ಅಗಸೆಯ ಅಂಗಳ

ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ!

ಮೊದಲ ಮಾತು

ನಾನು ಮೂಲತಹ ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ಗ್ರಾಮದವನು. ನನ್ನ ಅಪ್ಪ ಹುಟ್ಟಿ ಬೆಳೆದದ್ದು ಅಲ್ಲೇ. ನಾನು ಕಾಲೇಜು ಸೇರುವವರೆಗೆ ಪ್ರತಿವರ್ಷವೂ ರಜೆಗಳ ಎರಡು ಮೂರು ತಿಂಗಳುಗಳನ್ನು ಅಘನಾಶಿನಿಯಲ್ಲೇ ಕಳೆಯುತ್ತಿದ್ದೆ. ಅಪ್ಪನಿಗೆ ವರ್ಗವಾಗಿ ನಾವು ಊರಿಂದ ಊರಿಗೆ ಹೋಗುತ್ತಿದ್ದಾಗ, ನಾನು ಹೊಸ ಊರಿನ ಬಗ್ಗೆ ಅಪ್ಪನಿಂದ ಮೊದಲು ತಿಳಿದುಕೊಳ್ಳುತ್ತಿದ್ದ ಮಾಹಿತಿಯೆಂದರೆ ಅಲ್ಲಿಂದ ಕುಮಟೆಗೆ ಹೋಗುವುದು ಹೇಗೆ ಎಂಬುದೇ. ಸಿರ್ಸಿಯ ಮೂಲಕ ಹೋಗಬೇಕೊ ಅಥವ ಸಾಗರದ ಮೂಲಕವೋ? ದಾರಿಯಲ್ಲಿ ದಾವಣಗೆರೆ, ಹಾವೇರಿಗಳು ಸಿಗುತ್ತವೆಯೋ ಅಥವಾ ಶಿವಮೊಗ್ಗವೋ ಇತ್ಯಾದಿ. ಕುಮಟೆಯ ಮುಂದಿಂದ ಅಘನಾಶಿನಿಯ ಹಾದಿಯ ಪ್ರತಿ ಮನೇಯೂ ನನ್ನ ಮನಸ್ಸಿನಲ್ಲಿ ಹಸಿರಾಗಿರುತ್ತಿತ್ತು. ಈಗಲೂ ಇದೆ. ಸಣ್ಣ ಪುಟ್ಟ ಬದಲಾವಣೆಗಳು ಕೂಡ ತಕ್ಷಣ ಎದ್ದು ಕಾಣುತ್ತವೆ. ಎಷ್ಟೆಂದರೂ ಚಿತ್ರಗಿ, ಮದ್ಗುಣಿ, ಹೊಲನಗೆದ್ದೆ, ಬಾಡ, ಕಾಗಾಲ ಇವೆಲ್ಲ ಸಣ್ಣ ಹಳ್ಳಿಗಳು. ಕುಮಟೆಯಿಂದ ಅಘನಾಶಿನಿಯ ದೂರ ಕೇವಲ ಹದಿನಾಲ್ಕು ಕಿಲೋಮೀಟರುಗಳು. ಹೀಗೆ ಅನೇಕ ರೀತಿಗಳಲ್ಲಿ ನಾನು ಜಗತ್ತನ್ನು ಅಘನಾಶಿನಿಯ ತುಲನೆಯಲ್ಲೇ ನೋಡುತ್ತಿದ್ದೆ. ಧಾರವಾಡದಲ್ಲಿ ಇಷ್ಟು ಮಳೆಯಾದರೆ ಕುಮಟೆಯಲ್ಲಿ ಎಷ್ಟಾಗುತ್ತದೆ? ನಮ್ಮ ಬದಿ ಬತ್ತ ಬೆಳೆಯುವಂತೆ ಚಿತ್ರದುರ್ಗದಲ್ಲಿ ಏನು ಬೆಳೆಯುತ್ತಾರೆ? ಶಿವಮೊಗ್ಗೆಯ ಮಲೆನಾಡಿಗೂ ನಮ್ಮೂರ ಕರಾವಳಿಗೂ ಏನು ವ್ಯತ್ಯಾಸ ಇತ್ಯಾದಿ. ಅಪ್ಪ ಯಾವಾಗಲೂ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. ಕಾಲಕ್ರಮೇಣ ನಾನೇ ತಿಳಿದುಕೊಳ್ಳಲು ಕಲಿತೆ. ಒಟ್ಟಿನಲ್ಲಿ ನಾನು ಜಗತ್ತನ್ನು ನೋಡಲು ಕಲಿತದ್ದು ನಮ್ಮೂರಿನ ಹಿನ್ನೆಲೆಯಲ್ಲಿ. ಅಲ್ಲಿ ಬೆಳೆಯದೇ, ಯಾವಗಲೂ ಬೇರೆ ಊರುಗಳಲ್ಲೇ ಇದ್ದರೂ ಕೂಡ. ನಮ್ಮೂರಲ್ಲೇ ಸಮುದ್ರವಿರುವುದರಿಂದ ಅದೇ ಜಗತ್ತಿನ ಕೊನೆಯೇನೊ ಅನಿಸುತ್ತದೆ! ಆ ದಡದಲ್ಲಿ ತದಡಿ ಎಂಬ ಮೀನುಗಾರರ ಹಳ್ಳಿ ಕಂಡರೂ ಕೂಡ!! ಕಾವ್ಯಾತ್ಮಕವಾಗಿ ಕುಮಟೆಯ ಮುಂದಿರುವುದೆಲ್ಲಾ ನಮ್ಮನೆಯ ಅಂಗಳ ಎನ್ನಬಹುದು. ಹೀಗೆ ಬೆಳೆದಿರುವ ದೃಷ್ಟಿಕೋನದ ಅನಿಸಿಕೆಗಳನ್ನು ಇಲ್ಲಿಡಬಹುದು. ಅದಕ್ಕೇ ಈ ತಾಣಕ್ಕೆ ಅಗಸೆಯ ಅಂಗಳ ಎಂದು ಹೆಸರಿಟ್ಟಿದ್ದೇನೆ.