ರಾಬರ್ಟ್ ಮುಸಿಲ್-ರ ಒಂದು ಪ್ರಬಂಧ
ರಾಬರ್ಟ್ ಮುಸಿಲ್ ಇಪ್ಪತ್ತನೆ ಶತಮಾನದ ಹೆಸರಾಂತ ಜರ್ಮನ್ ಸಾಹಿತಿ. ತೀಕ್ಷ್ಣಮತಿಯಾಗಿದ್ದ ಮುಸಿಲ್-ರ ಅಗ್ರತೆಯನ್ನು ಅವರ ಸಮಕಾಲೀನ ಜರ್ಮನ್ ಲೇಖಕರೆಲ್ಲ ಒಪ್ಪಿಕೊಂಡಿದ್ದರು. ಪ್ರಸಿದ್ದ ಕಾದಂಬರಿಕಾರ ಥಾಮಸ್ ಮಾನ್-ರಂತೂ ಜರ್ಮನ್ ಭಾಷೆಯಲ್ಲಿ ಬರೆಯುತ್ತಿರುವವರಲ್ಲಿ ಮುಸಿಲ್ ಅಗ್ರಗಣ್ಯರು ಎಂದೇ ಹೇಳಿದ್ದರು. ಅದೂ ಥಾಮಸ್ ಮಾನ್ ಓದುಗರ ಮೆಚ್ಚುಗೆ ಗಳಿಸಲು ಕೊಂಚ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಮುಸಿಲ್ ದೂರುತ್ತಿದ್ದಾಗ. ತಮ್ಮ ಕಾದಂಬರಿಗಳು, ಸಣ್ಣ ಕತೆಗಳು, ಮತ್ತು ಪ್ರಬಂಧಗಳ ಮೂಲಕ ಸಾಕಷ್ಟು ಓದುಗರನ್ನು ಆಕರ್ಷಿಸಿದ್ದ ಮುಸಿಲ್ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ಸೈಟ್-ಗಳು ಇಂಟರ್-ನೆಟ್-ನಲ್ಲಿ ಸುಮಾರಿವೆ ( ಮುಸಿಲ್ ಫೋರಮ್ , ಮತ್ತು ವಿಕಿಪೀಡಿಯ ). ಇಲ್ಲಿ ಸಂಕ್ಷಿಪ್ತವಾಗಿ, ವೈಯಕ್ತಿಕ ಮಾಹಿತಿಗಳನ್ನು ನೀಡದೆ ಮುಸಿಲ್-ರನ್ನು ಪರಿಚಯಿಸಿದ್ದೇನೆ.
ಮುಸಿಲ್ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಕೊನೆಯ ಪ್ರಜೆ ಎಂದೇ ಹೇಳಬಹುದು. ಮಿಲಿಟರಿ ಶಾಲೆಯಲ್ಲಿ ಓದಿ ಹಲವಾರು ಪದವಿಗಳನ್ನು ಪಡೆದ ಮುಸಿಲ್ ಈ ಸಾಮ್ರಾಜ್ಯದ ಅಧಿಕಾರ ಕೇಂದ್ರಕ್ಕೆ ಹತ್ತಿರವಾಗಿದ್ದರು. ಅಲ್ಲದೆ, ಮೊದಲನೇ ಮಹಾಯುದ್ಧದಲ್ಲಿ ಹೋರಾಡಿದರು. ಅಂದಿನ ಇಡೀ ಜರ್ಮನ್ (ಆಸ್ಟ್ರಿಯ ಮತ್ತು ಪ್ರಶಿಯಾ) ಸಮುದಾಯವನ್ನು ಅಂಧರನ್ನಾಗಿ ಮಾಡಿದ ಸಂಸ್ಕೃತಿಯ ಬಗ್ಗೆ ಬಹಳಷ್ಟು ಚಿಂತಿಸಿದ್ದರು. ಹೀಗಾಗಿ ಮಹಾಯುದ್ದಕ್ಕೆ ಎಡೆ ಮಾಡಿಕೊಟ್ಟ ವಾತಾವರಣವನ್ನು ಹಿಡಿದಿಡುವ ಮಹಾಕಾದಂಬರಿಯನ್ನು ಬರೆಯುವದರಲ್ಲೇ ತಮ್ಮ ಕಾಲ ಕಳೆದರು. ಹೀಗೆ ಶುರುವಾದ Man without Qualities ಮಹಾಕಾದಂಬರಿ ಇಪ್ಪತ್ತೈದು ವರ್ಷಗಳ ನಂತರ ಅವರು ನಿಧನರಾದಾಗ, ಮೂರು ಸಾವಿರ ಪುಟಗಳನ್ನು ಮೀರಿದರೂ ಮುಗಿದಿರಲಿಲ್ಲ! ಹಿಟ್ಲರ್-ನ ಫೇಸಿಸಂ-ಗೆ ಸಿಕ್ಕಿ, ಪಕ್ಕದ ಸ್ವಿಟ್ಜರ್-ಲ್ಯಾಂಡಿನಲ್ಲಿ ಕಡು ಬಡತನದಲ್ಲಿ ಬಳಲುತ್ತಿದ್ದಾಗಲೂ ಅದೇ ಕಾದಂಬರಿಯನ್ನು ಬರೆಯುತ್ತಿದ್ದರು. ವ್ಯಾಯಾಮ ಮಾಡಲು ಯಾವಾಗಲೂ ಹುಮ್ಮಸ್ಸಿನಲ್ಲಿರುತ್ತಿದ್ದ ಮುಸಿಲ್ ವ್ಯಾಯಾಮಕ್ಕೆಂದು ಭಾರ ಎತ್ತುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಮೃತ ಮುಸಿಲ್-ರ ಮುಖದಲ್ಲಿ ಸೋಜಿಗ ಮತ್ತು ವ್ಯಂಗ್ಯ ಮಿಶ್ರಣದ ಕಿರುನಗೆಯಿತ್ತಂತೆ.
ಮುಸಿಲ್ ವಿಜ್ಞಾನಿಯಾಗಿ ಕೆಲಸ ಮಾಡಬಯಸಿ ಗಣಿತ ಮತ್ತು ವಿಜ್ಞಾನಗಳಲ್ಲಿ ತರಭೇತಿ ಪಡೆದಿದ್ದರು. ಹೀಗಾಗಿ ಈ ಶಾಸ್ತ್ರಗಳ ನಿಖರತೆಯ ಮೂಲ, ಆಳ, ವ್ಯಾಪ್ತಿ, ಲೋಪ, ಇತಿ, ಮಿತಿ ಇವುಗಳ ಬಗ್ಗೆ ಗಾಢವಾಗಿ ಯೋಚಿಸಿದ್ದರು. ವೈಜ್ಞಾನಿಕ ವೃತ್ತಿಯನ್ನು ಬಿಟ್ಟ ಮುಸಿಲ್ ತತ್ತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ತತ್ವಜ್ಞಾನಿಯಾಗಿ ಅಷ್ಟೊಂದು ನೆಮ್ಮದಿ ಕಾಣದೆ ಸಾಹಿತ್ಯದಲ್ಲಿ ತಮ್ಮನ್ನು ಮುಳುಗಿಸಿಕೊಂಡರು. ಸಾಹಿತಿಯಾಗಿ ವಿಪರೀತ ಕಷ್ಟಪಟ್ಟರು. ಹಲವಾರು ಬಾರಿ ಬರವಣಿಗೆ ತಮ್ಮ ಕೈ ಬಿಡುತ್ತಿದೆಯೇನೋ ಎಂದು ತಳಮಳಗೊಂಡರು. ಆದರೆ ಲೇಖಕನಾದ ಮೇಲೆ ಬರೆಯುವುದನ್ನು ಬಿಡುವ ಯೋಚನೆ ಅವರ ಹತ್ತಿರ ಸುಳಿಯಲಿಲ್ಲ.
ಅತ್ಮ ಮತ್ತು ಭಾವನಾ ಲೋಕದ ಸಂಬಂಧ ಮುಸಿಲ್-ರನ್ನು ಮೊದಲಿನಿಂದಲೂ ಕೆರಳಿಸಿತ್ತು (ಅವರ Confusions of the young Torless ನೋಡಿ). ಆಧುನಿಕ ವಿಜ್ಞಾನದ ನಿಖರತೆಯ ಎಲ್ಲಾ ಮುಖಗಳ ಪರಿಚಯವಿದ್ದ ಅವರಿಗೆ, ಆ ನಿಖರತೆಯ ಕೆಲವು ಆಯಾಮಗಳು, ಆತ್ಮ ಮತ್ತು ಭಾವನಾ ಲೋಕವನ್ನು ಅರಿಯಲು ಅವಶ್ಯ ಎಂಬ ನಂಬಿಕೆಯಿತ್ತು. Precision and Soul ಎಂಬ ಅವರ ಪ್ರಬಂಧಗಳ ಸಂಗ್ರಹ ಇವುಗಳೆಲ್ಲವನ್ನೂ ಒಳಗೊಂಡು ಅದ್ಭುತವಾಗಿದೆ. ಇವುಗಳಲ್ಲಿ 'ಗಣಿತಜ್ಞ' ಎಂಬ ಪ್ರಬಂಧ ನನಗೆ ಬಹು ಇಷ್ಟ. ಇದನ್ನು ಅವರು ಬರೆದದ್ದು ೧೯೧೩ರಲ್ಲಿ. ಈಗಲೂ ಪ್ರಸ್ತುತವಾಗಿದೆ. ಇದನ್ನು ಕನ್ನಡದಲ್ಲಿ ನಿಮ್ಮ ಮುಂದೆ ತರಲು ಪ್ರಯತ್ನಿಸಿದ್ದೇನೆ. ನನ್ನ ಮಿತ್ರ ರಾಘವೇಂದ್ರ ಉಡುಪ ಈ ತರ್ಜುಮೆಯ ಎರಡು ಮೂರು ಕರಡು ಪ್ರತಿಗಳನ್ನು ಪರಿಷ್ಕರಿಸಿ, ತಪ್ಪುಗಳನ್ನು ತಿದ್ದಿ, ಮನಸಾರೆಯಾಗಿ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಉಳಿದಿರುವ ಕುಂದು, ಕೊರತೆಗಳಿಗೆ ನಾನೇ ಜವಾಬ್ದಾರ.
ಗಣಿತಜ್ಞ
ಗಣಿತಶಾಸ್ತ್ರವೆಂದರೇನು ಎಂಬುದರ ಬಗ್ಗೆ ನಮಗಿರುವ ತಿಳುವಳಿಕೆ ತೀರ ಕಡಿಮೆ. ಹೀಗಿದ್ದೂ ಗಣಿತದ ಪ್ರತಿಮೆಗಳ ಮೂಲಕ ಉಳಿದ ವಿದ್ಯಮಾನಗಳನ್ನು ವಿಶ್ಲೇಷಿಸಲು ನಾವು ಹಿಂಜರಿಯುವದಿಲ್ಲ, ಅದೆಷ್ಟೇ ಅಸಂಬದ್ಧವಿರಲಿ. ಉದಾಹರಣೆಗೆ ದುರಂತದ ಮಧ್ಯದಲ್ಲಿ ಮುಳುಗಿರುವ ಸೇನಾಪತಿಗಳನ್ನು ರಣಭೂಮಿಯ ಗಣಿತಜ್ಞರು ಎಂದು ಕರೆಯುವದು! ಕ್ಷುಲ್ಲಕ ದುರಂತಗಳಿಗೆ ಎಡೆಮಾಡಿಕೊಡಬಾರದೆಂದಿದ್ದರೆ ಸೇನಾಪತಿಗಳು ಸರಳವಾದ ಲೆಕ್ಕಾಚಾರಗಳಿಗಿಂತ ಹೆಚ್ಚಿನ ಗಣಿತಕ್ಕೆ ಮೊರೆಹೋಗಬೇಕಾಗಿಲ್ಲ. ಗಣಿತದ ಸಾಧಾರಣ ಸಮಸ್ಯೆಗಳನ್ನು (ಉದಾ: differential equations) ಬಗೆಹರಿಸಲು ಬೇಕಾದಷ್ಟು ಸಮಯ ಯುದ್ಧಭೂಮಿಯಲ್ಲಿ ನಿಶ್ಕ್ರಿಯರಾಗಿರುವುದೂ ಒಂದೇ ಒಮ್ಮೆಲೇ ತನ್ನೆಲ್ಲ ಸೈನಿಕರನ್ನು ಮೃತ್ಯುಕೂಪಕ್ಕೆ ತಳ್ಳುವದೂ ಒಂದೇ.
ಇದರರ್ಥ ಸೇನಾಪತಿಗಳಿಗೆ ಜಾಣತನವಿಲ್ಲ ಎಂದಲ್ಲ. ಗಣಿತಜ್ಞರ ಬಗ್ಗೆ ನಮ್ಮ ಭಾವನೆಗಳು ಸತ್ಯದಿಂದ ಎಷ್ಟು ದೂರವೆಂಬುದಷ್ಟೆ! ಗಣಿತ, ಸೇನಾಪತಿಗಳಂತೆ ಚುರುಕಾಗಿ ಯೋಚಿಸಿ, ತುರ್ತಾದ ಸಮಸ್ಯೆಗಳನ್ನು ಬಗೆಹರಿಸುವ ವಿಧಾನ ಎನ್ನುವದರಲ್ಲೂ ಸತ್ಯವಿದೆ. ಆದರೆ, ಯೋಚನೆಯೆಂಬುದು ವಿಶಾಲವಾದ ಮತ್ತು ಚಂಚಲ ಪ್ರಕ್ರಿಯೆ. ನಮ್ಮ ಜೀವನದ ಅಗತ್ಯಗಳನ್ನು ದಕ್ಷವಾಗಿ ದೊರಕಿಸಿಕೊಳ್ಳಲು ಶುರುವಾದ ಗಣಿತದ ಯೋಚನೆ ಇಂದು ಆಸೆಬುರಕ ಉಳಿತಾಯದ ಮಹಾಸಾಧನವಾಗಿದೆ. ಜಿಪುಣನಿಗೂ ಕಡುಬಡತನಕ್ಕೂ ಎಷ್ಟು ದೂರವೋ ಅಷ್ಟೇ ದೂರ ಈ ದಕ್ಷತೆಯ ಹಂಬಲ ಮತ್ತು ಜೀವನದ ಮೂಲ ಅವಶ್ಯಕತೆಗಳಿಗಿದೆ.
ಗಣಿತ ತನ್ನದೇ ಆದ ಲೋಕದಲ್ಲಿ ನಾವು ಊಹಿಸಲೂ ಅಸಾಧ್ಯವಾದ ಪರಿಣಾಮಗಳಿಗೆ ಜನ್ಮ ಕೊಡುತ್ತದೆ. ಉದಾಹರಣೆಗೆ, ಅಸಂಖ್ಯಾತವಾದ ಸರಣಿಯನ್ನು ನಾವು ಗಣಿತದ ಜಗತ್ತಿನೊಳಗೆ ಉದ್ಧರಿಸಲು ತಿಳಿದಿದ್ದೇವೆ. ಯಂತ್ರಗಳು ಅತಿ ಜಟಿಲವಾದ ಗಣಿತದ ಲೆಕ್ಕಾಚಾರಗಳನ್ನು (ಕ್ರೂಢೀಕರಣ, ಲಾಗರಿದ್ಮ್) ಆಗಲೇ ಸರಾಗವಾಗಿ ನಡೆಸುತ್ತಿವೆ; ಸಮಸ್ಯೆಯ ಗುರುತು ಹೇಳಿ ಯಂತ್ರ ಚಾಲನೆ ಮಾಡಿದರೆ ಉತ್ತರ ಸಿಗುವಷ್ಟು ಸರಳವಾಗುತ್ತಾ ಬರುತ್ತಿವೆ ಗಣಿತದ ಲೆಕ್ಕಾಚಾರಗಳು. ಎರಡುನೂರು ವರ್ಷಗಳ ಹಿಂದೆ ನ್ಯೂಟನ್ ಅಥವಾ ಲೀಬ್ನಿಜ್-ರಂಥ ಮಹಾರಥಿಗಳ ಸಹಾಯವಿಲ್ಲದೇ ಬಿಡಿಸಲಸಾಧ್ಯವಾದ ಸಮಸ್ಯೆಗಳನ್ನು ಸಾಮಾನ್ಯ ಕಾರ್ಯದರ್ಶಿ ಗಣಕಯಂತ್ರಗಳ ಸಹಾಯದಿಂದ ಬಾವಿಯಿಂದ ನೀರೆಳೆದಂತೆ ಬಗೆಹರಿಸಬಹುದು. ಇವುಗಳಲ್ಲಿ ಯಂತ್ರಗಳಿಂದ ಬಗೆಹರಿಸಲು ಇನ್ನೂ ಸಾಧ್ಯವಾಗದ (ಬಗೆಹರಿಸುವ ಸಂಖ್ಯೆಗಳಿಗಿಂತ ಸಾವಿರಪಟ್ಟಿರುವ) ಸಮಸ್ಯೆಗಳ ಬಗ್ಗೆ ಯೋಚಿಸಲು, ಅವುಗಳಲ್ಲಡಗಿರುವ ನೂರಾರು ಸಾಧ್ಯತೆಗಳನ್ನು ಕಲ್ಪಿಸಿಕೊಂಡು, ಚಿಂತಿಸಲು ಗಣಿತ ಸಾಧನವಾಗಿದೆ.
ಇಂದಿನ ಪರಿಸ್ಥಿತಿ ಬುದ್ದಿಶಕ್ತಿಯ ಚಾಣಾಕ್ಷ ಸಂಘಟನೆಯ ಫಲವಾಗಿದೆ. ಕಡು ಹವಾಮಾನ ಮತ್ತು ಕಳ್ಳ ಕಾಕರ ಭಯದಿಂದ ತುಂಬಿದ್ದ ಬುದ್ಧಿಶಕ್ತಿಯ ಹಳೆಯ ಹೆದ್ದಾರಿಯ ಮೇಲೆ ಸುಸಜ್ಜಿತವಾದ, ಸುರಕ್ಷಿತವಾದ ರಥದ ಸವಾರಿಯಂತಿದೆ (ಸಮಾಜದ ವಿರೋಧ ಮತ್ತು ಸಾಧನಗಳ ಕೊರತೆಯ ನಡುವೆ ಸತ್ಯಶೋಧನೆಯಲ್ಲಿ ತೊಡಗಿದ್ದ ಗೆಲಿಲಿಯೊ ಮುಂತಾದವರ ಕಾಲವನ್ನು ಸುಸಜ್ಜಿತವಾದ ಹಾಗೂ ವ್ಯವಸ್ಥೆಯ ಸಹಭಾಗಿಯಾಗಿ ಬೆಳೆಯುತ್ತಿರುವ ಆಧುನಿಕ ವಿಜ್ಞಾನಕ್ಕೆ ಹೋಲಿಸಿದ್ದಾರೆ). ಜ್ಞಾನದ ದೃಷ್ಟಿಯಿಂದಂತೂ ಈ ದಕ್ಷತೆಯ ತೆವಲು ಹೀಗೇ ಕಾಣುತ್ತದೆ.
ಗಣಿತ ತೋರಿಸಿರುವ ಅಸಂಖ್ಯಾತ ವಿಕಲ್ಪಗಳು ನಮಗೆಷ್ಟು ಉಪಯುಕ್ತ ಎಂದು ಹಲವರು ಕೇಳಿದ್ದಾರೆ. ಅದೆಷ್ಟು ಜನರ ಜೀವನ, ಅವರ ಕ್ರಿಯಾಶೀಲತೆ, ಧನ, ಹಾಗೂ ಆಕಾಂಕ್ಷೆಗಳನ್ನು ಈ ದಕ್ಷತೆಯ ಹುಚ್ಚು ಕಬಳಿಸಿದೆಯೋ ಏನೋ! ಅದರ ಆಸೆಯಲ್ಲಿ ಇಂದೂ ಅದೆಷ್ಟು ಬಂಡವಾಳ ಪಣವಾಗಿದೆಯೋ; ನಾವು ಗಳಿಸಿರುವುದನ್ನು ನೆನಪಿಡಲು ಮತ್ತು ಕಳೆದುಕೊಂಡಿರುವದನ್ನು ಮರೆಯಲಾದರೂ ಇದರ ಮುಂದುವರಿಕೆ ಅವಶ್ಯವಾಗಿದೆ! ಹಲವರು, ಗಣಿತದ ಬಲದಿಂದ ಪಡೆದ ಸವಲತ್ತುಗಳ ಮೂಲಕ ಅದರ ಉಪಯುಕ್ತತೆಯನ್ನು ಗ್ರಹಿಸಲು ಹೋಗಿ ಸೋತಿದ್ದಾರೆ. ನಿಜವೇನೆಂದರೆ ಗಣಿತದ ಪ್ರಯೋಜನವನ್ನು ಅರಿಯುವದು ಇಂದು ಅಸಾಧ್ಯವಾಗಿದೆ. ಇದಕ್ಕೆ ಕಾರಣವೆಂದರೆ ನಮ್ಮ ಇಡೀ ಜನಾಂಗವೇ ಇದರ ಸಹಾಯದಿಂದ ಎದ್ದು ನಿಂತಿದೆ; ನಮಗೆ ಬೇರೇ ವಿಧಾನವೇ ತಿಳಿಯದು. ಗಣಿತದ ಗುರಿ ಎಂದು ತಿಳಿದದ್ದೆಲ್ಲವನ್ನೂ ಅದು ಸಲ್ಲಿಸಿರುವುದಲ್ಲದೆ, ಟೀಕೆಗೆ ಸಿಗದಷ್ಟು ವಿಶಾಲವಾಗಿ ಗೊತ್ತು ಗುರಿಯಿಲ್ಲದೆ ಬೆಳೆದಿರುವ ಗಣಿತ ಯಾವುದರ ಹೋಲಿಕೆಗೂ ಸಿಗದೆ, ಅಸಾಮಾನ್ಯವಾಗಿದೆ.
ಗಣಿತದ ಎಲ್ಲಾ ವಿಭಾಗಗಳೂ ಪ್ರಯೋಜನಾಕಾರಿ ಉದ್ದೇಶವುಳ್ಳವು ಎಂಬುದು ಖರೆಯಲ್ಲ. ನಿಜವೇನೆಂದರೆ ಕೇವಲ ತಾತ್ವಿಕವಾದ ಅಧ್ಯಯನದ ವಿಷಯಗಳು ಇಂದು ಗಣಿತದ ಬಹುಮತದಲ್ಲಿವೆ. ನಿರ್ದಿಷ್ಟ ಪ್ರಯೋಜನಾಕಾರಿ ಉದ್ದೇಶವಿಲ್ಲದೆ, ಅತಿವ್ಯಯವೋ ಮಿತವ್ಯಯವೋ ಎಂದು ಚಿಂತಿಸದೆ, ಛಲ ಮತ್ತು ಸತತ ಪರಿಶ್ರಮದಿಂದ ಬೆಳೆದಿರುವ ಗಣಿತದ ಈ ವಿಷಯಗಳ ನಡುವಿರುವ ಸಂಬಂಧವನ್ನು ಗಮನಿಸಿದಾಗಲೇ ನಮಗೆ ಅದರ ಇನ್ನೊಂದು ಮುಖ ಕಾಣಿಸುತ್ತದೆ. ಸಾಮಾನ್ಯರಿಗೆ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸರಳ ಲೆಕ್ಕಾಚಾರಗಳಿಗಿಂತ ಜಟಿಲವಾದದ್ದೇನೂ ಬೇಕಾಗುವದಿಲ್ಲ. ಯಂತ್ರತಂತ್ರಜ್ಞನಿಗೂ ತನ್ನ ಕೆಲಸಗಳನ್ನು ನಿಭಾಯಿಸಲು ಬ್ರಹ್ಮವಿದ್ಯೆಯ ಅವಶ್ಯಕತೆಯಿಲ್ಲ, ಸರಳವಾದ ತಾಂತ್ರಿಕ ಕೈಪಿಡಿ ಸಾಕು. ಭೌತಶಾಸ್ತ್ರಜ್ಞ ಕೂಡ ಸರಳವಾದ ಗಣಿತದ ತಂತ್ರಗಳಿಂದಲೇ ತನ್ನ ಕೆಲಸ ಮಾಡುತ್ತಾನೆ. ಆಕಸ್ಮಾತ್, ಅವರಿಗೇನಾದರೂ ವಿಶೇಷವಾದ ತಂತ್ರದ ಅವಶ್ಯಕತೆಯಿದ್ದಲ್ಲಿ, ಅವನು ತಾನೇ ಬಗೆಹರಿಸಿಕೊಳ್ಳಬೇಕು. ಗಹನವಾದ ಸಮಸ್ಯೆಗಳಲ್ಲಿ ಮುಳುಗಿರುವ ಗಣಿತಜ್ಞನಿಗೆ ಹೆಚ್ಚು ಪರಿಶ್ರಮವಿಲ್ಲದೆ ಬಗೆಹರಿಸಬಹುದಾದ ಅಂತಹ ಸಮಸ್ಯೆಗಳು ಸವಾಲೆನಿಸುವದಿಲ್ಲ, ಆಸಕ್ತಿಯೂ ಇರುವುದಿಲ್ಲ. ಹೀಗಾಗಿ ಇವತ್ತು ಪ್ರಯೋಜನಾಕಾರಿಯಾಗುವ ಅನೇಕ ಗಣಿತದ ತಂತ್ರಗಳಲ್ಲಿ ಪರಿಣಿತರು ಗಣಿತಜ್ಞರಲ್ಲ! ಬದಲಾಗಿ ಮೂಲತಹ ಬೇರೆ ವಿಷಯಗಳಲ್ಲಿ (ಭೌತಶಾಸ್ತ್ರ, ತಂತ್ರಜ್ಞಾನ ಇತ್ಯಾದಿ) ತರಭೇತಿ ಪಡೆದವರು. ಆದರೆ, ಇವುಗಳ ಪಕ್ಕದಲ್ಲೇ, ಇತರರ ಊಹೆಗೂ ನಿಲುಕದ, ಕೇವಲ ಗಣಿತಜ್ಞರಿಗೆ ಸಾಕ್ಷಾತ್ಕಾರವಾದ ಜಗತ್ತೊಂದಿದೆ: ಕೀಳಾದ ಸ್ನಾಯುಗಳ ಗುಡಿಸಿಲಿನ ಪಕ್ಕಕ್ಕೇ ಬೃಹತ್ತಾದ ಚಿತ್ತದ-ಮಹಲು ಎದ್ದು ನಿಂತಿದೆ. ಈ ಮಹಲಿನಲ್ಲಿ ಗಣಿತಜ್ಞ ಒಬ್ಬಂಟಿಯಾಗಿ ತನ್ನ ಕೆಲಸದಲ್ಲಿ ಮಗ್ನನಾಗಿರುತ್ತಾನೆ. ಅವನ ಕೋಣೆಯಿಂದ ಹೊರಜಗತ್ತಿಗೆ ಕಿಟಕಿಗಳೂ ಇಲ್ಲ. ಇರುವ ಕಿಟಕಿಗಳು ಅವನ ಕೆಲಸಕ್ಕೆ ಸಂಬಂಧವಿರುವ ಕೆಲವು ಗಣಿತಜ್ಞರ ಕೋಣೆಗೆ ತೆರೆಯುತ್ತವೆ. ಹೀಗಾಗಿ ಈ ಮಹಲಿನಲ್ಲಿರುವವರಲ್ಲಿ ಇಡೀ ಮಹಲಿನ ಅಂದಾಜಿರುವ ಮೇಧಾವಿಗಳೂ ತೀರ ವಿರಳ (ಎಲ್ಲಾ ಕೋಣೆಗಳನ್ನು ಹೊಕ್ಕಿ, ತಮ್ಮೊಳಗೇ ಮಗ್ನರಾಗಿರುವರೊಡನೆ ಸಂವಾದಿಸಲಾಗದೇ ಯಾವುದೋ ಮೂಲೆಯಲ್ಲಿ ಸುಧಾರಿಸಿಕೊಳ್ಳುತ್ತಿರಬಹುದು). ಹೀಗಾಗಿ ಗಣಿತಜ್ಞ ಅವನಿಗಲ್ಲದೆ ಬೆರಳಲ್ಲೆಣಿಸುವಷ್ಟು ಗಣಿತಜ್ಞರಿಗೆ ಬಿಟ್ಟು ಉಳಿದವರಿಗೆ ಹೊರತಾಗಿರುವ ವಿಶಿಷ್ಟ ತಂತ್ರಗಳ ಪರಿಣಿತ. ತನ್ನ ಕೆಲಸ ಮುಂದೆಂದಾದರೂ ಹೇರಳ ಆರ್ಥಿಕ ಪ್ರಯೋಜನವಿರುವ ಸಾಧನವಾಗಲೆಂಬ ಆಸೆಯಿದ್ದರೂ, ಆ ಆಸೆ ಅವನ ಸ್ಫೂರ್ಥಿಯಲ್ಲ; ಅವನ ಪರಿಶ್ರಮವೆಲ್ಲಾ ಅವನು ನಂಬಿರುವ ಸತ್ಯದ ಗುರಿಯೆಡೆಗೇ ಆಗಿದೆ. ಅದು ಹೊರಜಗತ್ತಿನಲ್ಲಿ ಅತಿಪ್ರಯೋಜನಾಕಾರಿಯಾಗಬಹುದು; ಆದರೆ, ಅವನ ಸಂಪೂರ್ಣ ಅರ್ಪಣೆ ಮತ್ತು ಛಲಭರಿತ ಭಕ್ತಿಯಿಲ್ಲದೆ ಇದು ಸಾಧ್ಯವಿಲ್ಲ.
ಇಂದು ಉಳಿದಿರುವ ಅಪ್ಪಟ ತಾರ್ಕಿಕತೆಯ ಭಂಡ ಐಷಾರಾಮಗಳಲ್ಲಿ ಗಣಿತಶಾಸ್ತ್ರವೂ ಒಂದು. ಟೈ ಅಥವಾ ಅಂಚೆಚೀಟಿಗಳ ಸಂಗ್ರಹಕಾರರಂತೆ ಶಾಸ್ತ್ರೀಯ ಅಧ್ಯಯನಗಳಲ್ಲಿ ನಿರತವಾಗಿರುವವರೂ ಪ್ರಾಯಶಃ ತಮ್ಮ ಕೆಲಸದ ಪ್ರಯೋಜನಗಳ ಬಗ್ಗೆ ಚಿಂತಿಸದೆ ತಮ್ಮ ಕೆಲಸದಲ್ಲೇ ಮಗ್ನರಾಗಿರುತ್ತಾರೆ. ಆದರೆ ಇವು ನಮ್ಮ ಜೀವನದ ಗಂಭೀರ ವ್ಯವಹಾರಗಳಿಂದ ದೂರವಿರುವ ನಿರುಪದ್ರವಿ ಚಂಚಲತೆಗಳು. ಆದರೆ, ಈ ಗಂಭೀರತೆಯ ಆವರಣದಲ್ಲೇ ಮಾನವ ಇತಿಹಾಸದ ಅತ್ಯಂತ ಮನೋರಂಜಿತವಾದ ಹಾಗೂ ಸಾಹಸಮಯವಾದ ಪ್ರಸಂಗಗಳಲ್ಲಿ ಗಣಿತಶಾಸ್ತ್ರದ ಇರುವಿದೆ. ಒಂದು ಸಣ್ಣ ಉದಾಹರಣೆಯೊಂದನ್ನು ಕೊಡುತ್ತೇನೆ: ನಾವು ಇಂದು ಹೆಚ್ಚಿನ ಅಂಶ ಗಣಿತದ ಫಲಾಂಶಗಳ ಆಧಾರದ ಮೇಲೆಯೇ ಜೀವಿಸುತ್ತಿದ್ದರೂ, ಇದರ ಬಗ್ಗೆ ಗಣಿತಶಾಸ್ತ್ರ ನಿರ್ಲಿಪ್ತವಾಗಿರುವದು. ಗಣಿತದ ಸಹಾಯದಿಂದ ನಾವು ನಮ್ಮ ಆಹಾರವನ್ನು ಮಿತವ್ಯಯದಿಂದ ಬೇಯಿಸಿಕೊಳ್ಳಬಹುದು, ನಮ್ಮ ಮನೆಗಳನ್ನು ಕಟ್ಟಬಹುದು ಅಲ್ಲದೆ ನಮ್ಮ ವಾಹನಗಳನ್ನು ಚಲಾಯಿಸಬಹುದು. ಕರಚಳಕದಿಂದ ಮಾಡಿದ ಕೆಲವೇ ಕೆಲವು ಫರ್ನಿಚರಗಳು, ಬಟ್ಟೆಗಳು, ಚಪ್ಪಲಿಗಳು ಮತ್ತು ಮಕ್ಕಳನ್ನು ಬಿಟ್ಟರೆ ಉಳಿದೆಲ್ಲವೂ ಗಣಿತಾಂಶವುಳ್ಳ ಆವಿಷ್ಕಾರಗಳಿಂದ, ಗಣಿತದ ಲೆಕ್ಕಾಚಾರಗಳ ಬಳುವಳಿಗಳಾಗಿವೆ. ನಮ್ಮ ಸುತಮುತ್ತಲಿರುವ, ಹುಚ್ಚಾಗಿ ತಿರುಗುವ ಆಧುನಿಕ ಜಗತ್ತಿನ ಎಲ್ಲ ಆಗುಹೋಗುಗಳು ಗಣಿತದ ಫಲಸ್ವರೂಪವೇ ಅಸ್ತಿತ್ವಕ್ಕೆ ಬಂದಿರುವದಲ್ಲದೆ, ಆ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅದನ್ನು ಅರ್ಥೈಸಿಸಲು ನಾವು ಗಣಿತದ ಮೊರೆಯೇ ಹೋಗಬೇಕಾಗಿದೆ; ಅದೂ ಜಗತ್ತಿನ ಹಲವು ಸಂಗತಿಗಳ ಬಗ್ಗೆ ಗಣಿತ ತಳೆದಿರುವ ನಂಬಿಕೆಗಳ ಆಧಾರಗಳ ಮೇಲೆ. ಮೂಲ ಗಣಿತಜ್ಞರು ನಿರ್ಣಯಗಳಿಗೆ ಬರಲು, ಲೆಕ್ಕಾಚಾರಗಳು ಸರಳವಾಗುವುದಲ್ಲದೆ, ಹೊಸ ಫಲಿತಾಂಶಗಳನ್ನು ಪ್ರತಿಪಾದಿಸಿ ಸಮರ್ಥಿಸಲು ಸಾಧ್ಯವಾಗುವಂತೆ, ಪ್ರಶ್ನೆಗೊಳಗಾಗದ ಕೆಲವು ಮೂಲಭೂತ ನಂಬಿಕೆಗಳನ್ನು ಕೊಟ್ಟರು; ಇವುಗಳನ್ನು ಉಪಯೋಗಿಸಿ ಭೌತಶಾಸ್ತ್ರಜ್ಞರು ತಮ್ಮ ವಿಷಯವನ್ನು ಬೆಳೆಸಿದರು, ಕೊನೆಯಲ್ಲಿ ಬಂದ ತಂತ್ರಜ್ಞ ಈ ಜ್ಞಾನಗಳಿಗೆ ಹೊಸ ಲೆಕ್ಕಾಚಾರಗಳನ್ನು ಸೇರಿಸಿ ಯಂತ್ರಗಳನ್ನು ಆವಿಷ್ಕರಿಸಿದ. ಇವೆಲ್ಲವೂ ಸೇರಿ ಜಗತ್ತಿನಲ್ಲಿರುವದಕ್ಕೆಲ್ಲ ಒಂದು ಸುಂದರವಾದ ಅಸ್ತಿತ್ವ ಕೊಟ್ಟಾಗ, ಇದ್ದಕ್ಕಿದ್ದಂತೆ, ತಮ್ಮೊಳಗೇ ನಿರತವಾಗಿರುವ ಗಣಿತಜ್ಞರು ಇವುಗಳನ್ನೆಲ್ಲಾ ಹೊತ್ತಿರುವ ಸ್ವಯಂಸಿದ್ಧವೆಂದು ನಂಬಿದ್ದ ಬುನಾದಿಯಲ್ಲಿ ಸರಿಪಡಿಸಲಾಗದ ದೋಷ ಕಂಡುಹಿಡಿದರು. ಈ ಭವ್ಯ ಜ್ಞಾನದ ಮಹಲಿನ ತಡಿಪಾಯವನ್ನು ಶೋಧಿಸಿದ ಅವರು ಈ ಮಹಲು ಗಾಳಿಯ ಮೇಲೆ ನಿಂತಿದೆ ಎಂಬುದನ್ನು ಸಾಬೀತುಪಡಿಸಿದರು. ಆದರೆ ಯಂತ್ರಗಳು ತಮ್ಮ ಕೆಲಸ ಮಾಡುತ್ತಿದ್ದವು! ಹೀಗಾದರೆ ನಮ್ಮ ಅಸ್ತಿತ್ವವನ್ನು ನಾವು ಒಂದು ನೀರಸ ಭೂತವೆಂದೇ ಪರಿಗಣಿಸಬೇಕು: ನಾವು ಜೀವಿಸುವ ಜಗತ್ತು ಈ ದೋಷದ ಆಧಾರವಿಲ್ಲದೆ ಎದ್ದೇ ನಿಲ್ಲುತ್ತಿರಲಿಲ್ಲ! ಇಂತಹ ವಿಸ್ಮಯಭರಿತ ದಾರ್ಶನಿಕ ಕಲ್ಪನೆಗಳ ಅನುಭವ ಗಣಿತಜ್ಞರಿಗಲ್ಲದೆ ಬೇರೆ ಯಾರಿಗೂ ಸಾಧ್ಯವಿಲ್ಲ.
ಗಣಿತಜ್ಞರು ಈ ಮಟ್ಟದ ಬೌದ್ಧಿಕ ಹಗರಣವನ್ನು ಮಾದರಿಯಾದ ರೀತಿಯಲ್ಲಿ ನಿಭಾಯಿಸಿದ್ದಾರೆ. ಗಣಿತದ ಆಧಾರದ ಮೇಲೆ ಕೆಲವು ಭೌತಶಾಸ್ತ್ರಜ್ಞರು ಸ್ಥಳ ಮತ್ತು ಸಮಯದ ಇರುವನ್ನೇ ಅಲ್ಲಗಳೆಯುವ ಪಣ ತೊಟ್ಟಿದ್ದಂತಹ ಅನೇಕ ಉದಾಹರಣೆಗಳನ್ನು ನಾನು ಸೇರಿಸಬಹುದು. ಇಂತಹ ಬಾನುಗಡಿಯನ್ನು ಅವರು ಚಿಂತಾಜನಕವಾದ ಮುಸುಕಿನಲ್ಲಿ ಮಾಡುವದಿಲ್ಲ. ಕೆಲವೊಮ್ಮೆ ತತ್ವಜ್ಞಾನಿಗಳು ಹಾಗೆ ಮಾಡುತ್ತಾರೆ (ಆದರೆ ಉಳಿದವರು `ಅವರ ಕಸುಬೇ ಹಾಗೆ' ಎಂದು ನಿರ್ಲಕ್ಷಿಸುತ್ತಾರೆ). ಗಣಿತಜ್ಞರು ಹಾಗಲ್ಲ. ಅವರು, ಇಂಧನವಾಹನಗಳಷ್ಟೇ ಸತ್ಯವೆನಿಸುವ, ನಮ್ಮೆದುರಿಗೇ ಅಧಿಕೃತಗೊಂಡು ಭೀಕರವಾಗಿ ಬೆಳೆದಿರುವ ತರ್ಕಗಳ ಆಧಾರಗಳ ಮೂಲಕ ತಮ್ಮ ಕೆಲಸವನ್ನು ನಿಭಾಯಿಸುತ್ತಾರೆ. ಗಣಿತಜ್ಞರು ಎಂತಹವರು ಎಂಬುದಕ್ಕೆ ಇಷ್ಟೇ ಸಾಕು.
enlightenment ನಂತರ (ಯುರೋಪಿನಲ್ಲಿ ನಡೆದ) ಉಳಿದ ನಾವೆಲ್ಲರೂ ನಮ್ಮ ಧೈರ್ಯವನ್ನು ಕಳೆದುಕೊಂಡೆವು. ಸಣ್ಣಪುಟ್ಟ ವಿಫಲತೆ ನಮ್ಮನ್ನು ತರ್ಕದಿಂದ ದೂರಸರಿಸಲು ಸಾಕಾಯಿತು; ಕೆಲವು ಗೊಡ್ಡು ಹುಂಬರು ಅಲೆಂಬರ್ಟ್ ಅಥವಾ ಡಿಡೆರೊಟ್-ರಂತಹ ಧೀಮಂತಿಕೆ ಮತ್ತು ನವ್ಯ ಕಲ್ಪನೆಗಳನ್ನು ಒಗ್ಗೂಡಿಸಿಕೊಂಡ ಬರಹಗಾರರನ್ನು ಕೇವಲ ವಿಚಾರವಾದಿಗಳೆಂದು ಅವಹೇಳಿಸಿದರೂ ಸುಮ್ಮನಿರುತ್ತೇವೆ. ಚಿಂತನೆಯ ಹೊರತಾಗಿ- ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಉದಾಹರಣೆಗಳಿರಬುಹುದು- ಕೇವಲ ಭಾವನೆಗಳು ಬೋರ್ಗಲ್ಲಿನಷ್ಟೇ ದಟ್ಟವಾಗಿರುತ್ತವೆ ಎಂಬುದನ್ನು ಮರೆತು ಭಾವನೆಗಳ ಪರವಾಗಿ ಹಾಗೂ ತರ್ಕದ ವಿರುದ್ಧ ಡಂಗುರ ಬಾರಿಸುತ್ತೇವೆ. ಹೀಗೆ ನಾವು ಕಲ್ಪನಾತ್ಮಕವಾದ ಸಾಹಿತ್ಯವನ್ನು ಎಷ್ಟರ ಮಟ್ಟಿಗೆ ನಾಶಗೊಳಿಸಿದ್ದೇವೆಂದರೆ, ಎರಡು ಜರ್ಮನ್ ಕಾದಂಬರಿಗಳನ್ನು ಒಂದರ ಹಿಂದೊಂದು ಓದಿದರೆ ಮೈಗೂಡಿದ ಜಿಡ್ಡನ್ನು ಕರಗಿಸಲು ಪಲ್ಲಟ-ಕಲನದ ಸಮೀಕರಣಗಳನ್ನು (differential equations) ಬಿಡಿಸಬೇಕು.
ಗಣಿತಜ್ಞರು ಅವರ ಅಧ್ಯಯನ ಕ್ಷೇತ್ರದ ಹೊರಗೆ ಅತಿಸಾಮಾನ್ಯವಾದ ಅಥವಾ ಹಾಸ್ಯಾಸ್ಪದವಾದ ಧೋರಣೆಯುಳ್ಳವರೆಂದಾಗಲೀ ಅಥವಾ ಅವರೇ ತಮ್ಮ ಯುಕ್ತಿಯನ್ನು ಮೂಲೆಗಟ್ಟಿದವರೆಂದಾಗಲೀ ದೂಷಿಸುವ ಅಗತ್ಯವಿಲ್ಲ. ಇದು ಅವರ ಕ್ಷೇತ್ರವಲ್ಲ್ಲ. ಆದರೆ ನಾವು ನಮ್ಮ ಕ್ಷೇತ್ರಗಳಲ್ಲಿ ಅವರನ್ನು ಅನುಸರಿಸುವ ಅಗತ್ಯವಿದೆ. ಇದರಲ್ಲೇ ಅವರ ಅಸ್ತಿತ್ವದ ಮಾದರಿ ಮತ್ತು ನಾವು ಕಲಿಯಬೇಕಾದ ಪಾಠವಿರುವದು. ಭವಿಷ್ಯದ ಭೌದ್ಧಿಕತೆಯ ಕುರುಹುಗಳು ಅವರಲ್ಲಿವೆ.
ನಾನು ಲಘುವಾಗಿ ಗಣಿತದ ಗುಣದ ಬಗೆಗೆ ಆಡಿರುವ ಮಾತುಗಳ ಹೊರತಾಗಿಯೂ ಗಂಭೀರವಾದದ್ದೇನಾದರೂ ಹೊರಹೊಮ್ಮಿದರೆ, ನನ್ನ ಕೊನೆಯ ಮಾತುಗಳು ಅನಿರೀಕ್ಷಿತವಾಗಿರಲಾರವು. ನಮ್ಮ ಕಾಲದಲ್ಲಿ ಮಾಯವಾಗುತ್ತಿರುವ ಸಂಸ್ಕೃತಿಯ ಬಗೆಗೆ ಅನೇಕರು ದೂರುತ್ತಿರುತ್ತಾರೆ. ಹಾಗೆನ್ನುವುದರ ಅರ್ಥ ಹಲವಾರಿರಬಹುದು, ಮುಖ್ಯವಾಗಿ: ಧಾರ್ಮಿಕವಾಗಿ, ಸಾಮಾಜಿಕ ಪದ್ದತಿಗಳಾಗಿ, ಅಥವ ಕಲೆಗಳ ಮೂಲಕ ಸಂಸ್ಕೃತಿ ಎಲ್ಲವನ್ನೂ ಒಗ್ಗೂಡಿಸುತ್ತದೆ. ಸಾಮಾಜಿಕ ಪದ್ದತಿಗಳಿಗೆ ನಾವು ಮಹಳ ಮಂದಿಗಳಾಗಿದ್ದೇವೆ. ಧಾರ್ಮಿಕವಾಗಿ ಒಗ್ಗೂಡಿಸಲೂ ನಾವು ಬಹುಸಂಖ್ಯೆಯಲ್ಲಿದ್ದೇವೆಂಬುದನ್ನು ಇಲ್ಲಿ ಘೋಷಿಸಬಹುದೇ ಹೊರತು ಸಮರ್ಥಿಸಲು ಸಾಧ್ಯವಿಲ್ಲ. ಕಲೆಗಳ ಬಗ್ಗೆ ಯೋಚಿಸಿದರೆ, ತನ್ನ ಲೇಖಕರನ್ನು ಪ್ರೀತಿಸದ ಮೊದಲ ಕಾಲಮಾನವಿದು. ಹೀಗಿರುವಾಗಲೂ ನಮ್ಮ ಕಾಲದಲ್ಲಿ ನಡೆಯುತ್ತಿರುವಷ್ಟು ಧಾರ್ಮಿಕ ಹಾಗೂ ಬೌದ್ಧಿಕ ಪ್ರಕ್ರಿಯೆಗಳು ಹಿಂದೆಂದೂ ನಡೆದಿರಲಿಲ್ಲ, ಮನಸ್ಸುಗಳ ಮತ್ತು ಚೈತನ್ಯಗಳ ಭಾವೈಕ್ಯ ಹಿಂದೆಂದೂ ಆಗದಷ್ಟು ನಡೆದಿದೆ. ಇವೆಲ್ಲ ಕೇವಲ ಜ್ಞಾನಕ್ಕಾಗಿ ಎಂಬ ನಿಲುವ ತಳೆದರೆ ಮೂರ್ಖತನವಾದೀತು. ಯಾಕೆಂದರೆ ಚಿಂತನೆ ಯಾವಾಗಿನಿಂದಲೂ ಮುಖ್ಯ ಉದ್ದೇಶವಾಗಿದೆ. ಗಹನತೆ, ಎದೆಗಾರಿಕೆ, ಮತ್ತು ಸೃಜನಶೀಲಗಳ ಮೇಲೆ ತನ್ನ ಸ್ವಂತಿಕೆಯನ್ನು ಜತನಿಸುವ ಚಿಂತನೆ ಈಗಲೂ ಕೇವಲ ತಾರ್ಕಿಕ ಮತ್ತು ವೈಜ್ಞಾನಿಕ ಮನಗಳಿಗೆ ಮಾತ್ರ ಹಂಗಾಮಿಯಾಗಿ ಒಲಿದಿದೆ. ಆದರೆ, ಈ ಧೀಮಂತಿಕೆಗೆ ತನ್ನ ಸುತ್ತಮುತ್ತಲಿರುವದನ್ನೆಲ್ಲ ಕಬಳಿಸುವ ಚಾಳಿಯಿದೆ; ಆದರೆ, ಈ ಧೀಶಕ್ತಿಗೆ ಭಾವನೆಗಳ ಆಧಾರ ಸಿಗುತ್ತಿದ್ದಂತೆಯೇ ಚೈತನ್ಯವಾಗುತ್ತದೆ. ಈ ದಿಶೆಯಲ್ಲಿ ಹೆಜ್ಜೆಯಿಡುವದು ಲೇಖಕರ ಗುರಿಯಾಗಿದೆ. ಇದನ್ನು ಸಾಧಿಸಲು ಅವರು ಯಾವುದೇ ವಿಧಾನದ ಮೊರೆಹೋಗುವ ಅವಶ್ಯಕತೆಯಿಲ್ಲ- ಅದರಲ್ಲೂ ಮನಶ್ಯಾಸ್ತ್ರ ಅಥವಾ ಅದರಂತವುಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಹೀಗಿದ್ದೂ ಲೇಖಕರು ತಮ್ಮ ಪರಿಸ್ಥಿತಿಯಲ್ಲಿ ನಿಸ್ಸಹಾಯಕರಾಗಿದ್ದಾರೆ, ತಮ್ಮ ಸಮಾಧಾನಕ್ಕೋಸ್ಕರ ಉಳಿದವರನ್ನು ದೂಷಿಸಿಕೊಳ್ಳುತ್ತಾರೆ; ನಮ್ಮ ಸಮಕಾಲೀನರಿಗೆ ತಮ್ಮ ಬೌದ್ಧಿಕತೆಯನ್ನು ಅವರ ಬದುಕನ್ನು ನಿರೂಪಿಸಿರುವ ಬೌದ್ಧಿಕತೆಯ ಮಟ್ಟಕ್ಕೇರಿಸುವ ದಾರಿ ತಿಳಿಯದಿದ್ದರೂ ತಮ್ಮ ಗ್ರಹಿಕೆಯಡಿಗೆ ಅಡಗಿರುವುದೇನೆಂಬುದರ ಬಗ್ಗೆ ಅಂದಾಜಿದೆ.
2 Comments:
ವಿನಾಯಕರೆ,
ಈ ಲೇಖನ ಕನ್ನಡದಲ್ಲೇ ಮೊದಲು ಬರೆದದ್ದು ಎಂದರೆ ನಂಬುವಂತಿದೆ ಎನ್ನುವುದು ತಮಗೆ ಹೆಗ್ಗಳಿಕೆ. ಇದೇ ತೆರನಾದ ಮೂಲಭೂತವಾಗಿ ಮುಖ್ಯವಾದ ಅನುವಾದಗಳನ್ನು ತಾವು ಮುಂದುವರೆಸಬೇಕಾಗಿ ಪ್ರಾರ್ಥಿಸುತ್ತೇನೆ.
ಈ ಲೇಖನ ಓದುತ್ತಲೇ ಕೆ.ವಿ.ಸುಬ್ಬಣ್ಣನವರ ಶ್ರೇಷ್ಠತೆಯ ವ್ಯಸನ ಲೇಖನವೂ ನೆನಪಾಯಿತು.
ಇಂತಿ
ಶಿವು
ಶಿವು ಮತ್ತು ರಾಘವೇಂದ್ರ,
ಮೆಚ್ಚುಗೆಗೆ ಧನ್ಯವಾದಗಳು. ಸಮಯ ಸಿಕ್ಕಾಗಲೆಲ್ಲ, ನನಗೆ ಇಷ್ಟವಾದ ಬೇರೆ ಭಾಷೆಯ ಲೇಖನಗಳನ್ನು ಅನುವಾದಿಸಿ ಬ್ಲಾಗ್ ಮಾಡುತ್ತೇನೆ. ಹಾಗೆಯೇ ನನ್ನ ಆಸಕ್ತಿಯ ವಿಷಯಗಳ ಬಗ್ಗೂ ಬರೆಯಲು ಪ್ರಯತ್ನಿಸುತ್ತೇನೆ.
-- ವಿನಾಯಕ
Post a Comment
<< Home