಲ್ಲ ನಡುಗುತ್ತಾ, ಹೆದರುತ್ತ, ಆತ್ಮರಕ್ಷಣೆಗೆಂದು ಅಸಹ್ಯ ಹುಟ್ಟುವಂತೆ ಅಸಮರ್ಥವಾಗಿ ಕೊಲೆ ಮಾಡುತ್ತಾನೆ. ಕೊನೆಗೂ ನೀವು ಯಾರ ಮಾತು ನಂಬುತ್ತೀರ ಎನ್ನುವದು ಯಾವುದೇ ದೃಶ್ಯಗಳ ಬಗ್ಗೆ ಅವಲಂಬಿಸದೆ, ನೀವು ಯಾರನ್ನು ನಂಬುತ್ತೀರ ಅಥವ ನಿಮ್ಮ ನಿಷ್ಕರ್ಷೆ ಏನು ಎಂಬುಅದರ ಬಗ್ಗೆ ಅವಲಂಬಿಸಿದೆ. ಚಲನಚಿತ್ರ ಎಷ್ಟು ಪರಿಪೂರ್ಣವಾಗಿದೆಯೋ, ಘಟನೆಯ ವಾದ್ಯಾಂತ ಅಷ್ಟೇ ಅನಿರ್ಧಿಷ್ಟವಾಗಿದೆ. ಇಲ್ಲೇ ಇರುವದ ಕುರೋಸಾವಾರ ಗೆಲುವು. ನನಗೆ ಕಟ್ಟಿಗೆಯವನು ಹೇಳುವ ಮಾತು ಮರೆಯಲು ಅಸಾಧ್ಯ: "ನಮ್ಮೆಲ್ಲರ ಒಳಗೂ ಒಂದು ರಾಕ್ಷಸನಡಿಗಿದ್ದಾನೆ; ಅವನು ಎದ್ದಾಗ ನಾವೆಲ್ಲರೂ ಭೀಕರಾರಗಲು ಸಾಧ್ಯ".

ರಾಶೋಮೊನ್ ಚಿತ್ರಗಳು

ಕುರೋಸಾವ ಚಿತ್ರಗಳಲ್ಲಿ ಯಶಸ್ಸಿನ ಪಾಲು ನಟನಟಿಯರಿಗೂ ಸೇರುತ್ತದೆ. ಅನೇಕ ನಟರು ಲೀಲಾಜಾಲವಾಗಿ ಅನೇಕ ಭಿನ್ನ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗಮನ ಸೆಳೆಯುವವರಲ್ಲಿ ಪ್ರಮುಖ ಮಿಫುನೆ. ಕುರೋಸಾವ ಅವರು ಕಲ್ಪಿಸಿರುವ ಸಮುರಾಯಿಗಳ ಲೋಕವನ್ನು ಜೀವಕ್ಕೆ ತರುವ ಕಾರ್ಯಕರ್ತ. ಅವರು ನಿಭಾಯಿಸಿರುವದೆಲ್ಲ ದೈಹಿಕವಾಗಿ ಶ್ರಮದಾಯಕವಾದವು. ಜಾನಪದ ಸನ್ನಿವೇಶಗಳನ್ನು/ಕಾಳಗಳನ್ನು ಕುರೋಸಾವ ಯಾವುದೇ ಎಡಿಟಿಂಗ್ ಇಲ್ಲದೇ ದೀರ್ಘ ದೃಶ್ಯಗಳಂತೆ ಚಿತ್ರಿಸುತ್ತಾರೆ. ಇಂದಿನ ಚಕಾಮಕಿಯ ಚಿತ್ರಗಳಿಗೆ ಹೋಲಿಸಿದರೆ ಇದು ಮಹಾಕಷ್ಟದ್ದು. ಏಕೆಂದರೆ ಯಾವುದೆ ಎಡಿಟಿಂಗಿನ ಸಹಾಯವಿಲ್ಲದೇ ಆಶಿಸಿದ ಲೀಲಾಜಾಲತೆಯನ್ನು ತರಬೇಕು. ಭಾವುಕತೆಯ ನೆರವಿಲ್ಲದೆ, ಸಮುರಾಯಿಗಳ ನಿಖ್ಯವಾದ ಹಾವಭಾವಗಳ ನಡುವೆಯೂ ಕತೆಯ ಎಲ್ಲ ಸೂಕ್ಷ್ಮಗಳನ್ನೂ ಹೊರತರಬೇಕು. ಅವರ ನಟರಲ್ಲಿ ವೈವಿದ್ಯಮಯ ಪಾತ್ರಗಳನ್ನು ನಿಭಾಯಿಸದವರಲ್ಲು ತಕಾಶಿ ಶಿಮುರಾ ಕೂಡ ಒಬ್ಬರು. ಏಳು ಸಮುರಾಯಿಗಳಲ್ಲಿ ಮಹಾವೀರನಾದರೆ, ರಾಶೋಮನ್-ನಲ್ಲಿ ಕಟ್ಟಿಗೆ ಕಡಿಯುವವ ಹಾಗೂ ಇಕುರುವಿನಲ್ಲಿ ಸಾವಿನ ಅಂಚಿನಲ್ಲಿ ತನ್ನ ಜೀವನಕ್ಕೆ ಒಂದು ಗುರಿ ಕಂಡುಕೊಂಡ ನಗರಪಾಲಿಕೆಯ ಅಧಿಕಾರಿಯಾಗಿದ್ದಾರೆ. ಪರಿಣಿತರಾದ ಈ ನಟರುಗಳ ತಂಡ ಕುರೋಸಾವ ಅವರಿಗೆ ಮಹತ್ತರವಾದ ಬೆಂಬಲ ನೀಡಿತು.

ತಕಾಶಿ ಶಿಮುರಾ

ಕೊನೆಯಲ್ಲಿ ಇತ್ತೀಚಿಗೆ ಗಮನಿಸಿದ ಸಂಗತಿ. ಕುರೋಸಾವ ಮೊದಲ ಹತ್ತು ವರ್ಷಗಳಲ್ಲಿ ಸುಮಾರು ಚಿತ್ರಗಳನ್ನು ಮಾಡಿದರು. ಎಲ್ಲವು ಅಂದಿನ ಸಮಕಾಲೀನವಾಗಿದ್ದು, ಮಾನವನ ಅಸ್ತಿತ್ವದ ಬಗ್ಗೆ existentialism ಎತ್ತಿದ ಗಂಭೀರ ಪ್ರಶ್ನೆಗಳಿಂದ ಉದ್ಭವಗೊಂಡಿದ್ದವು. ಕೆಲವು ಮಹಾಯುದ್ಧದ ಸಮಯದಲ್ಲಿ ಒತ್ತಾಯಕ್ಕೆ ಮಣಿದು ಮಾಡಿದ ಪ್ರಾಪಗಾಂಡಾ ಚಿತ್ರಗಳೂ ಇದ್ದವು. ಯಾವುದರಲ್ಲೂ ಜಪಾನಿನ ಮಧ್ಯಕಾಲೀನ ಚರಿತ್ರೆಯ ಪ್ರಸಂಗಗಳಿಲ್ಲ. ಆಧುನಿಕ ಚಿತ್ರಕಥೆಗಳನ್ನು ಬಿಟ್ಟು, ತಮ್ಮದೇ ಮಣ್ಣಿನ ಊಹಾಲೋಕಕ್ಕೆ ಹೊಕ್ಕಿದ ಮೇಲೆ ಅವರಿಗೆ ಹೇಳಲು ಮನೋರಂಜಿತವಾದ ಕತೆಗಳು ಸಿಕ್ಕವು. ನೋಡುವಾಗ ಆನಂದ ಪಟ್ಟ ಶೋತ್ರುಗಳು ತಮ್ಮದೇ ಆದ ರೀತಿಯಲ್ಲಿ ಕುರೋಸಾವಾರ ಕಾಳಜಿಗಳಿಗೆ ಸ್ಪಂದಿಸಲೂ ಸಾಧ್ಯವಾಯಿತು.

12 Comments:

Blogger Sudarshan said...

ಕುರೊಸೊವಾನನ್ನು ನೀವು ಗಮನಿಸಿರುವ ಹಿಂದಿನ ಶ್ರದ್ಧೆ ಮೆಚ್ಚುವಂಥದ್ದು. ಹಾಸ್ಯ ಮತ್ತು ಮನುಷ್ಯನ ದುರಂತವನ್ನು ಸಮೀಕರಿಸಿದ ಕುರೊಸೊವಾನ ರೀತಿ ಅನನ್ಯವಾದದ್ದು. ಆದರೂ ಅವನ ಸಿನೆಮಾ ನೋಡುವ ಅನುಭವವನ್ನು ಪದಕ್ಕಿಳಿಸಲು ನನಗಂತೂ ಇನ್ನೂ ಸಾಧ್ಯವಾಗಿಲ್ಲ. ಅಷ್ಟು ನವಿರು ಅವನದು. ನಿಮ್ಮ ಕಾಣ್ಕೆಗಳು ಹೆಚ್ಚಿನ ಓದುಗರಿಗೆ ತಲುಪಲಿ. ಈ ಲೇಖನವನ್ನು ಯಾವುದಾದರೂ ಪತ್ರಿಕೆಗೆ ಕಳಿಸಿಕೊಡಿ.

ಅತ್ಯುತ್ತಮ ಬರಹವನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

-ಸುದರ್ಶನ

7:00 am  
Blogger yashaswini said...

ಕುರೋಸಾವನ ಬಗ್ಗೆ ಎಷ್ಟು ಬರೆದರೂ ಸಮಾಧಾನ ಆಗುತ್ತೋ ಇಲ್ಲವೋ!. ಹುಚ್ಚು ಹಿಡಿಸ್ಬಿಡ್ತಾನೆ.
"ಎಲ್ಲೆಲ್ಲೂ ಅರಳಿದ ಹೂವುಗಳು" ಚಿತ್ರಗಳನ್ನು ನೋಡಿ ಖುಷಿಯಾಯಿತು. ಸೆವೆನ್ ಸಮುರಾಯ್ ನಲ್ಲಿ ಬೆಂಕಿಯೂ,ರಕ್ತಸಿಂಚಿತ ಸಿಂಹಾಸನದಲ್ಲಿ ಹೊಗೆಯೂ ನಿಮ್ಮ ಗಮನ ಸೆಳೆದಿರಬಹುದು.
ಅಂಥದ್ದು ಎಷ್ಟೋ!
ಒಳ್ಳೇ ಲೇಖನಕ್ಕೆ ಧನ್ಯವಾದಗಳು.
regards
yashaswini

11:15 am  
Blogger Vinayaka Pandit said...

ಸುದರ್ಶನ ಮತ್ತು ಯಶಸ್ವಿನಿ,
ನಿಮಗೆ ಲೇಖನ ಹಿಡಿಸಿದ್ದು ನನಗೆ ಸಂತೋಷದ ವಿಷಯ. ನೀವಿಬ್ಬರೂ ಹೇಳಿದಂತೆ ಕುರೊಸಾವರ ಚಿತ್ರಗಳನ್ನು ನೋಡಿದ ಅನುಭವವನ್ನು ಸಂಪೂರ್ಣವಾಗಿ ವಿವರಿಸುವದು ಕಷ್ಟ. ಬಹಳ ದಿನಗಳ ನಂತರವೂ ನನ್ನೊಡನೆ ಇದ್ದು, ಆವಾಗಾವಾಗ ನಾನು ಮೆಲಕು ಹಾಕುವ, ಯೋಚಿಸುವ ಅಂಶಗಳ ಬಗ್ಗೆ ಬರೆದಿದ್ದೇನೆ.
- ವಿನಾಯಕ

1:59 am  
Blogger Saamaanya Jeevi said...

ವಿನಾಯಕರೆ,

ದಯವಿಟ್ಟು ನಿಮ್ಮ ಲೇಖನವನ್ನು ಯಾವುದಾದರೂ ಪತ್ರಿಕೆಗೆ ಕಳಿಸಿ.

ನಾನು ಕುರೋಸಾವಾರ ಯೊಜಿಂಬೋ, ರಶೋಮೋನ್ ಮತ್ತು ಡ್ರೀಮ್ಸ್ ನೋಡಿದ್ದೇನೆ. ನನಗನ್ನಿಸಿದ ಕೆಲ ಅಸ್ಪಷ್ಟ ಅನಿಸಿಕೆಗಳು ಹೀಗಿವೆ. ಸ್ವಲ್ಪ ಉತ್ಪ್ರೇಕ್ಷೆಯಿಂದಲೇ ಹೇಳುತ್ತಿದ್ದೇನೆ.

೧. ಸಿನೆಮಾ ಎಲ್ಲಿ ಯಾವಾಗ ನಡೆಯಿತು ಎನ್ನುವ ಪ್ರಶ್ನೆ ನಮಗೇಳುವುದೇ ಇಲ್ಲ.

೨. ಅತ್ಯುತ್ತಮ ಸಾಹಿತ್ಯ 'ಪರಿಚಿತವಾದ್ದನ್ನು ಅಪರಿಚಿತಗೊಳಿಸುತ್ತೆ' ಎನ್ನುತ್ತಾರೆ. ಆ ಮಾತು ಕುರೋಸಾವಾ ಚಿತ್ರಗಳಿಗೆ ಹೇಳಬಹುದೇನೋ.

೩. ಕುರೋಸಾವಾರ ಚಿತ್ರಗಳ ಕಾವ್ಯಾತ್ಮಕತೆ ಅವರು ತಮ್ಮ ಪರಂಪರೆಯಿಂದ ತೆಗೆದುಕೊಂಡು ಸಂಕೇತ-ಪ್ರತಿಮೆಗಳ ವಿಶಿಷ್ಟವಾದ ನಾಟಕೀಯ ಪ್ರಸ್ತುತಿಯಿಂದ ಸಾಧ್ಯವಾಗುತ್ತದೆ ಎನ್ನಿಸುತ್ತದೆ. ಬೇರಿನ್ನಾವ ನಿರ್ದೇಶಕನಿಗಿಂತ ಮಾತಿನ ಮೇಲಿನ ಅವರ ಅವಲಂಬನೆ ಕಡಿಮೆಯಿದ್ದಂತಿದೆ. ಇವೆರಡರ ಸಮ್ಮಿಶ್ರದಿಂದ ದೊರೆಯುವ ಅನುಭವ ಅಪೂರ್ವವಾದದ್ದು.

-ಶಿವು

5:35 am  
Blogger Saamaanya Jeevi said...

ವಿನಾಯಕರೆ,

ತಾವು ಕಾರ್ನಾಡರ ಒಂದಾನೊಂದು ಕಾಲದಲ್ಲಿ ಚಿತ್ರವನ್ನು ನೋಡಿದ್ದೀರೇ? ಅದರ ಕುರಿತು ತಮ್ಮ ಅಭಿಪ್ರಾಯವೇನು?

ಹೆಚ್ಚಾಗಿ ಆ ಚಿತ್ರ 'ಸೆವೆನ್ ಸಮುರಾಯ್'ನಿಂದ ಪ್ರಭಾವಿತವಾದದ್ದು ಎಂದು ಹೇಳುತ್ತಾರೆ. ಆದರೆ ಅದು 'ಯೊಜಿಂಬೊ' ನಿಂದ ಪ್ರಭಾವಿತವಾದಂತಿದೆ.

ಒಟ್ಟು ತಮ್ಮ ಬರಹ ಓದಿದೆ ಮೇಲೆ ನನಗೆ ಕಾರ್ನಾಡರ ಅನೇಕ ನಾಟಕಗಳೂ ಮತ್ತು ಆ ವಸ್ತುಗಳಿಂದ ಅವರು ಪ್ರೇರಿತರಾದ ರೀತಿಯೂ ಜ್ಞಾಪಕ ಬರುತ್ತಿದೆ.

ಇಲ್ಲೊಂದು ಪ್ಯಾರಲಲ್ ಇದೆ ಅನ್ನಿಸುತ್ತಿದೆಯೇ ನಿಮಗೆ?

ಇಂತಿ
ಶಿವು

1:36 am  
Blogger Saamaanya Jeevi said...

ವಿನಾಯಕರೆ,

ತಾವು ಕಾರ್ನಾಡರ ಒಂದಾನೊಂದು ಕಾಲದಲ್ಲಿ ಚಿತ್ರವನ್ನು ನೋಡಿದ್ದೀರೇ? ಅದರ ಕುರಿತು ತಮ್ಮ ಅಭಿಪ್ರಾಯವೇನು?

ಹೆಚ್ಚಾಗಿ ಆ ಚಿತ್ರ 'ಸೆವೆನ್ ಸಮುರಾಯ್'ನಿಂದ ಪ್ರಭಾವಿತವಾದದ್ದು ಎಂದು ಹೇಳುತ್ತಾರೆ. ಆದರೆ ಅದು 'ಯೊಜಿಂಬೊ' ನಿಂದ ಪ್ರಭಾವಿತವಾದಂತಿದೆ.

ಒಟ್ಟು ತಮ್ಮ ಬರಹ ಓದಿದೆ ಮೇಲೆ ನನಗೆ ಕಾರ್ನಾಡರ ಅನೇಕ ನಾಟಕಗಳೂ ಮತ್ತು ಆ ವಸ್ತುಗಳಿಂದ ಅವರು ಪ್ರೇರಿತರಾದ ರೀತಿಯೂ ಜ್ಞಾಪಕ ಬರುತ್ತಿದೆ.

ಇಲ್ಲೊಂದು ಪ್ಯಾರಲಲ್ ಇದೆ ಅನ್ನಿಸುತ್ತಿದೆಯೇ ನಿಮಗೆ?

ಇಂತಿ
ಶಿವು

1:36 am  
Blogger Vinayaka Pandit said...

ಶಿವು,
ನಾನು ಒಂದಾನೊಂದು ಕಾಲದಲ್ಲಿ ನೋಡಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಆಗ ನನಗೆ ಹದಿನೈದೋ, ಹದಿನಾರೋ ವರ್ಷ. ಕಾಲ ಕಳೆದಂತೆ ನಮ್ಮ ಅನಿಸಿಕೆ ಮತ್ತು ನೆನಪುಗಳು ತಮ್ಮದೇ ಆದ ರೀತಿಯಲ್ಲಿ ಬದಲಾಗುತ್ತವೆ. ಹೀಗಾಗಿ, ನಾನು ಹೇಳುವದು ನನಗೆ ಆಗ ಅನಿಸಿದ್ದಲ್ಲ, ನನಗೆ ಈಗ ಅನಿಸುವದು :-)

ಕಾರ್ನಾಡರು ಕುರೋಸಾವರಿಂದ ಪ್ರಭಾವಗೊಂಡಿದ್ದರು ಅನ್ನುವದಕ್ಕಿಂತ, ಅವರ ಪ್ರೇರಣೆಗಳಲ್ಲಿ ಕುರೋಸಾವರದೂ ಒಂದು ಎನ್ನಬಹುದೇನೋ. ಅವರು ಇದರ ಬಗ್ಗೆ ಎಲ್ಲಿಯಾದರೂ ಹೇಳಿದ್ದಾರೆಯೇ? ನೀವೇ ಹೇಳುವಂತೆ, ಒಂದಾನೊಂದು ಕಾಲದಲ್ಲಿ ಏಳು ಸಮುರಾಯಿಗಳಿಗಿಂತ ಯೊಜಿಂಬೋಗೆ ಸಮೀಪ. ಆದರೆ, ಅವುಗಳ ನಡುವಿನ ಅಂತರವನ್ನೂ ಗಮನಿಸಿ. ಒಂದಾನೊಂದ ಕಾಲದಲ್ಲಿ ಗಂಭೀರವಾದ, ದುರಂತಮಯ ಕತೆಯನ್ನು ಹೇಳುತ್ತದೆ. ಯೊಜಿಂಬೋ ಹೆಚ್ಚಿನ ಅಂಶ ಜಾನಪದ ಮತ್ತು ಫ್ಯಾಂಟಸಿಯ ಜಗತ್ತು. ಹಳ್ಳಿಯ ಹೊರಗೆ, ಹಾಳು ಕುಟೀರದಲ್ಲಿ ಚೇತರಿಸಿಕೊಳ್ಳುತ್ತಿರುವ ಸಮುರಾಯಿ, ಗಾಳಿಗೆ ಹಾರುತ್ತಿರುವ ಎಲೆಯನ್ನು ಗುರಿ ಹಿಟ್ಟು ಹೊಡೆದು ನೆಲಕ್ಕೆ ಕಚ್ಚಿಹಾಕಿಸುತ್ತಾನೆ. ಈ ದೃಶ್ಯ ಉದ್ಭವಗೊಂಡಿರುವದು ಫ್ಯಾಂಟಸಿಯ ಜಗತ್ತಿನಲ್ಲಿ. ಇಂತಹ ಉದಾಹರಣೆಗಳು ಇಡೀ ಚಿತ್ರದಲ್ಲಿ ಬೇಕಷ್ಟು. ಇವೆಲ್ಲ ನಮ್ಮೆದುರಿಗೆ ಕಟ್ಟುವ ಜಗತ್ತೇ ಬೇರೆ, ಒಂದಾನೊಂದು ಕಾಲದಲ್ಲಿ ಕಟ್ಟುವ ಜಗತ್ತೇ ಬೇರೆ ಎಂದು ನನ್ನ ಅನಿಸಿಕೆ.

ಕಾರ್ನಾಡರ ಬಗ್ಗೆ ಮತ್ತೊಂದು ಮಾತು. ಅವರ ಮಲೆಗಳಲ್ಲಿ ಮದುಮಗಳು ನೋಡಿದ ಮೇಲೆ, ಅವರು ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮಗಳನ್ನು ಒಂದುಗೂಡಿಸುವ ಸಂಕೀರ್ಣವನ್ನು ಕಂಡುಕೊಂಡಿಲ್ಲ ಎಂದೆನಿಸಿತು. ನನಗೇಕೋ ಹೀಗೆನಿಸುತ್ತದೆ: ಕಾರ್ನಾಡರಿಗೆ ಕತೆಗಳಿಗಿಂತ ಅವು ಅವರಲ್ಲಿ ಹುಟ್ಟಿಸುವ ವಿಚಾರಗಳ ಬಗ್ಗೆ ಆಸಕ್ತಿ ಮತ್ತು ಶೃದ್ಧೆ ಜಾಸ್ತಿ. ತಪ್ಪೇನಿಲ್ಲ!

ವಿನಾಯಕ.

10:28 am  
Blogger Saamaanya Jeevi said...

ವಿನಾಯಕರೆ,

ನಿಸ್ಸಂಶಯವಾಗಿ ಕಾರ್ನಾಡರಿಗೆ ಕುರೋಸಾವಾರೇ ಏಕಮೇವ ಪ್ರೇರಣೆಯಲ್ಲ. ಆದರೆ ಯಾವ ದ್ರವ್ಯ, ವಸ್ತುಗಳಿಂದ ಪ್ರೇರಣೆಯಾಗಿದೆಯೋ ಅವುಗಳ ನಡುವೆ ಒಂದು ಸಾಮ್ಯವಿದೆ ಎಂದು ನನಗೆನ್ನಿಸಿದೆ. ಅದನ್ನು ಬಳಸುವ ರೀತಿ, ಕಾರಣಗ್ಗಳಲ್ಲಿ ವ್ಯತ್ಯಾಸವಿದೆ.

ಮತ್ತೊಂದು ವಿವರಣೆ. ಕಾರ್ನಾಡರು ಕುವೆಂಪುರವರ 'ಕಾನೂರು ಹೆಗ್ಗಡತಿ'-ಯನ್ನು ಚಿತ್ರೀಕರಿಸಿದ್ದಾರೆ, 'ಮಲೆಗಳಲ್ಲಿ ಮದುಮಗಳು' ಅಲ್ಲ. ಆ ಚಿತ್ರದ ಕುರಿತು ಇರುವ ಅಸಮಾಧಾನಗಳು ಎಲ್ಲರಿಗೂ ಗೊತ್ತೇ ಇದೆ.

ಆದರೆ, ತಮ್ಮ ಕಡೆಯ ಮಾತನ್ನು ಮಾತ್ರ ನಾನೊಪ್ಪುವುದಿಲ್ಲ. ತಮ್ಮ ನಾಟಕಗಳಲ್ಲಿ ಅವರು ಎಲ್ಲ ಬಗೆಯ ಅಪೂರ್ವ ಸಂಯೋಜನೆಯನ್ನು ಸಾಧಿಸಿದ್ದಾರೆ. ಆದರೆ, ಆ ಬಗ್ಗೆ ಕುರೋಸಾವಾ ಕುರಿತ ಚರ್ಚೆಯಲ್ಲಿ ಆಗುವುದು ಬೇಡ. ಅದಕ್ಕೇ ಒಂದು ಅವಕಾಶ ಬರಲಿ.

ಇಂತಿ
ಶಿವು

5:37 am  
Blogger tnraghu said...

This comment has been removed by the author.

3:41 pm  
Blogger Documents said...

nimmanthe naanu saha Dehali (Gurgaon) vaasi. Kelavu dinagala hinde kurosawana "yojimbo" matthomme nodidhe. kurosawanannu eshtu sala nodidharu hosadagi eno noduthiruvanthe anisuthadde.

9:17 am  
Anonymous Anonymous said...

[size=72][color=red][url=http://www.go4you.net/go.php?sid=24]ENTER ON SOFTWARE PORTAL[/url][/color][/size]

[size=46][color=red][url=http://www.go4you.net/go.php?sid=24]DOWNLOAD SOFT![/url][/color][/size]

[img]http://www.istockphoto.com/file_thumbview_approve/4762671/2/istockphoto_4762671-software-box.jpg[/img]

[size=46][color=red][url=http://www.go4you.net/go.php?sid=24]OEM SOFTWARE[/url][/color][/size]

[size=72][color=red][url=http://www.go4you.net/go.php?sid=24]DOWNLOAD SOFTWARE[/url][/color][/size]

[size=72][b]Buy WrityGrierry soft programm to Windows[/b][/size]
[size=72][b]Online WrityGrierry soft programm to PC[/b][/size]
[size=72][b]Load WrityGrierry soft programm on Mac OS[/b][/size]

http://www.google.com/

8:45 am  
Anonymous Anonymous said...

ಕುರೋಸಾವನ ಬಗ್ಗೆ ಇಷ್ಟು ಆಳವಾದ ಲೇಖನ ಮೊದಲ ಬಾರಿಗೆ ಓದಿದೆ. ತು೦ಬಾ ಚೆನ್ನಾಗಿದೆ. ಇನ್ನೊ೦ದು ಬಾರಿ ಈತನ ಚಿತ್ರ ನೋಡಿ, ನೀವು ಹೇಳಿದ ಅ೦ಶಗಳನ್ನು ದುರ್ಬೀನಿಟ್ಟು ನೋಡೋಣ ಎನ್ನಿಸುತ್ತಿದೆ. :)
ನೀವು ಪರಿಚಯಿಸಿದ ಹೆಚ್ಚಿನವೆಲ್ಲವನ್ನೂ ನೋಡಿದ್ದೇನೆ(ಮಾದದೆಯೋ ಒ೦ದನ್ನು ಬಿಟ್ಟು).

ಇವನ ಚಿತ್ರಗಳು ಕಾಲಾತೀತ. ಹೊಸ ಹೊಸ ಅರ್ಥಗಳನ್ನು ಕೊಡುವ ಚಿತ್ರಗಳಿವು. ಸೆಟ್ಟುಗಳು, ಸ೦ಗೀತ, ಕ್ಯಾಮೆರ ವರ್ಕ್ ಅಧ್ಬುತ.
ರಾಷೋಮನ್ ನ ಒ೦ದು ಶಾಟ್ ಕಾಡಿನಲ್ಲಿ ಮರಗಳ ನಡುವಲ್ಲಿ ಕಣ್ಣಮುಚ್ಚಾಳೆಯಾಡುವ ಸೂರ್ಯನ ಶಾಟ್ ಸೂಪರ್. ಬೆಳಕನ್ನು ಮರೆಮಾಚುವ ಮರಗಳು, ಸತ್ಯವನ್ನು ಕತ್ತಲಲ್ಲಿ ಇಟ್ಟಿವೆ ಎ೦ಬ ರೂಪಕೋಕ್ತಿಯನ್ನು ಅಭಿವ್ಯಕ್ತಿಸುತ್ತವೆ.

ತೆ೦ಗೊಕ್ ತೊ ಜಿಗೊಕ್(ಹೈ ಆ೦ಡ್ ಲೋ) - ಬಡವ ಬಲ್ಲಿದರ ನಡುವಿನ ಕ೦ದಕ, ಸಾಮಜಿಕ ದೃಷ್ಟಿಕೋನ. ಅಪರಾಧಗಳ ಮೂಲಗಳ ಬೆಳಕು ಚೆಲ್ಲುತ್ತದೆ.
ದೆರ್ಸು ಉಝಲ - ನನ್ನ ಇನ್ನೊ೦ದು ಫೇವರಿಟ್. ಕಾಡಿನ ಬಗ್ಗೆ ಪ್ರೀತಿ ಹುಟ್ಟಿಸುವ ಚಿತ್ರ. ಈ ಚಿತ್ರ ಮಾಡುವ ಮು೦ಚೆ ಕುರೋಸಾವ ಆತ್ಮಹತ್ಯೆಗೆ ವಿಫಲ ಪ್ರಯತ್ನವೂ ಮಾಡಿದ್ದ.!!!

8:29 pm  

Post a comment

<< Home