ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಬೆನೆಗಲ್-ರ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು

ಸುದರ್ಶನರು ತಮ್ಮ ಬ್ಲಾಗನಲ್ಲಿ ಬೆನೆಗಲ್ ಅವರ ಬಗ್ಗೆ ಬರೆದಿದ್ದಾರೆ. ನೇರವಾಗಿ ದೂಷಿಸದಿದ್ದರೂ, ಅವರಿಗೆ ಏನೋ ಅಸಮಾಧಾನವಿದೆಯೆಂದು ಅನಿಸಿತು. ಅವರ ಬ್ಲಾಗಿಗೆ ಪ್ರತಿಕ್ರಯಿಸಿದ ಶಿವು ಅವರು ತಮ್ಮ ಅಸಮಾಧಾನವನ್ನು ಜೋರಾಗೆ ತೋಡಿಕೊಂಡಿದ್ದಾರೆ. ಯಾರಿಗೆ (ಬೆನೆಗಲ್ ಹಿಡಿದು) ಏನೇ ಅನಿಸಲಿ ತಮಗಂತೂ ತಮಗೆ ಸಂವೇದನಾಶೀಲನೆನ್ನಿಸುವ ಬೆನೆಗಲ್ ಬೇಕಾಗಿದೆ ಎಂದು ಹೇಳಿದ್ದಾರೆ. ಶಿವು ಮತ್ತು ಸುದರ್ಶನ್ ಇಬ್ಬರೂ ಸೂಕ್ಷ್ಮರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಂವೇದನೆ ಎಂದರೆ ಏನು ಎಂಬುದನ್ನು ಅರಿತಿದ್ದಾರೆಯೆ ಎಂಬ ಪ್ರಶ್ನೆ ನನ್ನೆದುರು ಬಂದಿದೆ. ಬರೀ ನಮ್ಮಿಂದಲೇ ನಾವು ಸಂವೇದನಾಶೀಲರಾಗಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ, ಪ್ರಸ್ತುತದ ಪ್ರವಾಹದ ದಿಕ್ಕಿಗೆ ಮತ್ತು ನಮ್ಮ ಸುತ್ತಲಿರುವ ಜನರು, ಪ್ರಾಣಿಗಳು, ಮತ್ತು ಪರಿಸರಕ್ಕೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎಂಬುದರಲ್ಲಿ ಅಡಗಿದೆ ನಮ್ಮ ಸಂವೇದನೆ. ನಮ್ಮ ಪ್ರತಿಕ್ರಿಯೆಗಳು ಜೀವನದ ಬಗೆಗಿನ ಖಚಿತವಾದ ಧೋರಣೆಯಿಂದ ಪ್ರೇರಿತವಾಗಿರದಿದ್ದರೆ, ಸಂವೇದನಾಶೀಲರಾಗುವ ಮಾರ್ಗ ಸುಲಭವಾಗಬಹುದು.

ಸಿನೇಮಾ ಮೊದಲು ಕಥನದ ಮಾಧ್ಯಮ. ನಾವು ಇದನ್ನು ಅರಿಯಬೇಕು. ದೂರದರ್ಶನ ಸಾಮಾಜಿಕ ಶಿಕ್ಷಣಕ್ಕೆ ನಾಂದಿ ಕೊಡುತ್ತದೆ ಎಂದು ನಂಬಿದವರು ತಮ್ಮ ತಪ್ಪನ್ನು ಅರಿತಿರಬಹುದು. ಹಾಗೆಯೇ, ಅಂತರ್ಜಾಲವೂ ಸಂವೇದನಾಶಿಲ ಮಾರ್ಗಕ್ಕೆ ನಾಂದಿ ಕೊಡುತ್ತದೆ ಎಂದು ನಂಬಿರುವವರೂ ಇದ್ದಾರೆ. ಅವರ ನಂಬಿಕೆ ಹುಸಿಯಾಗದಿರಲಿ ಎಂದು ಆಶಿಸುತ್ತೇನೆ. ಸಿನೇಮಾ ಕಥನದ ಮಾಧ್ಯಮ. ನಾಟಕ, ಕಾದಂಬರಿಗಳು ಹೇಗೆ ಕಥನದ ಮಾಧ್ಯಮಗಳೋ ಹಾಗೆ. ಸಿನೇಮಾಕ್ಕೆ ತನ್ನದೇ ಆದ ಸವಲತ್ತುಗಳಿವೆ, ಹಾಗೆಯೇ ತನ್ನದೇ ಆದ ಕೊರತೆಗಳೂ ಇವೆ. ರಾಮಾಯಣದ ಹನುಮಂತನ ಸಾಗರೋಲ್ಲಂಘನವೇ ಆಗಲಿ, ಲಂಕಾದಹನವೇ ಆಗಲಿ ಹೇಳಲು, ಕೇಳಲು, ಬರೆಯಲು, ಓದಲು ರೋಮಾಂಚನವಾದ ಪ್ರಸಂಗಗಳು. ನಾಟಕದಲ್ಲೂ ಆ ರೋಮಾಂಚನವನ್ನು ತರಬಹುದು. ಆದರೆ, ಚಲನ ಚಿತ್ರ ಮಾಧ್ಯಮದಲ್ಲಿ ಅದೆಷ್ಟು ಕಷ್ಟ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಈ ಮಾಧ್ಯಮವನ್ನು ಹೇಗೆ ಉಪಯೋಗಿಸಿಕೊಂಡಿದೆ ಎಂಬುದರಲ್ಲೇ ಚಿತ್ರದ ಗುಣವಡಗಿದೆ.

ಮತ್ತೊಂದು ವಿಷಯ. ಪುಸ್ತಕಗಳು ಎಂಬ ಆಧಾರದ ಮೇಲೆ ನಾವು ಸಿಡ್ನಿ ಶೆಲ್ಡನ್ ಅವರ ಪುಸ್ತಕಗಳನ್ನು ಮತ್ತು ನೈಪಾಲರ ಪುಸ್ತಕಗಳನ್ನೂ ಹೋಲಿಸುವದು ಸರಿಯೆ? ಶೆಲ್ಡನ್-ರ ಜನಪ್ರಿಯತೆ ತನಗೆ ಸಿಗುವದಿಲ್ಲ ಎಂದು ಗೊತ್ತಿದ್ದೇ ನೈಪಾಲರು ಬರೆಯಲು ಶುರುಮಾಡುವದಲ್ಲವೆ? ನೈಪಾಲರನ್ನು ನಾವು ಸಾಹಿತಿಗಳಾಗಿ ವಿಮರ್ಶಿಸಬೇಕು. ಚಲನಚಿತ್ರ ಮಾಧ್ಯಮ ಕಲೆಯಾದರೆ, ತಾವು ಕಲಾಕಾರ ಎಂಬ ರೀತಿಯಲ್ಲಿ ನಡೆದುಕೊಂಡು ಬಂದ ಬೆನೆಗಲ್-ರನ್ನು ಕಲಾಕಾರರನ್ನಾಗಿ ವಿಮರ್ಶಿಸಬೇಕು. ಒಬ್ಬ ಕಲಾಕಾರನ ಗುಣ ಅವನ ಸಾಮಾಜಿಕ ಕಾಳಜಿಯಿಂದಾಗಲಿ ಅಥವ ಅವನ ಕೃತಿಗಳಲ್ಲಿ ಕಾಣಬರುವ ಕಾಳಜಿಯಿಂದಾಗಲೀ ಬರುವದಿಲ್ಲ. ಕುಮಾರ ಗಂಧರ್ವರ ಹಾಡು ಕೇಳಬೇಕಾದರೆ ನಿಮಗೆ ಯಾವ ಸಾಮಾಜಿಕ ಕಾಳಜಿ ಜಾಗ್ರತವಾಗುತ್ತದೆ? ನನಗಂತೂ ಕುಮಾರರ ವಿಶಿಷ್ಟ ಪ್ರಪಂಚಕ್ಕೆ ಪ್ರವೇಶ ದೊರಕುತ್ತದೆ. ಅದೇ ನನ್ನ ಆನಂದ. ಕಲಾಕಾರ ನಮ್ಮನ್ನು ಅವನ ವಿಶಿಷ್ಟ ಲೋಕಕ್ಕೆ ಕರೆದೊಯ್ದರೆ ಗೆದ್ದ. ಹಾಗೆಂದು ಎಲ್ಲ ಕಲಾಕೃತಿಗಳೂ ಸಾಮಾಜಿಕ ಕಾಳಜಿಯಿಂದ ಮುಕ್ತವಾದವು ಎಂದು ನಾನು ಹೇಳುತ್ತಿಲ್ಲ. ಅನೇಕ ವಿಶಿಷ್ಟ ಕೃತಿಗಳು ಸಾಮಾಜಿಕ ಕಾಳಜಿಯಿಂದಲೇ ಅಂಕುರಗೊಂಡವು ಎನ್ನುವದು ಮತ್ತು ಅನೇಕ ವಿಶಿಷ್ಟ ಕೃತಿಗಳು ನಮ್ಮಲ್ಲಿ ಸಾಮಾಜಿಕ ಕಾಳಜಿಯನ್ನು ಜಾಗೃತಗೊಳಿಸುತ್ತವೆ ಎಂಬುದು ನಿರ್ವಿವಾದ. ಕಂಬಾರರ `ಚಕೋರಿ' ಎಷ್ಟು ಕಲಾತ್ಮಕವೋ ಅಷ್ಟೇ ಯೋಚನಾ ಪ್ರಚೋದನೀಯವಾಗಿದೆ. ನಮಗೆ ಯಾವುದು ವಿಶಿಷ್ಟ? ಅದು ಸೃಷ್ಟಿಸುವ ಮನೋರಂಜಿತ ಲೋಕವೋ, ಅಧ್ಭುತವಾದ ಕಥೆಯೋ, ಉತ್ಕೃಷ್ಟವಾದ ಕಾವ್ಯಾತ್ಮಕತೆಯೋ, ಅದರಿಂದ ಬರುವ ಸಾಮಾಜಿಕ ಅರಿವೆಯೋ? ಉತ್ತರ ಪ್ರತಿಯೊಬ್ಬರಿಗೂ ಬೇರೆಯಿರಬಹುದು. ಯಾವುದೋ ಒಂದು ಅಂಶ ಉಳಿದೆಲ್ಲವುದಕ್ಕಿಂತ ಮುಖ್ಯ ಎಂಬ ನಂಬಿಕೆಯಿಂದ ನಾವು ಪ್ರತಿಕೃಯಿಸುವದು ಅನುಚಿತವಾಗಬಹುದು.

ಸಿನೇಮಾದ ಬಗ್ಗೆ ಇನ್ನೂ ಕೆಲ ಸಂಗತಿಗಳನ್ನು ಒತ್ತಿ ಹೇಳುವದು ಅವಶ್ಯ. ಮೊದಲನೆಯದಾಗಿ, ಸಿನೇಮಾ ಮಾಡುವದು ದೈಹಿಕವಾಗಿ ಶ್ರಮಪಡಿಸುವ ಕ್ರಿಯೆ, ನಾಟಕದಂತೆ. ಎರಡನೆಯದಾಗಿ ಸಿನೇಮಾ ಮಾಡಲು ಸಕ್ರಿಯರಾಗಿರುವ ದೊಡ್ಡ ತಂಡದ ಅವಶ್ಯಕತೆಯಿದೆ. ನಾಟಕಕ್ಕಿಂತ ದೊಡ್ಡ ತಂಡ ಬೇಕು. ಮೂರನೆಯದಾಗಿ, ಸಿನೇಮಾ ಮಾಡಲು ಕಡಿಮೆಯೇನಲ್ಲದ ಬಂಡವಾಳ ಬೇಕು. ನಾಟಕಕ್ಕಿಂತ ಹೆಚ್ಚು ಬೇಕು. ದೈಹಿಕ ಶ್ರಮದಲ್ಲಿ ಚಿತ್ರೀಕರಣ ಮಾಡಲು ಬೇಕಾಗುವ ಸಿದ್ಧತೆಗಳಿಂದ ಹಿಡಿದು, ಅವಶ್ಯವಿರುವ ಅಧಿಕಾರಿಗಳ ಸಹಮತಿ ಪಡೆಯುವದನ್ನೂ ಹಿಡಿದಿದ್ದೇನೆ. ಈ ಮೂರು ಅಂಶಗಳು ಸಿನೇಮಾ ಮೂಲಕ ಕಲಾತ್ಮಕತೆಯನ್ನು ಸಾಧಿಸಲು ದೊಡ್ಡ ಸವಾಲುಗಳಾಗುತ್ತವೆ ಎಂಬುದನ್ನು ನಾನು ಸಾಬೀತುಪಡಿಸಬೇಕಾಗಿಲ್ಲ ಎಂದುಕೊಂಡಿದ್ದೇನೆ. ಈ ಅಂಶಗಳನ್ನು ಗೌಣ ಮಾಡಿ ಬೆನೆಗಲ್-ರ ಬಗ್ಗೆ ನಿರ್ಧಾರಕ್ಕೆ ಬಂದರೆ ಅವರಿಗೆ ಅನ್ಯಾಯ ಎಂದು ಹೇಳಬೇಕು.

ಈಗ ಬೆನೆಗಲ್-ರ ವಿಷಯಕ್ಕೆ ಬರುತ್ತೇನೆ. ಅವರು ಹಿಂದೆ ಅತ್ಯುತ್ತಮ ಚಿತ್ರಗಳನ್ನೂ ಗಮನೀಯ ದೂರದರ್ಶನ ಧಾರಾವಾಹಿಗಳನ್ನು ಮಾಡಿರುವದು ನಿರ್ವಿವಾದ. ಆಗಿನ ಪರಿಸ್ಥಿತಿ ಹೀಗಿತ್ತು. ಬೆನೆಗಲ್ ಅವರಿಗೆ ಇನ್ನೂ ಹೆಚ್ಚು ವಯಸ್ಸಾಗಿರಲಿಲ್ಲ. ದೈಹಿಕ ಶ್ರಮ ಮಾಡುವ ಪರಿಸ್ಥಿತಿಯಲ್ಲಿದ್ದರು. ಎನ್.ಎಫ್.ಡಿ.ಸಿ. ಸುಮಾರು ಎಂಟರಿಂದ ಹದಿನಾರು ಲಕ್ಷ ರೂಪಾಯಿಗಳ ಹಣ ಕೊಡುತ್ತಿತ್ತು ಒಂದು ಚಿತ್ರ ಮಾಡಲು. ಬೆನೆಗಲ್ ಹೆಚ್ಚೇನೂ ಹೆಸರುವಾಸಿಯಾಗದ, ನಾಟಕಗಳಲ್ಲಿ ಪಳಗಿದೆ ಯುವ ನಟ ನಟಿಯರ ತಂಡ ಕಟ್ಟಿ, ಅವರಿಂದ ಚಿತ್ರಕ್ಕೆ ಬೇಕಾದ ಸಮಯ ಮತ್ತು ಗುಣಮಟ್ಟ ಎರಡನ್ನೂ ಪಡೆಯಲು ಬೇಕಾದ ಶ್ರಮ ಹಾಕುವ ಸ್ಥಿತಿಯಲ್ಲಿದ್ದರು. ಚಲನಚಿತ್ರದ ಉಳಿದ ವಿಭಾಗಗಳಲ್ಲಿ ಪಳಗಿದ, ಕಲಾತ್ಮಕ ಚಿತ್ರಗಳಲ್ಲಿ ಭಾಗವಹಿಸುವ ಇಚ್ಛೆಯಿರುವ ತಂತ್ರಜ್ಞರಿದ್ದರು. ಹೀಗಿದ್ದಾಗ ಸಿಕ್ಕ ಮಿತವಾದ ಹಣದಲ್ಲೂ ಚಿತ್ರ ಮಾಡುವದು ಸಾಧ್ಯವಿತ್ತು. ಅವರಲ್ಲದೆ, ಅನೇಕರು ಒಳ್ಳೆಯ ಚಿತ್ರಗಳನ್ನು ಮಾಡಿದರು.

ಇಂದಿನ ಪರಿಸ್ಥಿತಿಯನ್ನು ಗಮನಿಸಿ. ಸದ್ಯಕ್ಕೆ ಬೆನೆಗಲ್-ರ ವಯಸ್ಸು, ಅವರ ಇಂದಿನ ಧ್ಯೇಯಗಳನ್ನು ಮರೆಯೋಣ. ಎನ್.ಎಸ್.ಡಿ. ಯಂತಹ ನಾಟಕದ ಶಾಲೆಯಿಂದ ಹೊರಬರುವ ಪ್ರತಿಭಾನ್ವಿತರು ಸರಾಗವಾಗಿಯೇ ದೂರದರ್ಶನದ ಧಾರಾವಾಹಿಗಳಿಗೆ ಹೋಗುತ್ತಾರೆ. ಎನ್.ಎಸ್.ಡಿ.ಯಲ್ಲಿ ನಡೆಯುವ ರಾಜಕೀಯ ಹಸ್ತಕ್ಷೇಪಗಳನ್ನು ಗಮನಿಸಿದವರಿಗೆ ಈ ವಿದ್ಯಾರ್ಥಿಗಳು ಎಲ್ಲಾ ವಿಚಾರಧಾರಳಿಗೂ ನಿರ್ಲಿಪ್ತರಾಗಿದ್ದರೆ ಆಶ್ಚರ್ಯವಾಗುವದಿಲ್ಲ. ಹೀಗಾಗಿ ಪ್ರತಿಭಾನ್ವಿತ ನಟರ ತಂಡವನ್ನು ಒಟ್ಟುಹಾಕುವದು ದುಶ್ವಾರವಾಗಿದೆ. ಹೀಗೆಯೇ ಪುಣೆಯ ಸಿನೇಮಾ ಶಾಲೆಯ ವಿದ್ಯಾರ್ಥಿಗಳೂ ಮನೋರಂಜನಾ ಮಾಧ್ಯಮಕ್ಕೆ ಹೋಗುತ್ತಾರೆ. ನುರಿತ, ಸಮಯವಿರುವ, ಕಡಿಮೆ ದುಡ್ಡಿಗೆ ಕೆಲಸ ಮಾಡುವ ತಂತ್ರಜ್ಞರು ಕನಸಲ್ಲೇ ಸಿಗುವದು. ಇದೆಲ್ಲಾ ಕೇವಲ ಐ.ಟಿ. ಉತ್ತೇಜಿತ ಸಂಸ್ಕೃತಿಯ (ಅಂತಹ ಒಂದು ಸಾಮಾಜಿಕ ಘಟಕವಿದ್ದರೆ) ಪರಿಣಾಮ ಎಂದು ನಂಬಲು ಯಾವ ಆಧಾರವೂ ಇಲ್ಲ. ಕಾರವಾರದ ಕಗ್ಗು ಹಳ್ಳಿಗಳಿಗೆ ಹೋಗಿ ನೋಡಿ. ಬೆಂಗಳೂರಿಗೆ ಎಂದೂ ಹೋಗದ ಹಳ್ಳಿಗರು ಬೇರೆಯವರ ಮನೆಗೆ ಹೋಗಿ ಹಿಂದಿಯ ಧಾರವಾಹಿಗಳ ಕನ್ನಡ ಅನುರೂಪವನ್ನು ಶೃದ್ಧೆಯಿಂದ ನೋಡುತ್ತಾರೆ. ಭಾರತದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳ ಬಗ್ಗೆ ನಮಗೆ ಕಳವಳವಾಗುವದು ಸಹಜ. ಆಗಬೇಕು. ಆದರೆ ಅದಕ್ಕೆ ಸರಳವಾದ ಉತ್ತರವಿದೆ ಅಥವಾ ವಿವರಣೆಯಿದೆ ಎಂದು ನಂಬಿದರೆ, ಕಳವಳ ಪಡದೇ ಇರುವದಕ್ಕಿಂತಲೂ ಅಪಾಯಕಾರಿ.

ವಿಷಯಕ್ಕೆ ವಾಪಸಾಗೋಣ. ತಮಗೆ ಬೇಕಾದ ತಂಡವನ್ನು ಒಟ್ಟಿಹಾಕುವದು ಕಷ್ಟವಾಗಿದೆ. ಓಂ ಪುರಿ, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ ಇವರು ಎಳೆಯರಲ್ಲ. ಕೆಲವರು ಒಂದೇ ವಿಚಾರಧಾರೆಗೆ ಮಾರುಹೋದವರು. ಗೋವಿಂದ ನಿಹಲಾನಿಯವರ `ತಮಸ್'ನಲ್ಲಿ ಮಾಡಿದ ಪಾತ್ರವನ್ನು ಓಂ ಪುರಿ ಇವತ್ತು ಮಾಡಲು ಸಾಧ್ಯವೇ? ಅದಕ್ಕೆ ಬೇಕಾದ ದೈಹಿಕ ಪರಿಸ್ಥಿತಿಯಲ್ಲಿ ಇದ್ದಾರೆಯೆ? ಅವರಲ್ಲದಿದ್ದರೆ ತರುಣ ನಟರಲ್ಲಿ ತಮ್ಮ ಜೀವನದ ಒಂದೆರಡು ವರ್ಷಗಳನ್ನು ಅಂತಹ ಒಂದು ಧಾರಾವಾಹಿ ಮಾಡಲು ಪಣವಿಡುವವರು ಹೇಗೆ ಸಿಗಬೇಕು? ಹೀಗಿರುವಾಗ ನಾವು ಯಾವ ರೀತಿಯ ಚಿತ್ರಗಳನ್ನು ನಿರೀಕ್ಷಿಸಬಹುದು? ಬೆನೆಗಲ್ ಅವರು ಏಳು ವರ್ಷಗಳಾ ಹಿಂದೆ ಮಧ್ಯಪ್ರದೇಶದ ಬುಡಕಟ್ಟಿನ ಜಾಗದಲ್ಲಿ ಒಂದು ಚಿತ್ರ ಮಾಡಿದ್ದರು. ರಘುವೀರ್ ಯಾದವ್ ಕೂಡ ಇದ್ದರು ಆ ಚಿತ್ರದಲ್ಲಿ. ಸಾಮಾಜಿಕ ಕಾಳಜಿಯಿದ್ದೂ ಆ ಚಿತ್ರ ವಿಫಲವಾಗಿತ್ತು (ಜನಪ್ರಿಯತೆಯ ದೃಷ್ಟಿಯಿಂದಲ್ಲ) ಎಂಬುದನ್ನು ನೆನಪಿಡೋಣ. ಆ ಚಿತ್ರ ಮಾಡುವಾಗ ಅವರ ಅನುಭವದ ಬಗ್ಗೆ ನಮಗೇನೂ ತಿಳಿದಿಲ್ಲ. ಹಾಗಾಗಿ ಅವರು ಮೊದಲು ಮಾಡಿದ ಚಿತ್ರಗಳನ್ನು ಅವರ ಇಂದಿನ ಪರಿಸ್ಥಿತಿಯಲ್ಲಿ ನಿರೀಕ್ಷಿಸುವದು ಅಸಮ್ಮತ. ಅವರಲ್ಲಿ ಆ ಶಕ್ತಿಯಿಲ್ಲ ಎಂದಲ್ಲ. ಪರಿಸ್ಥಿತಿ ಹಾಗಿದೆ. ಅವರ `ಭಾರತ್ ಏಕ್ ಖೋಜ್'ನ ಶೀರ್ಷಿಕೆಯ ಸಂಗೀತದ ನೆನಪಿನಲ್ಲಿ, ವೇದಗಳ ಉದ್ಘೋಷಗಳನ್ನು ದೂರದರ್ಶನ ಮಾಧ್ಯಮದಲ್ಲಿ ಹಿಂದಿಯಲ್ಲಿ ಅಷ್ಟು ಸಮರ್ಪಕವಾಗಿ ನಮಗೆ ಕೊಟ್ಟಿದ್ದಕ್ಕೆ ಅವರಿಗೆ ಅಭಿನಂದಿಸುತ್ತಾ ಅವರ ಕಾರ್ಯಗಳಲ್ಲಿ ಶುಭ (ಅದು ಇಂಥದೇ ರೂಪದಲ್ಲಿರಲಿ ಎಂದು ಬಯಸದೆ) ಬಯಸೋಣ. ಸಂವೇದನಾಶೀಲರಾಗಲು ಪ್ರಯತ್ನಿಸೋಣ!

3 Comments:

Blogger Sudarshan said...

ಪ್ರಿಯ ವಿನಾಯಕ:

ನಿಮ್ಮ ವಿಶ್ಲೇಷಣೆಯನ್ನು ಒಪ್ಪುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳದೇ (ಹೊಸದನ್ನು ನಾವು ಹೇಗೆ ಸ್ವೀಕರಿಸುತ್ತಿದ್ದೇವೆ ಮತ್ತು ನಿರ್ವಹಿಸುತ್ತಿದ್ದೇವೆ ಎಂಬುದನ್ನು ಗಮನಿಸುವ ಮೂಲಕ) ಇನ್ನೊಬ್ಬರನ್ನು ವಿಮರ್ಶಿಸುವ ಸ್ಥಿತಿಯಲ್ಲಿ ನಾವು ಇಲ್ಲವೇ ಇಲ್ಲ. ಆ ರೀತಿ ಬೆನಗಲ್‍ರನ್ನು ವಿಮರ್ಶಿಸುವ ಉದ್ದೇಶವೂ ನನ್ನ ಟಿಪ್ಪಣಿಯಲ್ಲಿಲ್ಲ. ಹಾಗೇ ನೋಡಿದರೆ, ಅವರು ಈಗಲೂ ವ್ಯವಸ್ಥೆಯ ಜೊತೆ, ಸರ್ಕಾರದ ಜೊತೆ ಬೆರೆತು (ದೂರದರ್ಶನಕ್ಕಾಗಿ ಪ್ರಚಾರ ಚಿತ್ರಗಳ ಕುರಿತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಜೊತೆ ಚರ್ಚಿಸುತ್ತಾರಂತೆ!) ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಬಗ್ಗೆ ಕೇಳಿ, ನೋಡಿ ಮೆಚ್ಚುಗೆಯೇ ಆಯಿತು. ಹಾಗೆ ಅವರು ಬೆರೆಯದಿದ್ದರೇ ಎಲ್ಲರಿಗೂ ನಷ್ಟವೇ ಸರಿ. ಸದ್ಯದ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳದೇ ಸಂಪೂರ್ಣ ಹೊರಗೆ ನಿಂತು ವಿಮರ್ಶಿಸುವುದು ನಮ್ಮದೂ ಸಹ ಒಂದು ರೀತಿಯ ಬೇಜವಾಬ್ದಾರಿಯೂ ಆದೀತು. ಇದನ್ನು ನಾವೂ ಅರಿತು ಸಂವೇದನೆ ಎಂದರೆ ಏನು ಎಂಬುದನ್ನು ಕಂಡುಕೊಳ್ಳೋಣ.

ಆದರೆ ಒಂದು ಮಾತು: ಐ.ಟಿ. ಉತ್ತೇಜಿತ ಸಾಮಾಜಿಕ ಘಟಕವೊಂದು ಈಗ ಇದೆಯೋ ಇಲ್ಲವೋ ಎಂದು ಹೇಳುವುದು ಕಷ್ಟವಾದರೂ ೯೦ರ ದಶಕದಲ್ಲಂತೂ ಅದರಲ್ಲೂ ಕರ್ನಾಟಕದಲ್ಲಿ, ಮಧ್ಯಮ-ಮೇಲ್ಮಧ್ಯಮ ವರ್ಗದಲ್ಲಿ ಗಣನೀಯ ಸಂಖ್ಯೆಯಲ್ಲಿ ಇತ್ತು ಮತ್ತು ಈ ಐ.ಟಿ. ಎಂಬುದು ನಮ್ಮ ಹಲವಾರು ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಗೆ (ಜಾತೀಯತೆ, ಭ್ರಷ್ಟಾಚಾರ, ಅಸಮಾನತೆ) ಪರಿಹಾರ ಎಂಬ ಭ್ರಮೆಯೂ ೯೦ರ ದಶಕದಲ್ಲಿ ಕೊಂಚ ಬಲವಾಗಿಯೇ ಇತ್ತು ಎಂಬುದನ್ನು ಮರೆಯದಿರೋಣ. ಕೆಲವರು ಅದನ್ನು ನಿಜವೆಂದು ನಂಬಿದ್ದರು ಮತ್ತು ಇನ್ನು ಕೆಲವರಿಗೆ ಅದೊಂದು ಮಾತ್ರ ಸ್ವಹಿತಾಸಕ್ತಿಯ ತಂತ್ರವಾಗಿತ್ತು ಎಂಬುದು ನಮಗೆ ಇದೀಗ ಅರಿವಿಗೆ ಬರುತ್ತಿದೆ. ಐ.ಟಿ. ಯ ಒಟ್ಟೂ ಗುಣಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಚರ್ಚಿಸಲು ಇಲ್ಲಿ ಸ್ಥಳಾವಕಾಶವಿಲ್ಲವಾದ್ದರಿಂದ ಆ ಕುರಿತು ವಿಷದವಾಗಿ ಇನ್ನೆಲ್ಲಿಯಾದರೂ ಬರೆಯುತ್ತೇನೆ.

ನಿಮ್ಮ ಈ ಟಿಪ್ಪಣಿಗೆ ನನ್ನ ಬ್ಲಾಗ್ ಮೂಲಕ ಲಿಂಕ್ ಕೊಡಲು ಇಚ್ಛಿಸುತ್ತೇನೆ. ಅನುಮತಿ ಕೊಡಿ.

ಧನ್ಯವಾದಗಳು,
-ಸುದರ್ಶನ

12:00 am  
Blogger Vinayaka Pandit said...

ಖಂಡಿತ. ನೀವು ಲಿಂಕ್ ಕೊಡಿ.

ನೀವು ಏನನ್ನು ಐ.ಟಿ. ಉತ್ತೇಜಿತ ಎನ್ನುತ್ತೀರೋ ಅದು ಆರ್ಥಿಕ ಉದಾರೀಕರಣದಿಂದ ಉತ್ತೇಜಿತವಾದ ಘಟಕದ ಸಣ್ಣ ಅಂಗವಿರಬಹುದು. ನೀವು ಹೇಳುವಂತೆ ಅದು ಸ್ವಹಿತಾಸಕ್ತಿಯುಳ್ಳ ಘಟಕ ಎಂಬುದು ಕಳೆದ ಹತ್ತು ವರ್ಷಗಳಿಂದಾದರೂ ಬಹಳ ಜನರಿಗೆ ಮನವರಿಕೆಯಾಗಿದೆ. ನನಗೆ ಅನಿಸುವಂತೆ ಇಂದಿನ ಪರಿಸ್ಥಿತಿ ಕೇವಲ ಉದಾರೀಕರಣದ ಫಲವೆಂಬಂತೆ ವಿಶ್ಲೇಷಿಸುವಷ್ಟು ಸರಳವಾಗಿಲ್ಲದೆ, ಬಲು ಜಟಿಲವಾಗಿದೆ ಅನಿಸುತ್ತದೆ. ಹಿಂದಿನ ಶತಮಾನದ ಮೊದಲಲ್ಲಿ ಹೋಸೆ ಒರ್ಟೆಗಾ ಗ್ಯಾಸೆ ಎನ್ನುವವರು "ರೆವೋಲ್ಟ್ ಆಫ್ ದ ಮಾಸಸ್" ಎಂಬ ಪ್ರಬಂಧ ಬರೆದಿದ್ದರು. ವ್ಯಾಪಕವಾಗಿ ಬದಲಾಗುತ್ತಿದ್ದ ಯುರೋಪಿನ ಬಗ್ಗಾಗಿತ್ತು ಅದು. ಅಂದು ಅತಿ ಜಟಿಲವೆನಿಸಿದ ಸಮಸ್ಯೆಯನ್ನು ಹೊಸರೀತಿಯಲ್ಲಿ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಅವರ ಆ ಪುಸ್ತಕದ ಹಲವು ಭಾಗಗಳನ್ನು ಒಮ್ಮೊಮ್ಮೆ ಓದುತ್ತಿರುತ್ತೇನೆ. ಆ ಪ್ರಬಂಧ ನಮಗೆ ಮಾರ್ಗದರ್ಶಿಯಾಗಬಹುದು ಅನಿಸುತ್ತದೆ. ಅದರ ಪ್ರತಿ ಅಂತರ್ಜಾಲದಲ್ಲಿ ಇದೆ.

ನೀವು ಇಂದಿನ ಆಗುಹೋಗುಗಳನ್ನು ಅಥೈಸಿಸಲು ಮಾಡುವ ಪ್ರಯತ್ನ ನನಗಂತೂ ಬಹಳ ಉಪಯುಕ್ತ. ಈ ಪ್ರಯತ್ನಗಳು ಹತ್ತಾರು ಜನ ಕೂಡಿ ನಮ್ಮೊಳಗಿನ ಅರಿವೆಯನ್ನು ಹೆಚ್ಚಿಸಿದರೆ ಅದಕ್ಕಿಂತ ಬೇರೇನೂ ಬೇಡ.

ದೇಶಕಾಲದ ಈ ಸಂಚಿಕೆಯಲ್ಲಿರುವ ಅಕ್ಷರರ ಲೇಖನ ಓದಿದಿರಾ? ಏನನ್ನಿಸಿತು?

ಇಂತಿ ನಿಮ್ಮವ,
ವಿನಾಯಕ.

1:30 am  
Blogger Saamaanya Jeevi said...

ವಿನಾಯಕರೆ,

ಬೆನೆಗಲ್-ರ ಕುರಿತಾದ ನನ್ನ ಮತ್ತು ಸುದರ್ಶನರ ಕುರಿತ ಮಾತುಗಳಿಗೆ ತಾವು ಸುದೀರ್ಘವಾಗಿ ಪ್ರತಿಕ್ರಯಿಸಿದ್ದೀರಿ. ತಾವು ಸಾಂವೇದನೆಯೆಂದರೇನು ಎನ್ನುವುದರ ಕುರಿತು ಚಿಂತಿಸಿದ್ದೀರಿ. ಸಿನೆಮಾದ ಕಥನಮಾರ್ಗದ ಕುರಿತು, ಆ ಮಾಧ್ಯಮದ ಕಷ್ಟಗಳ ಕುರಿತು, ಇತ್ತೀಚಿನ ನಟ-ನಟಿಯರ ಧೋರಣೆಗಳ ಕುರಿತು, ಬೆನೆಗಲ್-ರ ಇಳಿ ವಯಸ್ಸಿನ ಕುರಿತೂ, ಅವರು ಜನರನ್ನು ತಲುಪಬೇಕಾಗಿರುವುದರ ಕುರಿತೂ, ಭಾರತದ ಗ್ರಾಮ್ಯ ಜೀವನದಲ್ಲೂ ಇತ್ತೀಚೆಗೆ ಆಗಿರುವ ಬದಲಾವಣೆಗಳ ಕುರಿತು ಬರೆದಿದ್ದೀರಿ. ಇದೆಲ್ಲದಕ್ಕೆ ನನ್ನ ಪೂರ್ತಿಯಾದ ಸಹಮತಿವಿದೆ.

ಆದ್ದರಿಂದಲೇ ನಿಮ್ಮ ಬರಹ ನನ್ನ ಲೇಖನಕ್ಕೆ ಪ್ರತಿಕ್ರಿಯೆ ಎನ್ನುವುದು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ.

ಅಷ್ಟಲ್ಲದೇ, ಕೇವಲ ಸಾಮಾಜಿಕ ಕಳಕಳಿ, ಶಿಕ್ಷಣ ಎನ್ನುವ ಅಂಶದಿಂದ ನನ್ನ ಬರಹ ರೂಪಿತವಾಗಿರಲಿಲ್ಲ. ಅತ್ಯುತ್ತಮ ಕಲಾಕೃತಿ ತನ್ನಿಂದ ತಾನೇ ಸಾಮಾಜಿಕ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ ಎಂದು ನಂಬಿರುವವನು ನಾನು. ಬೆನೆಗಲ್-ರ ಹಿಂದಿನ ಕೃತಿಗಳನ್ನು ಮೆಚ್ಚಿದ್ದು ಅದರ ಕಲಾತ್ಮಕ ಅಂಶಗಳಿಂದಲೇ ಹೊರತು ಮತ್ತೇನಲ್ಲ, ಯಾತ್ರಾ, ಭಾರತ್ ಏಕ್ ಖೋಜ್-ಗಳನ್ನು ಸೇರಿಸಿ ಹೇಳುತ್ತಿದ್ದೇನೆ.

ಅಲ್ಲದೇ ನನ್ನ ಬರಹದಲ್ಲಿ ನನ್ನ ಅಸಮಾಧಾನವಿರುವುದು ಇತ್ತೀಚಿಗೆ ಪತ್ರಿಕೆಗಳು ರೂಪಿಸುತ್ತಿರುವ ಬೆನೆಗಲ್ ಎನ್ನುವುದನ್ನು ಒತ್ತಿ ಹೇಳಿದ್ದೇನೆ. ಅದರ ಆಶಯ ಸ್ಪಷ್ಟವಾಗಿದೆ ಎಂದು ನಂಬಿದ್ದೇನೆ. ಸುದರ್ಶನರ ಬರಹ ನನ್ನ ಅಸಮಾಧಾನವನ್ನು ಕಡಿಮೆಗೊಳಿಸಿದೆ ಎಂದೂ ಹೇಳಿದ್ದೇನೆ.

ಸಿನೆಮಾ ಕಥನದ ಮಾಧ್ಯಮವೋ ಅಲ್ಲವೋ ಎನ್ನುವುದನ್ನು ನಾನಿಲ್ಲಿ ಚರ್ಚಿಸಲಿಚ್ಛಿಸುವುದಿಲ್ಲ. ಅದನ್ನು ಸ್ವತಂತ್ರವಾಗಿ ಕೈಗೆತ್ತಿಕೊಳ್ಳಬಹುದು. ಆದರೆ, ಬೆನೆಗಲ್ ಹೆಚ್ಚಾಗಿ ಈ ದಾರಿಯಲ್ಲೇ ನಡೆದದ್ದು ನಿಜ. ಅವರ ಎಲ್ಲಾ ಅತ್ಯುತ್ತಮ ಚಿತ್ರಗಳೂ ಇದೇ ದಾರಿಯಲ್ಲಿದೆ. ಈ ದಿಸೆಯಲ್ಲಿ ಭಿನ್ನವಾದ ಚಿತ್ರವೆಂದರೆ 'ಸೂರಜ್ ಕಾ ಸಾಥ್ವಾಂ ಘೋಡಾ'. ಅದನ್ನು ಕೂಡಾ ನಾನು ಮೆಚ್ಚಿದ್ದೇನೆ. ಅಷ್ಟಲ್ಲದೇ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ಕಳಪೆಯಾದ ೯೦-ರ ದಶಕದ ಉತ್ತರಾರ್ಧದಲ್ಲಿ ಬಂದ ಚಿತ್ರಗಳೂ ಸಹ ಇದೇ ಮಾರ್ಗದಲ್ಲಿದ್ದವು. ಆದ್ದರಿಂದ ಕಥನ ಮಾರ್ಗ ಎನ್ನುವುದು ಮಾನದಂಡವಾಗಿ ನನ್ನ ಅಭಿಪ್ರಾಯಗಳು ಹೊರಬಂದಿಲ್ಲ. ಬೆನೆಗಲ್-ರನ್ನು ಕಲಾಕಾರನ್ನಾಗಿ ಮಾತ್ರ ವಿಮರ್ಶಿಸಬೇಕೆಂದು ಹೇಳಿದ್ದೀರಿ. ಅದನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆದ್ದರಿಂದ ಅಂತಹ ಕಳಕಳಿಯನ್ನು ಪ್ರಯತ್ನಪೂರ್ವಕವಾಗಿ ಹುಡುಕದೇ ಕಲಾತ್ಮಕ ಮಾನದಂಡಗಳಿಂದ ಒಂದು ಕೃತಿಯನ್ನು ವಿಮರ್ಶಿಸುವುದೇ ಆರೋಗ್ಯಕರವಾದ್ದು. ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತಿವಿದೆ.

ಸಿನೆಮಾ ಮಾಡುವುದರ ಕಷ್ಟದ ಕುರಿತಾಗಿ ಹೇಳಿದ್ದೀರಿ. ಸರಿಯಾದ ವಿಷಯವೇ. ತಮ್ಮ ಜೀವನದ ಕಡೆಯ ವರ್ಷಗಳಲ್ಲಿ ರೇ-ರವರು ಹೊರಾಂಗಣ ಚಿತ್ರೀಕರಣ ಮಾಡುವುದು ಕಷ್ಟವಾಗಿ ಸ್ಟುಡಿಯೋಕ್ಕೇ ಸೀಮಿತರಾಗಿದ್ದರು. ಅಷ್ಟಲ್ಲದೇ ಹಿಂದೆ ಕಾಣಿಸದಿದ್ದ ಒಂದು ಬಗೆಯ ಸಿಟ್ಟು, ನಿಸ್ಸಹಾಯಕತೆ ಅವರಲ್ಲಿತ್ತು ಎಂದು ಕೇಳಿದ್ದೇನೆ. ಆಗ ಅವರು ಸೃಷ್ಟಿಸಿದ 'ಗಣಶತ್ರು', 'ಶಾಖಾಪ್ರಶಾಖ' ಮುಂತಾದ ಚಿತ್ರಗಳನ್ನು ವಿಮರ್ಶಕರು ಯಾವುದೇ ಮುಲಾಜಿಲ್ಲದೇ, ಮಾರ್ಜಿನ್ ಕೊಡಾದೇ ಕೆಟ್ಟ ಕೃತಿಗಳೆಂದು ಟೀಕಿಸಿದರು. ಆದರೆ, ಅದೇ ರೇ ಉತ್ತಮವಾದ 'ಆಗಂತುಕ್' ಮಾಡಿದಾಗ ಎಲ್ಲರೂ ಅವರನ್ನು ಮೆಚ್ಚಿದರು. ಇಲ್ಲಿ ಕಲಾತ್ಮಕವಾದ ಮಾನದಂಡಗಳೇ ವಿಜೃಂಭಿಸಿದವು. ಇಲ್ಲಿ ನಾನು ಅಂತಹದ್ದೇ ಮಾನದಂಡಗಳನ್ನು ಬಳಸಲು ಯತ್ನಿಸಿದ್ದೇನೆ. 'ಯಾತ್ರಾ'-ವನ್ನು ನಾನು ಹೆಸರಿಸಿದ್ದು ಅದು ಸಮುದಾಯವನ್ನು ಅದೆಷ್ಟು ಚೆನ್ನಾಗಿ ಪ್ರತಿನಿಧಿಸುತ್ತಿತ್ತು ಎನ್ನುವ ಕಾರಣಕ್ಕಾಗಿ. ಅದೊಂದು ಅತ್ಯುತ್ತಮ ಕನ್ನಡಿಯಾಗಿತ್ತು ಎನ್ನುವ ಕಾರಣಕ್ಕಾಗಿ.

ಇಂದಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಹೇಳಿದ್ದೀರಿ. ನೀವು ಬೆನೆಗಲ್-ರ ಹಿಂದಿನ ಚಿತ್ರಗಳನ್ನು ಗಮನಿಸಿದರೆ ಅವು ಕೂಡಾ ವ್ಯಾಪಾರೀ ದೃಷ್ಟಿಯಿಂದ ಅಷ್ಟೇನೂ ಯಶಸ್ವಿಯಾಗಿಲ್ಲ. ಕೆಲವೇ ನಗರಗಳಲ್ಲಿ ಸ್ವಲ್ಪ ಮಟ್ಟಿಗೆ ಹಣ ಮಾಡಿವೆ. ಒಂದೋ ಪ್ರಶಸ್ತಿ ಇಲ್ಲವೋ ಚಲನಚಿತ್ರೋತ್ಸವಗಳಲ್ಲಿ ಅಷ್ಟೇ ಹಣ ಮಾಡಿವೆ. ಆದ್ದರಿಂದ, ಹಳ್ಳಿಗಳಲ್ಲಾಗಿರಬಹುದಾದ ಬದಲಾವಣೆ ಅವರ ಚಿತ್ರಗಳ ವ್ಯಾಪಾರೀ ಯಶಸ್ಸಿಗೆ ಏನು ವ್ಯತ್ಯಾಸವನ್ನೂ ಮಾಡಿರಲಾರದೆಂದುಕೊಳ್ಳುತ್ತೇನೆ. ನಗರಗಳಲ್ಲಿ ಅವರಿಗೆ ಸ್ವಲ್ಪ ಮಟ್ಟಿಗಿನ ಹಿನ್ನಡೆಯಾಗಿರುವುದು ನಿಜ.

ನನ್ನ ಪ್ರತಿಕ್ರಿಯೆ ಹೆಚ್ಚಾಗಿ ಅವರ ಇತ್ತೀಚಿನ ಸಿನೆಮಾಗಳು ಹೆಚ್ಚು ಕಲಾತ್ಮಕವಾಗಿಲ್ಲದಿರುವುದು ಮತ್ತು ಈ ಕಾಲದ ಮುಖ್ಯವಾಹಿನಿಯ ಸುಳಿಗೆ ಸಿಕ್ಕೇ ಹಾಗಾಗಿರಬಹುದಾದ ಸಾಧ್ಯತೆಯ ಕುರಿತಾದ ವಿಷಾದ. ಅವರ ಇತ್ತೀಚಿನ ಚಿತ್ರಗಳಲ್ಲಿ ಒಂದು ಬಗೆಯ celebration of a certain heroism without critical analysis ಕಾಣುವುದಿಲ್ಲವೇ? ಅದಕ್ಕೂ 'ಭೂಮಿಕಾ'ದ ಚಿತ್ರಣಕ್ಕೂ 'ಸರದಾರೀ ಬೇಗುಂ'-ಗೂ, ಅವರ ಮತ್ತೊಂದು ಚಿತ್ರ (ಕರಿಷ್ಮಾ ಕಪೂರ್ ಇದ್ದಾರೆ, ಹೆಸರು ಮರೆತಿದ್ದೇನೆ) ಇವುಗಳಿಗೆ ಇರುವ ವ್ಯತ್ಯಾಸ ಕಾಣುವುದಿಲ್ಲವೇ? ಯಾವುದೋ ಒಂದು ಸಂದರ್ಶನದಲ್ಲಿ 'ಬೋಸ್-ರಿಗೆ ಅನ್ಯಾಯವಾಗಿದೆ He has not got his due ಮುಂತಾದ ಮಾತುಗಳನ್ನಾಡಿದ್ದಾರೆ ಬೆನೆಗಲ್. ಈ ಮಾನದಂಡವಿಟ್ಟುಕೊಂಡರೆ ಯಾರ್ಯಾರ ಬಗ್ಗೆ ಚಿತ್ರ ತೆಗೆಯಬೇಕಾಗುತ್ತೋ. ಇದಕ್ಕೂ ಅವರು Making of the Mahatma ತೆಗೆದಾಗಿನ ಅವರ ಮಾತುಗಳಿಗೂ ಎಲ್ಲಿಗೆಲ್ಲಿಯ ವ್ಯತ್ಯಾಸ. (ಸಾಮಾಜಿಕ ಜವಾಬ್ದಾರಿಯೇ ಮಾನದಂಡವಾಗಿದ್ದರೆ 'ಬೋಸ್' ಚಿತ್ರ ನೋಡದೇಯೂ ಅದನ್ನು ಮೆಚ್ಚಿಕೊಳ್ಳುತ್ತಿದ್ದೆ).

ಬಾಲಿವುಡ್-ನಲ್ಲಿ ಇಂದು ೭೦-ರ ದಶಕದ ಫ಼ೇವರೇಟ್ ನಿರ್ದೇಶಕರೆಂದರೆ ಬೆನೆಗಲ್-ರವರೇ. ಅದರ ಪರಿಣಾಮ ಅವರ ಮೇಲಾಗಿರುವ ಸಾಧ್ಯತೆಯಿದೆಲ್ಲವೇ?

ನನ್ನ ಕಾಳಜಿ ಈ ಕುರಿತಾಗಿತ್ತು, ಅಷ್ಟೇ. ಮತ್ತೆ ಇದು ಅಸಮಾಧಾನ ತೋಡಿಕೊಂಡಂತೆ ಕಾಣಿಸದೇ ಇದ್ದರೆ ಒಳ್ಳೆಯದು. ಇಲ್ಲವಾದರೆ ಮತ್ತೆ ಎಲ್ಲರ ಕ್ಷಮೆಯಿರಲಿ. ನನ್ನ ಹಿಂದಿನ ಪ್ರತಿಕ್ರಿಯೆಯನ್ನು ಮತ್ತೆ ಓದಿದಾಗ ಅದರಲ್ಲಿ ಒಂದು ಬಗೆಯ ಅಹಂಕಾರ ನನ್ನ ಗಮನಕ್ಕೆ ಬಂದಿತು. ಅದಕ್ಕಾಗಿ ವಿಷಾದಿಸುತ್ತೇನೆ. ಈ ಲೇಖನದಲ್ಲಿ ಹಾಗಾಗಿಲ್ಲದಿದ್ದರೆ ಒಳ್ಳೆಯದು. ಒಟ್ಟು ನಾನೇ ತಪ್ಪಾಗಿ ಬೆನೆಗಲ್ ಹಿಂದಿನಷ್ಟೇ ಸಂವೇದನಾಶೀಲರಾಗಿದ್ದರೆ ಅದು ಮತ್ತೂ ಒಳಿತು.

ಇಂತಿ
ಶಿವು

10:34 pm  

Post a Comment

<< Home